ಡಾ. ಬಿ ಆರ್ ಅಂಬೇಡ್ಕರ್ ಹಾಗೂ ಮಹಾತ್ಮ ಜ್ಯೋತಿಬಾ ಫುಲೆ ಜಯಂತಿಯ ಅಂಗವಾಗಿ ಪ್ರಗತಿಪರ, ದಲಿತ ಸೇರಿದಂತೆ ವಿವಿಧ ಸಂಘಟನೆಗಳ ಸಂಯುಕ್ತಾಶ್ರಯದಲ್ಲಿ ವಿಜಯಪುರ ನಗರದ ದರ್ಬಾರ್ ಹೈಸ್ಕೂಲ್ ಮೈದಾನದಲ್ಲಿ ಏಪ್ರಿಲ್ 10 ರಿಂದ 14ರ ವರೆಗೆ ಐದು ದಿನಗಳ ರಾಜ್ಯಮಟ್ಟದ ಪುಸ್ತಕ ಮೇಳ ನಡೆಯಲಿದೆ ಎಂದು ಲಡಾಯಿ ಪ್ರಕಾಶನದ ಮುಖಂಡ ಬಸವರಾಜ ಸೂಳಿಭಾವಿ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, “ತಾತ್ವಿಕ ನೆಲಗಟ್ಟಿನಲ್ಲಿ ನಡೆಯುತ್ತಿರುವ ರಾಜ್ಯದ ಮೊದಲ ಪುಸ್ತಕ ಮೇಳ ಇದಾಗಿದೆ. ವಿಜಯಪುರದಲ್ಲಿ ಇಂತಹ ವಿಶೇಷವಾದ ಮೇಳ ಆಯೋಜಿಸಿರುವುದರಿಂದ ಬಿಜಾಪುರ, ಬುದ್ಧ, ಬಸವ, ಬಾಬಾ ಸಾಹೇಬ್ ಅಂಬೇಡ್ಕರ (ಬಿ -ಫೋರ್) ಪುಸ್ತಕ ಮೇಳ ಎಂದು ಹೆಸರಿಸಲಾಗಿದೆ. ರಾಜ್ಯದ ಪ್ರಖ್ಯಾತ ಪ್ರಕಾಶನ ಸಂಸ್ಥೆಗಳು ಭಾಗವಹಿಸಿದ್ದು 50 ಮಳಿಗೆಗಳು ಸ್ಥಾಪನೆಯಾಗಲಿವೆ” ಎಂದರು.
ಬುದ್ಧ, ಬಸವ, ಅಂಬೇಡ್ಕರ್ ಸೇರಿ ಅನೇಕ ದಾರ್ಶನಿಕರು ಸಮಾಜವನ್ನು ತಿದ್ದುವ ವಿಚಾರಗಳನ್ನು ನೀಡಿದ್ದಾರೆ. ಆದರೆ, ಇಂದಿನ ದಿನಮಾನಗಳಲ್ಲಿ ಇಂತಹ ಧಾರ್ಮಿಕರ ವಿಚಾರಗಳನ್ನು ತಿರುಚುವ ಕೆಲಸವಾಗುತ್ತಿದೆ. ಹೀಗಾಗಿ ಅವರ ವಿಚಾರಗಳನ್ನು ಜನರಿಗೆ ತಲುಪಿಸುವ ಅವಶ್ಯಕತೆ ಇದೆ. ಈ ನಿಟ್ಟಿನಲ್ಲಿ ಮನುಷ್ಯ, ಜೀವ ಪರ ಪುಸ್ತಕಗಳಿಗೆ ಮಾತ್ರ ಮೇಳದಲ್ಲಿ ಅವಕಾಶ ನೀಡಲಾಗಿದೆ. ಯುವಕರನ್ನು ಪುಸ್ತಕಗಳ ಹಾಗೂ ಓದಿನೆಡೆಗೆ ಸೆಳೆಯುವ ಉದ್ದೇಶ ಸಹ ಹೊಂದಲಾಗಿದೆ ಎಂದು ಹೇಳಿದರು.
ಏ.10 ರಂದು ಮೊದಲ ದಿನ ಮೇಳದ ಉದ್ಘಾಟನೆ ನಡೆಯಲಿದೆ. ಅಂದು ಡಾ. ಬಿ ಆರ್ ಅಂಬೇಡ್ಕರ್ ವೃತ್ತದಿಂದ ಪುಸ್ತಕಗಳ ಜೊತೆ ಲೇಖಕರ ಮೆರವಣಿಗೆ ಜರುಗಲಿದೆ. ಏ.11ರಂದು ಬಸವೇಶ್ವರ ವೃತ್ತದಿಂದ ಬಸವಾದಿ ಶರಣರ ವಚನಗಳ ಕಟ್ಟುಗಳೊಂದಿಗೆ ಬಸವ ಅನುಯಾಯಿಗಳ ಮೆರವಣಿಗೆ ನಡೆಯಲಿದೆ ಎಂದರು.
ಇದನ್ನೂ ಓದಿ: ವಿಜಯಪುರ | ಏ.11ರಿಂದ ಅಂಬೇಡ್ಕರ್ ಹಬ್ಬ
ಮೇಳದಲ್ಲಿ ಪ್ರತಿದಿನ ಸಂಜೆ 4 ರಿಂದ 9 ಗಂಟೆಯವರೆಗೆ ಕವಿಗೋಷ್ಠಿ, ವಿದ್ಯಾರ್ಥಿಗಳಿಂದ ಪುಸ್ತಕ ಕುರಿತು ಮಾತು, ಲೇಖಕರೊಂದಿಗೆ ಸಂವಾದ, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಸಂಘಟಿಸಲಾಗಿದೆ ಎಂದು ವಿವರಿಸಿದರು.
ಸುದ್ದಿಗೋಷ್ಠಿಯಲ್ಲಿ ಪ್ರಮುಖರಾದ ಅನಿಲ ಹೊಸಮನಿ, ಚನ್ನು ಕಟ್ಟಿಮನಿ, ಸಂಜೀವ ಕಂಬಾಗಿ, ಸುಖದೇವ ಕಟ್ಟಿಮನಿ, ಶಿವಪುತ್ರ ಅಜಮನೆ, ಭೋಗೇಶ ಸೋಲಾಪುರ, ಯಮುನಪ್ಪ ಗುಣಕಿ, ಪ್ರಭುಗೌಡ ಪಾಟೀಲ, ಸಂಗೀತ ಪೂಜಾರಿ, ಮಹಾದೇವ ಬನಸೋಡೆ ಹಾಗೂ ಫಯಾಜ್ ಕಲಾದಗಿ ಇದ್ದರು.





