ಮಹಾರಾಷ್ಟ್ರದ ಲಾತೂರ್ ಜಿಲ್ಲೆಯಲ್ಲಿ ಭಾರಿ ಮಳೆಯಾಗುತ್ತಿದ್ದು, ತೇರನಾ, ಧನೆಗಾಂವ ಸೇರಿದಂತೆ ಇನ್ನಿತರ ಆಣೆಕಟ್ಟು ಭರ್ತಿಯಾಗಿದ್ದು, ಸದರಿ ಜಲಾಶಯಗಳಿಂದ ಮಾಂಜ್ರಾ ನದಿಗೆ ಆ.16 ರಂದು ಮಧ್ಯಾಹ್ನ ನೀರು ಹರಿಸುತ್ತಿರುವ ಬಗ್ಗೆ ಮುನ್ಸೂಚನೆ ಬಂದಿದ್ದ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗದಂತೆ ಕಟ್ಟೆಚ್ಚರ ವಹಿಸುವಂತೆ ಅಧಿಕಾರಿಗಳಿಗೆ ಜಿಲ್ಲಾಡಳಿತ ಸೂಚಿಸಿದೆ
ʼಮಹಾರಾಷ್ಟ್ರದ ಜಲಾಶಯಗಳಿಂದ ನೀರು ಹರಿಸುತ್ತಿದ್ದು, ಹೀಗಾಗಿ ಹುಲಸೂರ ತಾಲೂಕಿನ ಕೊಂಗಳಿ ಬ್ಯಾರೇಜ್ ನೀರಿನ ಪ್ರಮಾಣ ನಿಯಂತ್ರದಲ್ಲಿರಿಸಿ ಪ್ರವಾಹ ಪರಿಸ್ಥಿತಿ ಉಂಟಾಗದಂತೆ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಜಿಲ್ಲೆಯ ಎಲ್ಲಾ ತಾಲೂಕು ತಹಶೀಲ್ದಾರರು ಹಾಗೂ ತಾಲೂಕು ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಸೂಚಿಸಲಾಗಿದೆ.
ಜಿಲ್ಲೆಯಲ್ಲಿಆಗಸ್ಟ್ ತಿಂಗಳಲ್ಲಿ ಆಗುತ್ತಿರುವ ಭಾರಿ ಮಳೆಯಿಂದ ಕಾರಂಜಾ ಜಲಾಶಯ ಬಹುತೇಕ ಭರ್ತಿಯಾಗಿದ್ದು, ಮಳೆ ಕಡಿಮೆ ಆಗದಿದ್ದಲ್ಲಿ ಕಾರಂಜಾ ಜಲಾಶಯದಿಂದ ಮಾಂಜ್ರಾ ನದಿಗೆ ನೀರು ಹರಿಸಲಾಗುವುದು. ಇದರಿಂದ ಮಾಂಜ್ರಾ ನದಿ ದಡಕ್ಕೆ ಹೊಂದಿಕೊಂಡಿರುವ ಗ್ರಾಮಗಳ ಗ್ರಾಮಸ್ಥರು, ರೈತರು ನದಿಗೆ ಇಳಿಯದಂತೆ ಹಾಗೂ ಜಾನುವಾರುಗಳನ್ನು ನದಿ ದಡದಿಂದ ಹಾದು ಹೋಗದಂತೆ ಎಚ್ಚರ ವಹಿಸುವುದು ಅತೀ ಅವಶ್ಯಕವಾಗಿದೆ ಎಂದು ಅಪರ ಜಿಲ್ಲಾಧಿಕಾರಿಗಳ ಸಹಿ ಇರುವ ಪ್ರಕಟಣೆಯಲ್ಲಿ ಶನಿವಾರ ತಿಳಿಸಿದ್ದಾರೆ.
ಕಾರಂಜಾ ಜಲಾಶಯ ಹಾಗೂ ಮಾಂಜ್ರಾ ನದಿಗೆ ಹೊಂದಿಕೊಂಡಿರುವ ಗ್ರಾಮಗಳ ಕಂದಾಯ ಇಲಾಖೆಯ ಅಧಿಕಾರಿಗಳು, ಗ್ರಾಮ ಪಂಚಾಯತಿ ಪಿಡಿಒಗಳು ಕೇಂದ್ರಸ್ಥಾನದಲ್ಲಿದ್ದು, ಡಂಗೂರು ಸಾರುವ ಮೂಲಕ ಸುತ್ತಲಿನ ಗ್ರಾಮಸ್ಥರಿಗೆ ಮುನ್ನೂಚನೆ ಮಾಹಿತಿ ತಿಳಿಸಬೇಕು. ಯಾವುದೇ ಅಹಿತಕರ ಘಟನೆಗಳನ್ನು ಸಂಭವಿಸದಂತೆ ಎಚ್ಚರವಹಿಸಬೇಕು. ಇಲ್ಲದಿದ್ದರೆ ನಿಯಮಾನುಸಾರ ಕ್ರಮ ಕೈಗೊಳ್ಳಲಾಗುವುದು ಎಂದು ಅಪರ ಜಿಲ್ಲಾಧಿಕಾರಿ ಶಿವಾನಂದ ಬಿ.ಕರಾಳೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಇದನ್ನೂ ಓದಿ : ರಾಜ್ಯದಲ್ಲಿ 31 ತಿಂಗಳಲ್ಲಿ 10,510 ಪೋಕ್ಸೋ ಪ್ರಕರಣ : 162 ಮಂದಿಗಷ್ಟೇ ಶಿಕ್ಷೆ!





