ಗಡಿಯಲ್ಲಿ ನಿಂತು ದೇಶ ಕಾಯುವುದು ಕೇವಲ ಪುರುಷರ ಕೆಲಸವಷ್ಟೇ ಅಲ್ಲ, ಅದನ್ನು ಮಹಿಳೆಯೂ ಮಾಡಿ ತೋರಿಸಬಲ್ಲಳು ಎಂಬುದನ್ನು ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ಸಿದ್ದಾಪುರ ಪಿಟಿ ಗ್ರಾಮದ ಯುವತಿ ಆಯುಷಾ ಬಂದಗಿಸಾಬ ವಾಲಿಕಾರ ಸಾಧನೆ ಮಾಡಿದ್ದು, ತಾಲೂಕಿನ ಮೊಟ್ಟ ಮೊದಲ ಹೆಮ್ಮೆಯ ಕುವರಿಯಾಗಿದ್ದಾರೆ.
ಅದೊಂದು ಪುಟ್ಟ ಮನೆ ಮನೆಗೆ ಹೊಂದಿಕೊಂಡಿರುವ ತಗಡಿನ ಶೆಡ್, ಅದರಲ್ಲಿ ದನಕರಗಳಿಗೆಂದೇ ಜೋಡಿಸಿಟ್ಟಿರುವ ಮೇವು, ಮನೆಯ ಆವರಣದಲ್ಲಿ ತಂತಿ ಜಾಳಿಗೆಯಲ್ಲಿ ಕೂಡಿಸಿರುವ ಜವಾರಿ ತಳಿಯ ಕೋಳಿಗಳು ಅವುಗಳ ರಕ್ಷಣೆಗೆ ಹರಿದ ಸೀರೆ, ಗೋಣಿ ತಟ್ಟು ಕಟ್ಟಿಕೊಂಡಿರುವಂತಹ ಮನೆಯ ವಾತಾವರಣದಲ್ಲಿ ಬೆಳೆದ ಯುವತಿ ನೆರೆಹೊರೆಯವರು, ಊರಿನವರ ಹೀಯಾಳಿಕೆಯನ್ನೇ ಮೆಟ್ಟಿಲು ಮಾಡಿಕೊಂಡ ಯುವತಿ ಇದೀಗ ತನ್ನ ಕುಟುಂಬದವರ ಪ್ರೋತ್ಸಾಹದೊಂದಿಗೆ ದೇಶದ ಗಡಿ ಕಾಯುವುದಕ್ಕೆ ಸಿದ್ದರಾಗಿ ನಿಂತಿದ್ದಾರೆ.
ಸಾಮಾನ್ಯ ಬಡ ರೈತ ಕುಟುಂಬದಲ್ಲಿ ಜನಿಸಿದ ಇವರು, ಬಾಲ್ಯದಿಂದಲೇ ಸೇನೆಯ ಸಮವಸ್ತ್ರ ಧರಿಸುವ ಕನಸು ಕಂಡಿದ್ದವರು. ಜನ್ಮ ನೀಡಿದ ಭೂತಾಯಿಗೆ ಈ ಜೀವ ಅರ್ಪಣೆ ಎಂಬ ಚಿಂತನೆಯನ್ನು ಅಕ್ಷರಶಃ ಪಾಲನೆ ಮಾಡಲು ಬಿಎಸ್‌ಎಫ್‌ಗೆ ಆಯ್ಕೆಯಾಗುವ ಮೂಲಕ ತಾಲೂಕಿನಲ್ಲಿ ಮೊಟ್ಟ ಮೊದಲು ಸೈನ್ಯಕ್ಕೆ ಸೇರಿದ ಸಾಧಕಿಯಾಗಿ ಹೊರಹೊಮ್ಮಿದ್ದಾರೆ.
