2027ರ ಭಾರತೀಯ ಜನಗಣತಿ ಎರಡು ಹಂತದಲ್ಲಿ ನಡೆಯಲಿದ್ದು, ಹಂತ 1ರಲ್ಲಿ ಮನೆಪಟ್ಟಿ ಮತ್ತು ಮನೆ ಗಣತಿ ನಡೆಯಲಿದೆ. 2026ರ ಏಪ್ರಿಲ್ 1 ರಿಂದ 15 ದಿನಗಳವರೆಗೆ ಸ್ವಯಂ ಗಣತಿ ಅವಧಿ ನಿಗದಿಪಡಿಸಲಾಗಿದೆ. ಮೊದಲ ಬಾರಿಗೆ ಸ್ವಯಂ ಗಣತಿಗೆ ಡಿಜಿಟಲ್ ವ್ಯವಸ್ಥೆ ತರಲಾಗಿದ್ದು, ಈ ವ್ಯವಸ್ಥೆ ಅನುಷ್ಠಾನಕ್ಕೆ ಅಗತ್ಯ ಸಿದ್ಧತೆಗಳನ್ನು ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿಗಳಾದ ಡಾ. ಆನಂದ ಕೆ. ಅಧಿಕಾರಿಗಳಿಗೆ ಸೂಚಿಸಿದರು.
ಭಾರತ ಜನಗಣತಿ 2027ರ ನಿಮಿತ್ತ ಸೋಮವಾರ ವಿಜಯಪುರ ಜಿಪಂ ಸಭಾಂಗಣದಲ್ಲಿ ಜಿಲ್ಲಾ ಅಧಿಕಾರಿಗಳು, ಚಾರ್ಜ್ ಅಧಿಕಾರಿಗಳು, ಇತರೆ ಸಿಬ್ಬಂದಿಗೆ ಹಮ್ಮಿಕೊಂಡಿದ್ದ ಮೂರು ದಿನಗಳ ತರಬೇತಿ ಕಾರ್ಯಾಗಾರದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. “ಜನಗಣತಿ ಸಮರ್ಪಕವಾಗಿ ನಡೆಸಲು ಜಿಲ್ಲಾಡಳಿತ ಮುಂಚೆಯೇ ಎಲ್ಲ ರೀತಿಯ ಸಿದ್ಧತೆ ಕೈಗೊಳ್ಳುವ ನಿಟ್ಟಿನಲ್ಲಿ ಮೂರು ದಿನಗಳ ಈ ತರಬೇತಿ ಶಿಬಿರ ಆಯೋಜಿಸಿದೆ. ಹಾಗಾಗಿ ಈ ಕಾರ್ಯದಲ್ಲಿ ಯಾವುದೇ ಗೊಂದಲಗಳಿಗೆ ಅವಕಾಶ ನೀಡದಂತೆ ಅಧಿಕಾರಿಗಳು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು” ಎಂದರು.
ಇದು ಸಂಪೂರ್ಣ ಡಿಜಿಟಲ್ ರೂಪದಲ್ಲಿ ನಡೆಯಲಿದೆ. ಈ ಪ್ರಕ್ರಿಯೆಗೆ ಅಗತ್ಯವಿರುವ ಎಲ್ಲ ಮುನ್ನೆಚ್ಚರಿಕೆ ವಹಿಸಿ ತರಬೇತಿ ಸದುಪಯೋಗಪಡಿಸಿಕೊಳ್ಳಬೇಕು ಎಂದರು. 2026ರ ಏ.16ರಿಂದ ಮೇ 16ರವರೆಗೆ ಭಾರತದ ಜನಗಣತಿ- 2027ರ ನಿಮಿತ್ತ ಮನೆಪಟ್ಟಿ ಕ್ಷೇತ್ರ ಕಾರ್ಯ ನಡೆಯಲಿದೆ. ಜನಗಣತಿ ಸಲುವಾಗಿ ಬ್ಲಾಕ್ ರಚಿಸಲಾಗುತ್ತಿದ್ದು.150 ರಿಂದ 200 ಮನೆಗಳು ಅಥವಾ 700 ರಿಂದ 800ಜನಸಂಖ್ಯೆಗೆ ಓರ್ವ ಗಣತಿದಾರರನ್ನು ಮತ್ತು ಪ್ರತಿ ಆರು ಜನ ಗಣತಿದಾರರಿಗೆ ಓರ್ವ ಮೇಲ್ವಿಚಾರಕರನ್ನು ನೇಮಿಸಲಾಗುವುದು ಎಂದು ಹೇಳಿದರು.
ಇದನ್ನೂ ಓದಿ: ವಿಜಯಪುರ | ಕಾರ್ಯನಿರತ ಪತ್ರಕರ್ತರ ಸಂಘದ ಸದಸ್ಯತ್ವ ನವೀಕರಣಕ್ಕೆ ಅರ್ಜಿ ಆಹ್ವಾನ
ಎರಡನೇ ಹಂತವಾಗಿ ಫೆಬ್ರವರಿ 2027ರಲ್ಲಿ ಜನಸಂಖ್ಯಾ ಗಣತಿ ಕಾರ್ಯ ನಡೆಯಲಿದೆ ಎಂದು ಅವರು ಹೇಳಿದರು. ಈ ಗಣತಿ ಕಾರ್ಯ ಡಿಜಿಟಲ್ ಆಗಿದ್ದು, ಮೊಬೈಲ್ ಆಪ್ ನಲ್ಲಿ ನಿಗದಿಪಡಿಸಿದ ಪ್ರಶ್ನಾವಳಿ ಮೂಲಕ ದತ್ತಾಂಶ ಸಂಗ್ರಹಿಸುವುದು. ಈ ಜನಗಣತಿ ವಿಶೇಷವಾಗಿದೆ. ಡಿಜಿಟಲ್ ಮೋಡ್ ನಡೆಯುವ ಪ್ರಥಮ ಜನಗಣತಿಯಾಗಿದೆ. ಗಣತಿದಾರರ ಸ್ಮಾರ್ಟ್ ಫೋನ್ ಮೀಸಲಾದ ಮೊಬೈಲ್ ಆಪ್ ಮೂಲಕ ಮಾಹಿತಿ ಸಂಗ್ರಹಿಸಲಾಗುತ್ತಿದೆ ಎಂದರು. ಆರಂಭದಿಂದ ಮುಕ್ತಾಯದವರೆಗೆ ಜನಗಣತಿ ಮೇಲ್ವಿಚಾರಣಾ ಮತ್ತು ನಿರ್ವಹಣೆ ವ್ಯವಸ್ಥೆ ಸಿಎಂಎಂಎಸ್ ಪೋರ್ಟಲ್ ಮೂಲಕ ನಿರ್ವಹಿಸಲಾಗುತ್ತಿದೆ ಎಂದರು. ಹಾಗಾಗಿ ಇಲ್ಲಿ ನಡೆಯುವ ತರಬೇತಿಯ ಸಂಪೂರ್ಣ ಮಾಹಿತಿ ಪಡೆದುಕೊಂಡು ಗೊಂದಲಗಳಿಗೆ ಅವಕಾಶ ನೀಡದಂತೆ ಸೂಚನೆಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದರು.
ಜಿಲ್ಲಾ ಪಂಚಾಯತಿಯ ಸಿ.ಸಿ ಕುಲಕರ್ಣಿ, ಜಿಲ್ಲಾಧಿಕಾರಿ ಕಚೇರಿಯ ಶಿರಸ್ತೇದಾರ ಸಚ್ಚಿದಾನಂದ ತೇರದಾಳ ಇದ್ದರು.





