ನಾಡಿನ ಶ್ರೇಷ್ಠ ಪರಂಪರೆಯ ಕಲೆಯಾದ ತಾಳಮದ್ದಲೆ ಹಾಗೂ ಅದರ ಅರ್ಥಧಾರಿಗಳ ಬಗ್ಗೆ ಅವಹೇಳನಕಾರಿ, ಮಾನಹಾನಿಕರ ಬರಹಗಳನ್ನು ಪ್ರಕಟಿಸಿರುವ ಆರೋಪದ ಮೇಲೆ ವಿಶ್ವವಾಣಿ ಪತ್ರಿಕೆಯ ಸಂಪಾದಕ ವಿಶ್ವೇಶ್ವರ ಭಟ್ಟರು ಸಾರ್ವಜನಿಕವಾಗಿ ಕ್ಷಮೆ ಯಾಚಿಸಬೇಕು ಎಂದು ತಾಳಮದ್ದಲೆ ಕ್ಷೇತ್ರದ ಹಿರಿಯ ಅರ್ಥಧಾರಿಗಳು ಆಗ್ರಹಿಸಿದ್ದಾರೆ.
ಉಡುಪಿಯ ಯಕ್ಷಗಾನ ಕಲಾರಂಗದಲ್ಲಿ ಇಂದು ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ತಾಳಮದ್ದಲೆ ಅರ್ಥಧಾರಿಗಳು, ವಿಶ್ವೇಶ್ವರ ಭಟ್ಟರು ತಮ್ಮ ಪತ್ರಿಕೆಯ “ಭಟ್ಟರ ಸ್ಕಾಚ್” ಪ್ರಶೋತ್ತರ ಅಂಕಣದಲ್ಲಿ ತಾಳಮದ್ದಲೆ ಅರ್ಥಧಾರಿಗಳ ಕುರಿತು ಅಸಂಬದ್ಧ, ಅವಮಾನಕಾರಿ ಮತ್ತು ಹೀನ ಅಭಿರುಚಿಯ ಹೇಳಿಕೆಗಳನ್ನು ನಿರಂತರವಾಗಿ ಮಾಡುತ್ತಿದ್ದಾರೆ ಎಂದು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

ವಿಶ್ವವಾಣಿ ಪತ್ರಿಕೆಯ ಅಂಕಣದಲ್ಲಿ ತಾಳಮದ್ದಲೆಯ ಅರ್ಥಧಾರಿಗಳಲ್ಲಿ ಅತಿಹಿರಿಯರಾದ ಖ್ಯಾತ ಯಕ್ಷಗಾನ ವಿದ್ವಾಂಸ, ಸಂಶೋಧಕ ಡಾ. ಎಂ. ಪ್ರಭಾಕರ ಜೋಶಿಯವರ ಹಿರಿತನ, ಜ್ಞಾನ ಮತ್ತು ಅನುಭವಗಳನ್ನು ಪರಿಹಾಸ ಮಾಡುವ ರೀತಿಯಲ್ಲಿ ಬರೆಯಲಾಗಿದೆ. ಅಲ್ಲದೆ, ತಾಳಮದ್ದಲೆಯ ಪ್ರಸ್ತುತ ಸ್ಥಿತಿಗತಿಗಳ ವಿಮರ್ಶೆ ಎಂಬ ನೆಪದಲ್ಲಿ ಕೆಲವು ಅರ್ಥಧಾರಿಗಳನ್ನು “ಐಟಂ ಸಾಂಗ್ ಡ್ಯಾನ್ಸರ್” ಎಂದು ಉಲ್ಲೇಖಿಸಿರುವುದು ಈ ಕಲೆಯ ಘನತೆಗೆ ಧಕ್ಕೆ ತರುವಂತಹದ್ದು ಎಂದು ಅರ್ಥಧಾರಿಗಳು ಆರೋಪಿಸಿದರು.