ಸಾಧಿಸುವ ಛಲವಿದ್ದರೆ ಬಡತನ ಅಡ್ಡಿಯಿಲ್ಲ ಎಂಬುದಕ್ಕೆ ಆಯುಷಾ ಅವರೇ ಸಾಕ್ಷಿಯಾಗುತ್ತಾರೆ. ಮನೆಯ ಪರಿಸ್ಥಿತಿ ಬಿಗುಡಾಯಿಸಿದ ಸಮಯದಲ್ಲಿ ಮನೆಯಲ್ಲಿ ಊಟ ಮಾಡುವುದಕ್ಕೂ ಕಷ್ಟದ ಪರಿಸ್ಥಿತಿ ಇದ್ದಾಗಲೂ ನಾನು ಓದಲೇಬೇಕು ಸೇನೆಗೆ ಸೇರಲೇಬೇಕು ಎಂದು ಪಣ ತೊಟ್ಟವರು ಆಯುಷಾ. ಅಂತಹ ಕಠಿಣ ಪರಿಶ್ರಮ ಮತ್ತು ದೇಶ ಸೇವೆಯ ಕನಸು ಹೊತ್ತಿದ್ದ ಇವರು, ಇದೀಗ ಬಿಎಸ್ಎಫ್ ಲೇಡಿ ಕಾನ್‌ಸ್ಟೆಬಲ್ ಹುದ್ದೆಗೆ ಆಯ್ಕೆಯಾಗುವ ಮೂಲಕ ಕೀರ್ತಿ ಹೆಚ್ಚಿಸಿದ್ದಾರೆ.
ಈ ದಿನ.ಕಾಮ್ ಜತೆಗೆ ಮಾತನಾಡಿದ ಆಯುಷಾ ವಾಲಿಕಾರ, “ನಮ್ಮ ಕುಟುಂಬ ತುಂಬಾ ಕಷ್ಟದಿಂದ ಕೂಡಿದೆ. ನಮ್ಮ ಇಬ್ಬರು ಸಹೋದರರು ಸೇನೆಗೆ ಸೇರಬೇಕೆಂದು ಓದುತ್ತಿದ್ದರು. ಅವರ ಸ್ಪೂರ್ತಿ ಪಡೆದು ನಾನೂ ಕೂಡ ಸೇನೆಗೆ ಸೇರಿ ದೇಶ ಸೇವೆ ಮಾಡಬೇಕೆಂಬುದು ದೊಡ್ಡ ಕನಸಾಗಿತ್ತು. ಅದು ಈಗ ನನಸಾಗಿದೆ. ಹೆಚ್ ಪಿ ಎಸ್ ಸಿದ್ದಾಪುರ ಟಿಟಿಯಲ್ಲಿ ಪ್ರಾಥಮಿಕ ಶಿಕ್ಷಣ, ಬಸರಕೋಡದ ಪವಾಡ ಬಸವೇಶ್ವರ ಪ್ರೌಢಶಾಲೆಯಲ್ಲಿ ಪ್ರೌಢ ಶಿಕ್ಷಣ, ಮುದ್ದೇಬಿಹಾಳದ ಎಂಜಿವಿಸಿ ಕಾಲೇಜಿನಲ್ಲಿ ಪದವಿ ಪೂರ್ವ ಶಿಕ್ಷಣ ಪೂರ್ಣಗೊಳಿಸಿದ್ದೇನೆ” ಎಂದರು.

“ನನ್ನ ಓದಿಗೆ ನೆರವಾದವರು ಉಣ್ಣಿಭಾವಿಯಲ್ಲಿರುವ ನನ್ನ ಅಜ್ಜಿ ಜೈತುನಬಿ ಚಳ್ಳಗಿ ಹಾಗೂ ತಾಯಿ ಶಕೀರ ವಾಲಿಕಾರ ಅವರು ಮೈ ಮೇಲಿನ ಬಂಗಾರದ ಒಡೆವೆಗಳನ್ನು ಒತ್ತೆ ಇಟ್ಟು ಓದಿಸಲ ಅನುಕೂಲ ಕಲ್ಪಿಸಿದ್ದಾರೆ. ಸಿಇಟಿಯನ್ನು ರಬಕವಿ ಬನಹಟ್ಟಿಯ ಗ್ಲೋಬಲ್ ಎಜುಕೇಶನ್ ಸೆಂಟರ್ ಹಾಗೂ ದೈಹಿಕ ಸಾಮರ್ಥ್ಯದ ತರಬೇತಿಯನ್ನು ದ್ರೋಣ ಕರಿಯರ್ ಅಕಾಡೆಮಿ ವಿಜಯಪುರದಲ್ಲಿ ಪಡೆದುಕೊಂಡಿದ್ದೇನೆ. ಬೆಂಗಳೂರಿನಲ್ಲಿ ದೈಹಿಕ, ಲಿಖಿತ ಪರೀಕ್ಷೆ ನಡೆದಿದೆ.
