- ‘ರಾಜ್ಯದ ಹಿತರಕ್ಷಣೆಗೆ ಹೋರಾಟ ಮಾಡಲು ನಾವು ಬದ್ಧರಾಗಿದ್ದೇವೆ’
- ‘ಕೇಂದ್ರ ಸರ್ಕಾರವನ್ನು ಈ ಸಂಘಟನೆಗಳು ಮೊದಲು ಒತ್ತಾಯಿಸಲಿ’
ಅನೇಕ ಸಂಘಟನೆಗಳು ಕಾವೇರಿ ನೀರಿಗಾಗಿ ಹೋರಾಟ ಮಾಡುತ್ತಿವೆ. ನಾನು ಆ ಸಂಘಟನೆಗಳನ್ನು ಅಭಿನಂದಿಸುವೆ. ಆದರೆ, ಮೇಕೆದಾಟು ಯೋಜನೆಗೆ ಆಗ್ರಹಿಸಿ ಪಾದಯಾತ್ರೆ ಮಾಡಿದಾಗ ಈ ಸಂಘಟನೆಗಳು ಎಲ್ಲಿದ್ದವು?” ಎಂದು ಡಿಸಿಎಂ ಡಿಕೆ ಶಿವಕುಮಾರ್ ಕಿಡಿಕಾರಿದರು.
ಬೆಂಗಳೂರಿನಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, “ಈಗ ಇವರ ಹೋರಾಟ ಕೇಂದ್ರ ಸರ್ಕಾರದ ವಿರುದ್ಧ ಇರಬೇಕು. ಮೇಕೆದಾಟು ಯೋಜನೆಗೆ ಅನುಮತಿ ನೀಡಿ ಎಂದು ಯಾಕೆ ಕೇಂದ್ರ ಸರ್ಕಾರವನ್ನು ಈ ಸಂಘಟನೆಗಳು ಒತ್ತಾಯಿಸುತ್ತಿಲ್ಲ” ಪ್ರಶ್ನಿಸಿದರು.
“ಕಾವೇರಿ ಸಮಸ್ಯೆಗೆ ಮೇಕೆದಾಟು ಯೋಜನೆ ಒಂದೇ ಪರಿಹಾರ. ಇದರಲ್ಲಿ ರಾಜಕಾರಣ ಮಾಡುವುದರಲ್ಲಿ ಪ್ರಯೋಜನ ಇಲ್ಲ. ಕಾವೇರಿ ನದಿ ನೀರಿನ ವಿಚಾರವಾಗಿ ಮಾತನಾಡುತ್ತಿರುವ ಈ ಸಂಘಟನೆಗಳಾಗಲಿ, ಬಿಜೆಪಿ, ಜೆಡಿಎಸ್ ನಾಯಕರುಗಳಾಗಲಿ ಮೇಕೆದಾಟು ಯೋಜನೆಗೆ ಅನುಮತಿ ನೀಡಿ ಎಂದು ಕೇಂದ್ರ ಸರ್ಕಾರವನ್ನು ಇವರೆಲ್ಲ ಆಗ್ರಹಿಸುತ್ತಿಲ್ಲ. ಪರಿಸರ ಇಲಾಖೆಯಿಂದ ಅನುಮತಿ ನೀಡಿ ಎಂದು ಕೇಳುತ್ತಿಲ್ಲ” ಎಂದು ಹರಿಹಾಯ್ದರು.
“ನ್ಯಾಯಾಲಯದಲ್ಲೂ ರಾಜ್ಯದ ಹಿತರಕ್ಷಣೆಗೆ ಹೋರಾಟ ಮಾಡಲು ನಾವು ಬದ್ಧರಾಗಿದ್ದೇವೆ. ಈ ವಿಚಾರವಾಗಿ ನಾನು ಕಾನೂನು ತಜ್ಞರ ತಂಡದ ಜತೆ ಚರ್ಚೆ ಮಾಡಿದ್ದೇನೆ. ನಮ್ಮ ಅಣೆಕಟ್ಟುಗಳ ವಾಸ್ತವ ಸ್ಥಿತಿ ಹೇಗಿದೆ ಎಂದು ಅವರಿಗೆ ಮನವರಿಕೆ ಮಾಡಲಿದ್ದೇವೆ” ಎಂದರು.
“ನಮ್ಮ ರೈತರ ಹಿತ ಕಾಯಲು ನಾವು ಬದ್ಧರಾಗಿದ್ದೇವೆ. ಅದೇ ಕಾರಣಕ್ಕೆ ತಮಿಳುನಾಡಿನವರು ನಿತ್ಯ 24 ಸಾವಿರ ಕ್ಯುಸೆಕ್ ನೀರು ಕೇಳಿದ್ದರು. 3 ಸಾವಿರ ಕ್ಯುಸೆಕ್ ಮಾತ್ರ ಬಿಡಲು ಸಾಧ್ಯ ಎಂದು ನಮ್ಮ ಅಧಿಕಾರಿಗಳು ಸಮರ್ಥವಾಗಿ ವಾದ ಮಾಡಿದ್ದರ ಪರಿಣಾಮ ಈಗ ಪ್ರಾಧಿಕಾರ 5 ಸಾವಿರ ಕ್ಯುಸೆಕ್ ನೀರು ಬಿಡಲು ಅದೇಶಿಸಿದೆ” ಎಂದು ವಿವರಿಸಿದರು.
ಈ ಸುದ್ದಿ ಓದಿದ್ದೀರಾ? ‘ಈ ದಿನ’ ಸಂಪಾದಕೀಯ | ಏರ್‌ಲೈನ್ಸ್ ಹಗಲುಗನಸಿನಿಂದ ರಾಜ್ಯ ಸರ್ಕಾರ ಹಿಂದೆ ಸರಿಯಲಿ
ರಾಜ್ಯದಲ್ಲಿ ಬರದ ವಿಚಾರವಾಗಿ ಪತ್ರಕರ್ತರು ಪ್ರಶ್ನಿಸಿದಾಗ, “ಈ ವಿಚಾರವಾಗಿ ಕ್ಯಾಬಿನೆಟ್ ಸಬ್ ಕಮಿಟಿ ವರದಿ ನೀಡಿದೆ. ಇದಕ್ಕೆ ಸಂಬಂಧಪಟ್ಟ ಸಚಿವರು ಬರ ಘೋಷಣೆ ಮಾಡಲಿದ್ದಾರೆ” ಎಂದು ಹೇಳಿದರು.
“ನವರಂಗಿ ನಾರಾಯಣ ಕಾಂಗ್ರೆಸ್ ಬ್ಲ್ಯಾಕ್ ಮೇಲೆ ರಾಜಕಾರಣ ಮಾಡುತ್ತಿದ್ದಾರೆ” ಎಂದು ಅಶ್ವತ್ಥ ನಾರಾಯಣ ಆರೋಪಿಸಿದ್ದಾರಲ್ಲ ಎಂದು ಪತ್ರಕರ್ತರು ಪ್ರಶ್ನಿಸಿದಾಗ, “ಓಹ್, ನವರಂಗಿ ನಾರಾಯಣ ಅವರು ಬ್ಲ್ಯಾಕ್ ಮೇಲ್ ರಾಜಕಾರಣದ ಬಗ್ಗೆ ಮಾತನಾಡುತ್ತಿದ್ದಾರಾ? ನಮ್ಮ ಎಂ ಬಿ ಪಾಟೀಲರು ಸರಿಯಾಗಿಯೇ ಉತ್ತರಿಸಿದ್ದಾರೆ” ಎಂದರು.





