ವಿಜಯಪುರ ಜಿಲ್ಲೆಯಲ್ಲಿ ನಡೆಯುತ್ತಿರುವ SSLC ಪರೀಕ್ಷಾ ಕೇಂದ್ರಗಳಿಗೆ ಹಾಗೂ ಜಿಲ್ಲಾ ಪಂಚಾಯತಿಯ ಮಿನಿ ಸಭಾಭವನದಲ್ಲಿ ಸ್ಥಾಪಿಸಲಾದ ಜಿಲ್ಲಾ ವೆಬ್ ಕಾಸ್ಟಿಂಗ್ ಕೇಂದ್ರಕ್ಕೆ ಜಿಲ್ಲಾ ಪಂಚಾಯಿತಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಿಷಿ ಆನಂದ ಅವರು ಬುಧವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ವೆಬ್ ಕಾಸ್ಟಿಂಗ್ ಕೇಂದ್ರದಲ್ಲಿ ಯಾವುದೇ ತಾಂತ್ರಿಕ ಸಮಸ್ಯೆಗಳು ಉಂಟಾಗದಂತೆ ನೋಡಿಕೊಳ್ಳಬೇಕು. ಪರೀಕ್ಷಾ ಅವಧಿಯಲ್ಲಿ ಯಾವುದೇ ಸಿಸಿಟಿವಿ ಸ್ಥಗಿತಗೊಳ್ಳದಂತೆ ನಿಗಾ ವಹಿಸಬೇಕು ಎಂದು ಸೂಚಿಸಿದರು.
ಇಲಾಖೆಯ ಪರೀಕ್ಷಾ ಕೇಂದ್ರಗಳಲ್ಲಿ ಯಾವುದೇ ಲೋಪಗಳು ಉಂಟಾಗದಂತೆ ಕಟ್ಟು-ನಿಟ್ಟಾಗಿ ನಡೆಸುವುದು. ಇದಕ್ಕೆ ಪೂರಕವಾಗಿ ಎಲ್ಲಾ ಅಗತ್ಯ ಕ್ರಮಗಳನ್ನು ವಹಿಸಬೇಕು ಎಂದು ಶಾಲಾ ಶಿಕ್ಷಣ ಅಧಿಕಾರಿಗಳು ಹಾಗೂ ವೆಬ್ ಕಾಸ್ಟಿಂಗ್ ಕೇಂದ್ರದ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಬಳಿಕ ವಿಜಯಪುರ ನಗರದ ಹೇಮರೆಡ್ಡಿ ಮಲ್ಲಮ್ಮ ಪ್ರೌಢ ಶಾಲೆ, ಪಿಡಿಜೆ ಪ್ರೌಢಶಾಲೆ, ಬಾಲಕರ ಮತ್ತು ಬಾಲಕಿಯರ ಸರಕಾರಿ ಪದವಿಪೂರ್ವ ಕಾಲೇಜುಗಳಿಗೆ ಭೇಟಿ ನೀಡಿದರು. ಪರೀಕ್ಷಾ ಕೊಠಡಿಗಳಲ್ಲಿ ವಿದ್ಯಾರ್ಥಿಗಳಿಗೆ ಕಲ್ಪಿಸಿರುವ ಆಸನ ವ್ಯವಸ್ಥೆ, ಪರೀಕ್ಷಾ ಕೊಠಡಿ ಮೇಲ್ವಿಚಾರಕರ ನೇಮಕ, ಎಲ್ಲಾ ಪರೀಕ್ಷಾ ಕೇಂದ್ರಗಳಲ್ಲಿ ಅಗತ್ಯ ಮೂಲಭೂತ ಸೌಲಭ್ಯಗಳಾದ ಕುಡಿಯುವ ನೀರು, ಶೌಚಾಲಯ, ವಿದ್ಯುತ್ ವ್ಯವಸ್ಥೆ, ಗಾಳಿ ಹಾಗೂ ಪ್ರಥಮ ಚಿಕಿತ್ಸಾ ವ್ಯವಸ್ಥೆಗಳು ಸೇರಿದಂತೆ ಎಲ್ಲಾ ಸೌಲಭ್ಯಗಳನ್ನು ಕಲ್ಪಿಸಬೇಕು. ವಿದ್ಯಾರ್ಥಿಗಳು ಯಾವುದೇ ಆತಂಕಕ್ಕೆ ಒಳಗಾಗದೇ ಭಯ ಮುಕ್ತರಾಗಿ ಧೈರ್ಯದಿಂದ ಪರೀಕ್ಷೆ ಬರೆಯುವಂತೆ ಕ್ರಮವಹಿಸಬೇಕು ಎಂದರು.
ಇದನ್ನೂ ಓದಿ: ವಿಜಯಪುರ | ಪವಿತ್ರ ರಂಜಾನ್: ಬೆಲೆ ಏರಿಕೆ ಬಿಸಿ ಮಧ್ಯೆಯೂ ಕಳೆಗಟ್ಟಿದ ಮಾರುಕಟ್ಟೆಗಳು
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತಿಯ ಉಪಕಾರ್ಯದರ್ಶಿ ಪ್ರಕಾಶ ವಡ್ಡರ, ಮುಖ್ಯ ಯೋಜನಾಧಿಕಾರಿ ಸಿ. ಬಿ. ಕುಂಬಾರ, ಎಸ್‌ಎಸ್‌ಎಲ್‌ಸಿ ಜಿಲ್ಲಾ ನೋಡಲ್ ಅಧಿಕಾರಿ ಟಿ. ಎಸ್. ಕೊಲ್ದಾರ, ವೆಬ್ ಕಾಸ್ಟಿಂಗ್ ಕೇಂದ್ರದ ಮುಖ್ಯಸ್ಥರಾದ ರೇಣುಕಾ ಕಲಬುರ್ಗಿ, ಜಿಲ್ಲೆಯ ಎಲ್ಲಾ ವಲಯಗಳ ಮುಖ್ಯಸ್ಥರು ಹಾಗೂ ಪರೀಕ್ಷಾ ವೆಬ್ ಕಾಸ್ಟಿಂಗ್ ವೀಕ್ಷಕರು, ಪರೀಕ್ಷಾ ಕೇಂದ್ರಗಳ ಮೇಲ್ವಿಚಾರಕರು, ಪೋಲಿಸ್ ಸಿಬ್ಬಂದಿ, ಆರೋಗ್ಯ ಕಾರ್ಯಕರ್ತರು ಹಾಗೂ ಇತರೆ ಸಿಬ್ಬಂದಿ ಉಪಸ್ಥಿತರಿದ್ದರು.