ವಿಶ್ವೇಶ್ವರ ಭಟ್ಟರ ಹೇಳಕೆಯನ್ನು ಸಾತ್ವಿಕವಾಗಿ ವಿರೋಧ ವ್ಯಕ್ತಪಡಿಸಿದ ಹಿರಿಯ ಅರ್ಥಧಾರಿ ಕೆರೇಕ್ಷೆ ಉಮಾಕಾಂತ ಭಟ್ಟ ಹಾಗೂ ಅರ್ಥಧಾರಿ–ವೇಷಧಾರಿ–ಸಂಘಟಕ ಉಜಿರೆ ಅಶೋಕ ಭಟ್ಟರ ಕುರಿತು ಸಹ ಮುಂದಿನ ಅಂಕಣದಲ್ಲಿ ಕೀಳಾಗಿ ಬರೆಯುವ ಮೂಲಕ ಅವರ ಮಾನಹಾನಿ ಮಾಡಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಡಾ. ಎಂ. ಪ್ರಭಾಕರ ಜೋಶಿ, “ಕಲೆ ಮತ್ತು ಕಲಾವಿದರ ಕುರಿತಾದ ಸಭ್ಯ ವಿಮರ್ಶೆಗೆ ನಾವು ಸದಾ ತೆರೆದ ಮನಸ್ಸಿನಿಂದ ಸಿದ್ಧರಿದ್ದೇವೆ. ಆದರೆ ವಿಮರ್ಶೆಯ ಹೆಸರಿನಲ್ಲಿ ಕಲಾವಿದರ ವೈಯಕ್ತಿಕ ತೇಜೋವಧೆ ಮಾಡುವುದು ಪತ್ರಿಕಾಧರ್ಮಕ್ಕೆ ವಿರುದ್ಧವಾಗಿದೆ. ತಾಳಮದ್ದಲೆಯಂತಹ ಶ್ರೇಷ್ಠ ಕಲೆಯನ್ನು ಅರಿಯದೇ ಅವಹೇಳನ ಮಾಡುವುದು ನೋವಿನ ಸಂಗತಿ” ಎಂದರು.
ಅರ್ಥಧಾರಿಗಳು ತಮ್ಮ ಸಂಯುಕ್ತ ಹೇಳಿಕೆಯಲ್ಲಿ, “ನಾವು ಅರ್ಥಧಾರಿಗಳೆಂಬ ಕಾರಣಕ್ಕೆ ನಮ್ಮ ಬಗ್ಗೆ ಏನು ಹೇಳಿದರೂ ಅದು ವಿಮರ್ಶೆ ಎಂಬ ಹೆಸರಿನಲ್ಲಿ ಸಹಿಸಲೇಬೇಕು ಎಂಬ ತಾತ್ಸಾರ ಧೋರಣೆ ಸಮಾಜದಲ್ಲಿ ಮೂಡಬಾರದು. ಪತ್ರಕರ್ತರಾದ ವಿಶ್ವೇಶ್ವರ ಭಟ್ಟರು ಪತ್ರಿಕಾಧರ್ಮವನ್ನು ಮೀರಿದ ರೀತಿಯಲ್ಲಿ ವರ್ತಿಸುತ್ತಿದ್ದಾರೆ” ಎಂದು ಹೇಳಿದರು.
ಈ ಹಿನ್ನೆಲೆಯಲ್ಲಿ ಅರ್ಥಧಾರಿಗಳು ಮೂರು ಪ್ರಮುಖ ಆಗ್ರಹಗಳನ್ನು ಮುಂದಿಟ್ಟಿದ್ದಾರೆ ತಾಳಮದ್ದಲೆ ಅರ್ಥಧಾರಿಗಳ ಕುರಿತಾದ ಅಬದ್ಧ ಹಾಗೂ ಮಾನಹಾನಿಕರ ಹೇಳಿಕೆಗಳಿಗಾಗಿ ವಿಶ್ವೇಶ್ವರ ಭಟ್ಟರು ತಮ್ಮ ಪತ್ರಿಕೆಯಲ್ಲೇ ಸಾರ್ವಜನಿಕವಾಗಿ ಕ್ಷಮೆ ಯಾಚಿಸಬೇಕು. ಹಾಸ್ಯದ ಹೆಸರಿನಲ್ಲಿ ಅರ್ಥಧಾರಿಗಳ ತೇಜೋವಧೆ ಮಾಡುವ ಪ್ರವೃತ್ತಿಯನ್ನು ತಕ್ಷಣ ನಿಲ್ಲಿಸಿ, ಮುಂದಿನ ದಿನಗಳಲ್ಲಿ ಇಂತಹ ಅನುಚಿತ ಬರಹಗಳನ್ನು ಪ್ರಕಟಿಸುವುದಿಲ್ಲ ಎಂಬ ಬದ್ಧತೆಯನ್ನು ವ್ಯಕ್ತಪಡಿಸಬೇಕು. ತಾಳಮದ್ದಲೆ ಮತ್ತು ಅದರ ಕಲಾವಿದರ ಆತ್ಮಗೌರವಕ್ಕೆ ಧಕ್ಕೆಯಾಗುವ ತನ್ನ ವರ್ತನೆಯನ್ನು ತಾನಾಗಿಯೇ ತಿದ್ದಿಕೊಳ್ಳಬೇಕು.

