ಶುಚಿತ್ವ ಮತ್ತು ಪಾರ್ಕಿಂಗ್‌ನಂತಹ ನೆಪಗಳನ್ನು ಮುಂದಿಟ್ಟುಕೊಂಡು ಬಿಜೆಪಿ ಆಡಳಿತದಲ್ಲಿರುವ ಕುಂದಾಪುರ ಪುರಸಭೆಯು ಬೀದಿ ಬದಿ ವ್ಯಾಪಾರಸ್ಥರನ್ನು ಒಕ್ಕಲೆಬ್ಬಿಸಲು ಹೊರಟಿರುವುದು ಸಂವಿಧಾನ ವಿರೋಧಿ ಕ್ರಮವಾಗಿದೆ ಎಂದು ಜಿಲ್ಲಾ ಕಾಂಗ್ರೆಸ್ ವಕ್ತಾರ ಕೆ. ವಿಕಾಸ್ ಹೆಗ್ಡೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ಪತ್ರಿಕಾ ಹೇಳಿಕೆ ನೀಡಿರುವ ಅವರು, ಡಾ. ಬಿ.ಆರ್. ಅಂಬೇಡ್ಕರ್ ಅವರು ಭಾರತೀಯರಿಗೆ ನೀಡಿದ ಹೆಮ್ಮೆಯ ಸಂವಿಧಾನದ ಪರಿಚ್ಛೇದ 19(1)(ಜಿ) ಸ್ಪಷ್ಟವಾಗಿ ಉದ್ಯೋಗ, ವ್ಯಾಪಾರ, ವ್ಯವಹಾರ ನಡೆಸುವ ಅವಕಾಶಗಳ ಕುರಿತು ಹೇಳುತ್ತದೆ. ಈ ಅವಕಾಶವನ್ನು ಕಸಿಯ ಹೊರಟಿರುವುದು ಖಂಡನೀಯ ಎಂದು ಅವರು ಹೇಳಿದ್ದಾರೆ.
ಬೀದಿ ಬದಿ ವ್ಯಾಪಾರಸ್ಥರಿಗೆ ಶುಚಿತ್ವ, ಪಾರ್ಕಿಂಗ್ ಮುಂತಾದವುಗಳಿಗೆ ತೊಂದರೆಯಾಗದಂತೆ ಅವರ ಉದ್ಯೋಗ, ವ್ಯಾಪಾರ, ವ್ಯವಹಾರ ನಡೆಸಲು ಅವಕಾಶ ಮಾಡಿಕೊಡುವ ಬದಲು, ಜೀವನೋಪಾಯಕ್ಕಾಗಿ ಇದನ್ನೇ ನಂಬಿರುವವರಿಗೆ ಅನಗತ್ಯ ಕಿರುಕುಳ ನೀಡುತ್ತಿರುವುದು ಅತ್ಯಂತ ಖೇದಕರ ವಿಚಾರ ಎಂದು ವಿಕಾಸ್ ಹೆಗ್ಡೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಶುಚಿತ್ವದ ಬಗ್ಗೆ ಮಾತನಾಡುವ ಪುರಸಭೆ ಆಡಳಿತವು ಮೊದಲು ತಮ್ಮ ವಾಣಿಜ್ಯ ಸಂಕೀರ್ಣಗಳಿಗೆ ಮತ್ತು ಪುರಸಭೆಯ ಕಚೇರಿಗೆ ಭೇಟಿ ನೀಡಲಿ. ಅಲ್ಲಿ ಶುಚಿತ್ವ ಎನ್ನುವ ಪದವನ್ನೇ ಮರೆಯಲಾಗಿದೆ. ಅದನ್ನು ಸರಿಪಡಿಸುವುದು ಬಿಟ್ಟು, ಬೀದಿ ಬದಿ ವ್ಯಾಪಾರಸ್ಥರ ಒಂದು ಹೊತ್ತಿನ ಊಟದ ಬಟ್ಟಲನ್ನು ಕಸಿಯ ಹೊರಟಿರುವುದು ಜನವಿರೋಧಿಯಾಗಿದೆ ಎಂದು ಅವರು ಟೀಕಿಸಿದ್ದಾರೆ.
ದೇಶದ ಪ್ರಧಾನ ಮಂತ್ರಿಗಳು ಪ್ರತಿ ವರ್ಷ ಕೋಟ್ಯಂತರ ಉದ್ಯೋಗ ಸೃಷ್ಟಿಯ ಮಾತುಗಳನ್ನಾಡುತ್ತಿದ್ದರೆ, ಸ್ಥಳೀಯವಾಗಿ ಬಿಜೆಪಿ ಆಡಳಿತದ ಕುಂದಾಪುರ ಪುರಸಭೆಯು ಸ್ವ ಉದ್ಯೋಗ ನಡೆಸುತ್ತಿರುವ ಬೀದಿ ಬದಿ ವ್ಯಾಪಾರಸ್ಥರ ಉದ್ಯೋಗಗಳನ್ನು ಕಸಿದುಕೊಳ್ಳುತ್ತಿದೆ. ಇದು ಕೇಂದ್ರ ಸರ್ಕಾರದ ಘೋಷಣೆಗಳಿಗೆ ವಿರುದ್ಧವಾಗಿದೆ ಎಂದು ವಿಕಾಸ್ ಹೆಗ್ಡೆ ಹೇಳಿದ್ದಾರೆ.
ಬೀದಿ ಬದಿ ವ್ಯಾಪಾರಸ್ಥರಿಗೆ ನೀಡುತ್ತಿರುವ ಕಿರುಕುಳ ಮತ್ತು ಅವರನ್ನು ಒಕ್ಕಲೆಬ್ಬಿಸುವ ಕ್ರಮವನ್ನು ಕೂಡಲೇ ನಿಲ್ಲಿಸುವಂತೆ ಕೆ. ವಿಕಾಸ್ ಹೆಗ್ಡೆ ಅವರು ಸಂಬಂಧಿತ ಜನಪ್ರತಿನಿಧಿಗಳು ಮತ್ತು ಜಿಲ್ಲಾಡಳಿತಕ್ಕೆ ಆಗ್ರಹಿಸಿದ್ದಾರೆ. ಈ ವಿಷಯಕ್ಕೆ ಕೂಡಲೇ ಸ್ಪಂದಿಸಿ ಸಮಸ್ಯೆಯನ್ನು ಪರಿಹಾರ ಮಾಡಬೇಕೆಂದು ಒತ್ತಾಯಿಸಿದ್ದಾರೆ.





