ದೇಶ ಕಾಯುವ ಸೈನಿಕರು, ಅನ್ನ ನೀಡುವ ರೈತರು ದೇಶಕ್ಕೆ ಎಷ್ಟು ಮುಖ್ಯವೋ ಅದೇ ರೀತಿ ದೇಶದ ಭವಿಷ್ಯ ರೂಪಿಸುವಲ್ಲಿ ಶಿಕ್ಷಕರ ಪಾತ್ರ ಅನನ್ಯವಾದುದು. ಜೈ ಜವಾನ್ ಜೈ ಕಿಸಾನ್ ಎನ್ನುವಂತೆ ʼಜೈ ಶಿಕ್ಷಕʼ ಎನ್ನೋಣ ಎಂದು ವಿಜಯಪುರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ ಹೇಳಿದರು.
ನಗರದ ಬಿ.ಎಲ್.ಡಿ.ಇ ಸಂಸ್ಥೆಯ ಜ್ಞಾನಯೋಗಿ ಶ್ರೀ ಸಿದ್ದೇಶ್ವರ ಸ್ವಾಮೀಜಿ ಶಿಕ್ಷಣ ಮಹಾವಿದ್ಯಾಲಯದಲ್ಲಿ ವಿದ್ಯಾರ್ಥಿ ಸಂಘವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಪಾಲಕರನ್ನು ಹೊರತುಪಡಿಸಿದರೆ ಮಕ್ಕಳು ಶಿಕ್ಷಕರ ಹತ್ತಿರವೇ ಹೆಚ್ಚು ಬೆಳೆಯುತ್ತವೆ. ಹೀಗಾಗಿ ಭಾವಿ ಶಿಕ್ಷಕರಾಗಿ ಹೊರಹೊಮ್ಮುವ ಬಿ.ಎಡ್. ವಿದ್ಯಾರ್ಥಿಗಳು ಮಗುವಿನ ಸರ್ವತೋಮುಖ ಬೆಳವಣಿಗೆಗಾಗಿ ನಿರಂತರ ಶ್ರಮಿಸಬೇಕು. ರಾಜ್ಯದಲ್ಲಿ ಶಿಕ್ಷಣವು ಅತ್ಯುನ್ನತ ಸ್ಥಾನದಲ್ಲಿರಲು ಬಿಎಲ್‌ಡಿಇ ಸಂಸ್ಥೆಯೂ ಮಹತ್ವದ ಕೊಡುಗೆ ನೀಡಿದೆ ಎಂದು ಹೇಳಿದರು.
ಬಿಎಲ್‌ಡಿಇ ಸಂಸ್ಥೆಯ ಆಡಳಿತಾಧಿಕಾರಿ ಐ ಎಸ್ ಕಾಳಪ್ಪನವರ ಮಾತನಾಡಿ, “ಶಿಕ್ಷಕ ವೃತ್ತಿಯು ಅತ್ಯಂತ ಪವಿತ್ರವಾಗಿದ್ದು, ಬಯಸಿ ಪ್ರವೇಶ ಪಡೆದ ವಿದ್ಯಾರ್ಥಿಗಳು ಉತ್ತಮ ಶಿಸ್ತು, ಆರೋಗ್ಯ, ಪ್ರಯತ್ನ ಮತ್ತು ಕರ್ತವ್ಯಶೀಲ ಗುಣಗಳನ್ನು ಅಳವಡಿಸಿಕೊಂಡು ಆದರ್ಶ ಶಿಕ್ಷಕರಾಗಿ ಬೆಳೆಯಬೇಕು” ಎಂದರು.
ಆಡಳಿತಾಧಿಕಾರಿ ಪ್ರೊ. ವಿ ಎಸ್ ಬಗಲಿ ಮಾತನಾಡಿ, “ಜೆಎಸ್‌ಎಸ್ ಶಿಕ್ಷಣ ಮಹಾವಿದ್ಯಾಲಯವು ಶಿಕ್ಷಕರನ್ನು ತಯಾರಿಸುವ ಒಂದು ಅತ್ಯುತ್ತಮ ಕಾರ್ಖಾನೆಯಾಗಿದ್ದು, ಇಲ್ಲಿ ಕಲಿಯುತ್ತಿರುವ ವಿದ್ಯಾರ್ಥಿಗಳು ಉತ್ತಮ ಕೌಶಲ್ಯಭರಿತ ಶಿಕ್ಷಕರಾಗಿ ಹೊರಹೊಮ್ಮಬೇಕು” ಎಂದು ಹೇಳಿದರು.
ಕಾಲೇಜಿನ ಪ್ರಾಚಾರ್ಯೆ ಡಾ. ಭಾರತಿ ವೈ ಖಾಸನೀಸ ಅವರು ವಿದ್ಯಾರ್ಥಿ ಪ್ರತಿನಿಧಿಗಳಿಗೆ ಪ್ರಮಾಣ ವಚನ ಬೋಧಿಸಿದರು. ಪ್ರವೀಣ ಹೊಸಮನಿ, ಐಶ್ವರ್ಯ ಜೋಶಿ ಮತ್ತು ಸಂಗಡಿಗರು ಸಂಸ್ಥಾಪನಾ ಗೀತೆ ಹಾಡಿದರು.
ಇದನ್ನೂ ಓದಿ: ವಿಜಯಪುರ | ವೈದ್ಯಕೀಯ ನಿರ್ಲಕ್ಷ್ಯ ಕಾನೂನು ವಿಷಯದ ಕುರಿತ ರಾಷ್ಟ್ರೀಯ ವಿಚಾರ ಸಂಕಿರಣ
ಈ ಸಂದರ್ಭದಲ್ಲಿ ಡಾ. ಎಂ ಎಸ್ ಹಿರೇಮಠ, ಡಾ. ಜ್ಯೋತಿ ಪಟ್ಟಣಶೆಟ್ಟಿ, ಡಾ. ಬಿ ಎಸ್ ಹಿರೇಮಠ, ಎಸ್ ಎಸ್ ಪಾಟೀಲ, ಡಾ. ಎಸ್ ಪಿ ಶೇಗುಣಸಿ, ಎಂ ಪಿ ಕುಪ್ಪಿ, ಸುರೇಶ ಬಗಲಿ, ಸುಜಾತಾ ದೇಸಾಯಿ, ಎ ಎಸ್ ಬರಡ್ಡಿ, ವಿದ್ಯಾ ಭಮಗೊಂಡ, ಸಹಾಯಕ ಪ್ರಾಧ್ಯಾಪಕ ಪಿ.ಡಿ.ಮುಲ್ತಾನಿ, ಎಸ್. ಎಸ್. ಪಾಟೀಲ, ಮಹಾವಿದ್ಯಾಲಯದ ಸಾಂಸ್ಕೃತಿಕ ವಿಭಾಗದ ಮುಖ್ಯಸ್ಥ ಮತ್ತು ಸಹಪ್ರಾಧ್ಯಾಪಕ ಡಾ. ಎಂ. ಬಿ. ಕೋರಿ ಹಾಗೂ ಪ್ರಶಿಕ್ಷಣಾರ್ಥಿಗಳು ಉಪಸ್ಥಿತರಿದ್ದರು.