ಈ ಆಗ್ರಹಗಳನ್ನು ನಿರ್ಲಕ್ಷಿಸಿ ಮುಂದುವರಿದರೂ ಅರ್ಥಧಾರಿಗಳ ವಿರುದ್ಧ ಅವಮಾನಕಾರಿ ಬರಹಗಳು ಪ್ರಕಟವಾದಲ್ಲಿ, ತಾಳಮದ್ದಲೆ ಅರ್ಥಧಾರಿಗಳು ಸಾಮೂಹಿಕವಾಗಿ ಹಾಗೂ ವೈಯಕ್ತಿಕವಾಗಿ ನ್ಯಾಯಾಲಯದ ಮೊರೆ ಹೋಗಿ ವಿಶ್ವೇಶ್ವರ ಭಟ್ಟರು ಹಾಗೂ ಅವರ ಪತ್ರಿಕೆಯ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು. ಎಲ್ಲವೂ ಸದ್ಭಾವದಿಂದ, ಪರಸ್ಪರ ಗೌರವಯುತವಾಗಿ ಅಂತ್ಯಗೊಳ್ಳಲಿ ಎಂಬುದು ನಮ್ಮ ಆಶಯ. ಕಲೆ ಹಾಗೂ ಕಲಾವಿದರ ಗೌರವ ಕಾಪಾಡುವುದು ನಮ್ಮ ಬದ್ಧತೆ ಎಂದು ಅರ್ಥಧಾರಿಗಳು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಪ್ರೊ. ಎಂ. ಎಲ್. ಸಾಮಗ, ಸರ್ವಂಗಳ ಈಶ್ವರ ಭಟ್ಟ, ವಿ | ಉಮಾಕಾಂತ ಭಟ್ಟ, ಭಾಸ್ಕರ ರೈ ಕುಕ್ಕುವಳ್ಳಿ, ವಿ|ಹಿರಣ್ಯ ವೆಂಕಟೇಶ ಭಟ್ಟ, ಸುಣ್ಣಂಬಳ ವಿಶ್ವೇಶ್ವರ ಭಟ್ಟ, ಉಜಿರೆ ಅಶೋಕ ಭಟ್ಟ, ರಾಧಾಕೃಷ್ಣ ಕಲ್ಟಾರ್, ಜಬ್ಬಾರ್ ಸಮೋ ಸಂಪಾಜೆ ಪೆರ್ಮುದೆ, ಜಯಪ್ರಕಾಶ ಶೆಟ್ಟಿ. ಹರೀಶ ಬಳಂತಿ ಮುಗರು, ವಾಸುದೇವ ರಂಗಾಭಟ್ಟ, ಡಾ. ಪ್ರದೀಪ ಸಾಮಗ, ಸಂಕದಗುಂಡಿ ಗಣಪತಿ ಭಟ್ಟ, ಗಣೇಶ ಶೆಟ್ಟಿ ಕನ್ನಡಿಕಟ್ಟೆ, ಪವನ್ ಕಿರಣೆರೆ, ದಿನೇಶ ಶೆಟ್ಟಿ ಕಾವಳಕಟ್ಟೆ ಮುಂತಾದವರು ಉಪಸ್ಥಿತರಿದ್ದರು.





