ಕಲೆ ಎನ್ನುವುದು ದೊಡ್ಡ ಶಕ್ತಿ. ವಸತಿ ನಿಲಯದ ವಿದ್ಯಾರ್ಥಿಗಳು ಕೇವಲ ವಿದ್ಯಾಭ್ಯಾಸದಲ್ಲಿ ಮಾತ್ರವಲ್ಲ ಕಲೆ, ಸಂಸ್ಕೃತಿ, ಕ್ರೀಡೆ ಸೇರಿದಂತೆ ಸರ್ವಾಂಗೀಣವಾಗಿ ಬೆಳವಣಿಗೆಯಾಗಬೇಕು ಎಂದು ವಿಜಯಪುರ ಜಿಲ್ಲೆ ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ಮಹೇಶ ಪೋತದಾರ ಹೇಳಿದರು.
ನಗರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡ ಉಪಯೋಜನೆಯಡಿ ಡಾ. ಬಿ ಆರ್ ಅಂಬೇಡ್ಕರ್ ಸರಕಾರಿ ಮೆಟ್ರಿಕ್ ಪೂರ್ವ ಬಾಲಕಿಯರ ವಸತಿ ನಿಲಯದಲ್ಲಿ ಹಮ್ಮಿಕೊಂಡಿದ್ದ ಕಲಾ ತರಬೇತಿ ಸಮಾರೋಪ ಸಮಾರಂಭವನ್ನುದ್ದೇಶಿಸಿ ಅವರು ಮಾತನಾಡಿದರು.
ಕರ್ನಾಟಕ ಲಂಬಾಣಿ ಸಂಸ್ಕೃತಿ ಭಾಷಾ ಅಕಾಡೆಮಿ ಸದಸ್ಯ ಆರ್ ಬಿ ನಾಯ್ಕ ಮಾತನಾಡಿ, “ನೃತ್ಯ ಕಲೆಗೆ ಜಗತ್ತಿನ ಎಲ್ಲ ಕಡೆಗೆ ಸ್ಥಾನಮಾನವಿದೆ. ನಾವು ಸಹ ಬೆಂಗಳೂರಿನ ಮಹಾರಾಣಿ ಕಾಲೇಜಿನ ವಿದ್ಯಾರ್ಥಿನಿಯರಿಗೆ ಲಂಬಾಣಿ ನೃತ್ಯದ ತರಬೇತಿ ನೀಡಿದ್ದು, ಆ ತಂಡವು ಅಮೇರಿಕದಲ್ಲಿ ನಡೆದ ‘ಅಕ್ಕಬಳಗ’ ಕಾರ್ಯಕ್ರಮಕ್ಕೆ ಕರ್ನಾಟಕದಿಂದ ಆಯ್ಕೆಯಾಗಿತ್ತು. ತಮ್ಮ ಕಲಾ ಸೇವೆಯನ್ನು ಗುರುತಿಸಿ ರಾಜ್ಯ ಸರ್ಕಾರವು ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಿದೆ. ನೀವೂ ಹಾಗೆ ಕಲೆಯಲ್ಲಿ ಮುಂದೆ ಬರಬೇಕು” ಎಂದರು.
ಕರ್ನಾಟಕ ಲಂಬಾಣಿ ಸಂಸ್ಕೃತಿ ಭಾಷಾ ಆಕಾಡೆಮಿ ಸದಸ್ಯ ಸುರೇಖಾ ಲಮಾಣಿ ಮಾತನಾಡಿ, “ದೇವನೂರು ಮಹಾದೇವಪ್ಪ ಅವರು ಹೇಳಿದಂತೆ ʼಭೂಮಿಗೆ ಬಿದ್ದ ಬೀಜ, ಎದೆಗೆ ಬಿದ್ದ ಅಕ್ಷರ ಯಾವತ್ತಿಗೂ ಫಲ ಕೊಡುತ್ತದೆʼ. ಅಕ್ಷರದ ಜೊತೆ ಜೊತೆಗೆ ಮಕ್ಕಳಿಗೆ ನೃತ್ಯದ ತರಬೇತಿಯನ್ನು ನೀಡಿದ್ದು, ಈ ತರಬೇತಿಯನ್ನು ಜೀವನದಲ್ಲಿ ಮುಂದುವರೆಸಿಕೊಂಡು ಉನ್ನತ ಮಟ್ಟದಲ್ಲಿ ಬೆಳೆಯುವಂತೆ” ವಿದ್ಯಾರ್ಥಿಗಳಿಗೆ ಕಿವಿಮಾತನ್ನು ಹೇಳಿದರು.
ಇದನ್ನೂ ಓದಿ: ವಿಜಯಪುರ | ಕಾರ್ಯನಿರತ ಪತ್ರಕರ್ತರ ಸಂಘದ ಸದಸ್ಯತ್ವ ನವೀಕರಣಕ್ಕೆ ಅರ್ಜಿ ಆಹ್ವಾನ
ಈ ಕಾರ್ಯಕ್ರಮದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಸಂತೋಷ ಭೋವಿ, ಮೋಹನ ಕಟ್ಟಿಮನಿ, ಶಿರೀನ್ ಕೌಸರ್, ಮೀನಾಕ್ಷಿ ಮಠಪತಿ, ವಸತಿ ನಿಲಯದ ಮೇಲ್ವಿಚಾರಕರು, ವಿಜಯಪುರ ನೃತ್ಯ ತರಬೇತಿದಾರರಾದ ರಂಗನಾಥ ಬತ್ತಾಸಿ, ಕು.ರೋಹಿಣಿ ತಳವಾರ, ಕು.ಪೂರ್ವಿ ತಳವಾರ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಿಬ್ಬಂದಿಗಳು ಹಾಗೂ ವಸತಿ ನಿಲಯದ ಸಿಬ್ಬಂದಿಗಳು ಉಪಸ್ಥಿತರಿದ್ದರು.