“ಪ್ರಥಮ ಪ್ರಯತ್ನದಲ್ಲಿ ಆಯ್ಕೆಯಾಗಿರುವುದು ತುಂಬಾ ಖುಷಿ ನೀಡಿದೆ. ಅದಕ್ಕಾಗಿ ಪಟ್ಟ ಪರಿಶ್ರಮಕ್ಕೆ ಫಲ ದೊರೆತಿದೆ. ಹೆಣ್ಣುಮಕ್ಕಳು ಮನಸ್ಸು ಮಾಡಿದರೆ ಯಾವುದೂ ಅಸಾಧ್ಯವಲ್ಲ ಎಂಬ ಮಾತು ನನ್ನ ವಿಷಯದಲ್ಲಿ ಸಾಬೀತಾಗಿದೆ” ಎಂದರು.
“ಮಾರ್ಚ್ ತಿಂಗಳಲ್ಲಿ ನಾನು ತರಬೇತಿಗೆ ತೆರಳುತ್ತಿದ್ದೇನೆ. ಬೆಂಗಳೂರಿನಲ್ಲಿ ಜನವರಿ 24ರಂದು ರೋಜಗಾರ ಮೇಳದಲ್ಲಿ ನನಗೆ ಉದ್ಯೋಗದ ಆದೇಶ ಪತ್ರ ನೀಡಿದ್ದಾರೆ. ಮಾರ್ಚ್ 9ರಂದು ಪಂಜಾಬ್‌ನಲ್ಲಿ ತರಬೇತಿ ನಡೆಯಲಿದೆ” ಎಂದು ತಮ್ಮ ಸಾಧನೆಯ ಖುಷಿಯನ್ನು ಹಂಚಿಕೊಂಡರು.
ಬಸರಕೊಡ ಬಸವೇಶ್ವರ ಪ್ರೌಢಶಾಲೆ ಮುಖ್ಯ ಶಿಕ್ಷಕರಾದ ವಿ ಪಿ ಮೇಲ್ಮನಿ ಈ ದಿನ.ಕಾಮ್‌ನೊಂದಿಗೆ ಮಾತನಾಡಿ, “ನಮ್ಮ ಶಾಲೆಯ ವಿದ್ಯಾರ್ಥಿ ದೇಶದ ಗಡಿ ಕಾಯುವ ಹುದ್ದೆಗೇರಿರುವುದು ಹೆಮ್ಮೆಯ ವಿಷಯ. ನಮ್ಮ ಶಾಲೆಯ ಇತರ ವಿದ್ಯಾರ್ಥಿನಿಯರಿಗೆ ಸ್ಪೂರ್ತಿಯಾಗಿದ್ದಾಳೆ” ಎಂದರು.
ಆಯಿಷಾಳ ತಂದೆ ಬಂದಗಿಸಾಬ ವಾಲಿಕಾರ ಮಾತನಾಡಿ, “ನಮ್ಮ ಜೀವನದಲ್ಲಿ ಶಿಕ್ಷಣ ಕಲಿಯಲಿಲ್ಲ, ಕೂಲಿ ನಾಲಿ ಮಾಡಿ ಕಡುಬಡತನದಿಂದಲೇ ಜೀವನ ಸಾಗಿಸಿದೆವು. ಆದರೆ ಮಕ್ಕಳಿಗೆ ಶಿಕ್ಷಣ ಕಲಿಸುವುದನ್ನು ಬಿಡಲಿಲ್ಲ. ಕಷ್ಟಪಟ್ಟು ಶಿಕ್ಷಣ ಕಲಿಸಿದ್ದರಿಂದ ಇಂಥ ಹುದ್ದೆಗೇರಲು ಅನುಕೂಲವಾಯಿತು” ಎಂದು ಹರ್ಷ ವ್ಯಕ್ತಪಡಿಸಿದರು.
