ಸಂತ ಸೇವಾಲಾಲರ ಆದರ್ಶಗಳು ಇಂದಿನ ವಿದ್ಯಾರ್ಥಿಗಳಿಗೆ ದಾರಿದೀಪವಾಗಿವೆ ಎಂದು ವಿಜಯಪುರದ ಅಕ್ಕಮಹಾದೇವಿ ಮಹಿಳಾ ವಿವಿ ಕುಲಪತಿ ಪ್ರೊ. ವಿಜಯಾ ಕೋರಿಶೆಟ್ಟಿ ಹೇಳಿದರು.
ಅಕ್ಕಮಹಾದೇವಿ ಮಹಿಳಾ ವಿವಿ, ವಿಜಯಪುರದ ವಿದ್ಯಾರ್ಥಿನಿ ಕ್ಷೇಮಪಾಲನಾ ನಿರ್ದೇಶನಾಲಯ ಹಾಗೂ ಬೆಂಗಳೂರಿನ ಬಂಜಾರ ಸಂಸ್ಕೃತಿ ಮತ್ತು ಭಾಷಾ ಅಕಾಡೆಮಿ, ಇವರ ಸಂಯುಕ್ತಾಶ್ರಯದಲ್ಲಿ ಶ್ರೀ ಸಂತ ಸೇವಾಲಾಲರ 287ನೇ ಜಯಂತೋತ್ಸವ ಪ್ರಯುಕ್ತ ಶುಕ್ರವಾರ ಹಮ್ಮಿಕೊಂಡಿದ್ದ ʼಸಂತ ಸೇವಾಲಾಲ ಅವರ ಆದರ್ಶ ತತ್ವಗಳ ಕುರಿತ ಚಿಂತನ- ಮಂಥನ- ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು .
“ಸೇವಾಲಾಲರ ತತ್ವಗಳು ನೈತಿಕತೆ, ಶಿಸ್ತು, ಸೇವಾಭಾವ ಮತ್ತು ಸಮಾಜಮುಖಿ ಚಿಂತನೆಗೆ ಪ್ರೇರಣೆಯಾಗಿವೆ. ಇಂತಹ ಮಹಾನ್ ವ್ಯಕ್ತಿತ್ವಗಳ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವುದರಿಂದ ವಿದ್ಯಾರ್ಥಿಗಳ ಭವಿಷ್ಯ ಸುಗಮವಾಗುವುದಲ್ಲದೆ, ಅವರು ಉತ್ತಮ ನಾಗರಿಕರಾಗಿ ರೂಪುಗೊಳ್ಳಲು ಸಹಕಾರಿ ಆಗುತ್ತದೆ” ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಬಂಜಾರ ಸಂಸ್ಕೃತಿ ಮತ್ತು ಭಾಷಾ ಅಕಾಡೆಮಿ ಮಾಜಿ ಅಧ್ಯಕ್ಷ ಡಾ. ಹರಿಲಾಲ ಪವಾರ ಮಾತನಾಡಿ, “ಹೇಗೆ ಬೇರೆ ಸಮುದಾಯಗಳಲ್ಲಿ ಮಹಾಕಾವ್ಯಗಳು ರೂಪಗೊಂಡವೋ, ಹಾಗೆಯೇ ಸಂತ ಸೇವಾಲಾಲರ ಜೀವನವೂ ಒಂದು ಮಹಾಕಾವ್ಯ. ದೇಶದಲ್ಲಿ ಬಂಜಾರ ಭಾಷೆಯನ್ನು ಮಾತನಾಡುವವರು ಸುಮಾರು ಒಂದೂವರೆ ಕೋಟಿ ಜನರಾಗಿರುವುದರಿಂದ, ಭಾಷೆಯನ್ನು ಸಂವಿಧಾನದ ಎಂಟನೇ ಅನುಸರಣೆ ಪಟ್ಟಿಯಲ್ಲಿ ಸೇರಿಸಬೇಕು” ಎಂದರು.
ಇದನ್ನೂ ಓದಿ: ವಿಜಯಪುರ | ಅಕ್ಕಮಹಾದೇವಿ ಮಹಿಳಾ ವಿವಿ ಸಮಗ್ರ ಅಭಿವೃದ್ಧಿ ಕುರಿತು ಮಹತ್ವದ ಚರ್ಚೆ
ಕಾರ್ಯಕ್ರಮದಲ್ಲಿ ಅಕಾಡೆಮಿಯ ಸದಸ್ಯೆ ಡಾ. ಸುರೇಖಾ ರಾಠೋಡ, ಕ್ಷೇಮಪಾಲನಾ ನಿರ್ದೇಶನಾಲಯದ ನಿರ್ದೇಶಕಿ ಪ್ರೊ. ಜ್ಯೋತಿ ಉಪಾದ್ಯೆ, ಸಂಶೋಧನಾ ವಿದ್ಯಾರ್ಥಿನಿ ಸಂಗೀತಾ ಪವಾರ ಹಾಗೂ ಇತರರಿದ್ದರು.