ಪುರುಷ ಪ್ರಧಾನ ವ್ಯವಸ್ಥೆಯಲ್ಲಿ ಬದುಕುತ್ತಿರುವ ಪ್ರಸ್ತುತದಲ್ಲಿಯೂ ಮಹಿಳೆಗೆ ಪೂರಕ ವಾತಾವರಣ ನಿರ್ಮಾಣಗೊಂಡರೆ ಎಂತಹ ಸಾಧನೆಯನ್ನಾದರೂ ಮಾಡಬಲ್ಲಳು ಎಂಬುದಕ್ಕೆ ಆಯುಷಾ ಸೂಕ್ತ ಉದಾಹರಣೆ.
ಇದನ್ನೂ ಓದಿದ್ದೀರಾ? ಮಹಿಳೆಯರ ಸುರಕ್ಷತೆಗೆ ʼಸಖಿ ಆಟೋʼ ಸೇವೆ: ಮಹಿಳಾ ಸಬಲೀಕರಣದತ್ತ ಮಹತ್ವದ ಹೆಜ್ಜೆ
ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನಲ್ಲಿ ಮೊದಲ ಬಾರಿಗೆ ಒಬ್ಬ ಮಹಿಳೆಯಾಗಿ ಈ ಗೌರವಕ್ಕೆ ಪಾತ್ರಳಾಗಿ, ತನ್ನ ಗ್ರಾಮ, ತಾಲೂಕು ಹಾಗೂ ಜಿಲ್ಲೆಗೆ ಹೆಮ್ಮೆ ತಂದಿದ್ದಾರೆ. ಇದು ಕೇವಲ ವೈಯಕ್ತಿಕ ಸಾಧನೆಯಲ್ಲ; ಇದು ಎಲ್ಲ ಯುವತಿಯರಿಗೆ ಸ್ಫೂರ್ತಿ ನೀಡುವ ಮಹತ್ವದ ಉದಾಹರಣೆಯಾಗಿದೆ. ಸಮಾಜದಲ್ಲಿ ಮಹಿಳೆಯರು ಯಾವುದೇ ಕ್ಷೇತ್ರದಲ್ಲೂ ತಮ್ಮ ಸಾಮರ್ಥ್ಯ ತೋರಿಸಬಹುದು ಎಂಬ ಸಂದೇಶವನ್ನು ಆಯುಷಾ ಅವರು ತಮ್ಮ ಧೈರ್ಯ ಮತ್ತು ಸಂಕಲ್ಪದ ಮೂಲಕ ನೀಡಿದ್ದಾರೆ.
ಆಯುಷಾ ಅವರ ಈ ಯಶಸ್ಸು ಭವಿಷ್ಯದಲ್ಲಿ ಇನ್ನಷ್ಟು ಮಹಿಳೆಯರು ಸೈನ್ಯಕ್ಕೆ ಸೇರಿ ಗಡಿ ರಕ್ಷಿಸುವಂತೆ ಪ್ರೇರೇಪಣೆಯಾಗಲಿದೆ. ದೇಶದ ರಕ್ಷಣೆಯಲ್ಲಿ ಲಿಂಗಭೇದವಿಲ್ಲದೆ ಎಲ್ಲರೂ ಭಾಗಿಯಾಗಬಹುದು ಎಂಬುದನ್ನು ಈ ಸಾಧನೆ ಮತ್ತೊಮ್ಮೆ ದೃಢಪಡಿಸಿದೆ.





