2012ರ ಡಿಸೆಂಬರ್ 16ರಂದು ದೆಹಲಿಯಲ್ಲಿ ‘ನಿರ್ಭಯ’ ಅತ್ಯಾಚಾರ ನಡೆದಿದ್ದು ಇದೇ ದಿನದಂದು ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿಯಲ್ಲಿ ಮಹಿಳಾ ನ್ಯಾಯ ಸಮಾವೇಶ ಮತ್ತು ಮೌನ ಮೆರವಣಿಗೆ ನಡೆಯಲಿದೆ. ಧರ್ಮಸ್ಥಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವರದಿಯಾದ ಮಹಿಳೆಯರ ಮೇಲಿನ ದೌರ್ಜನ್ಯ, ಅತ್ಯಾಚಾರ ಮತ್ತು ಕೊಲೆ ಪ್ರಕರಣಗಳಿಗೆ ನ್ಯಾಯ ಒದಗಿಸುವಂತೆ ಒತ್ತಾಯಿಸಿ ಈ ಮಹಿಳಾ ನ್ಯಾಯ ಸಮಾವೇಶ ನಡೆಯಲಿದೆ.
ಈಗಾಗಲೇ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ‘ಕೊಂದವರು ಯಾರು?’ ಸಹಿ ಸಂಗ್ರಹ ಅಭಿಯಾನ(who killed women in Dharmasthala?) ನಡೆಯುತ್ತಿದೆ. ದೇಶದಾದ್ಯಂತ ಆನ್‌ಲೈನ್ ಸಹಿ ಸಂಗ್ರಹ ಅಭಿಯಾನವೂ ಮುಂದುವರೆದಿದೆ. ಈ ನಡುವೆ ಸಮಾವೇಶದ ಪ್ರಚಾರವೂ ನಡೆಯುತ್ತಿದೆ.
ಇದನ್ನು ಓದಿದ್ದೀರಾ? ಧರ್ಮಸ್ಥಳ ಪ್ರಕರಣ | ಹೋರಾಟಗಾರ್ತಿಯರ ಮುತುವರ್ಜಿಯಲ್ಲಿ ಮುಂದುವರೆದಿದೆ ‘ಕೊಂದವರು ಯಾರು?’ ಸಹಿ ಸಂಗ್ರಹ ಅಭಿಯಾನ
ಈ ಬಗ್ಗೆ ಈದಿನ ಡಾಟ್ ಕಾಮ್‌ಗೆ ಪ್ರತಿಕ್ರಿಯಿಸಿದ ಮಹಿಳಾಪರ ಹೋರಾಟಗಾರ್ತಿ, ಕೊಂದವರು ಯಾರು ಅಭಿಯಾನದ ಭಾಗವಾಗಿರುವ ಮೀನಾಕ್ಷಿ ವಿ, “ಸದ್ಯ ಮಹಿಳಾ ನ್ಯಾಯ ಸಮಾವೇಶ ಮತ್ತು ಜಾಥದ ಪ್ರಚಾರ ಉತ್ತಮವಾಗಿ ನಡೆಯುತ್ತಿದೆ. ಜನರಿಂದ ಉತ್ತಮ ಸ್ಪಂದನೆಯಿದೆ. ನಾವು ಜನರಲ್ಲಿ ಏನೂ ಕೇಳಬೇಕಾಗಿಲ್ಲ, ಏನೂ ಹೇಳಬೇಕಾಗಿಲ್ಲ. ನಾವು ಹೋದಲ್ಲಿ ಜನರೇ ಮಾತನಾಡುತ್ತಾರೆ. ಹೆಣ್ಣು ಮಕ್ಕಳಿಗೆ ಅನ್ಯಾಯವಾಗಿದೆ. ನ್ಯಾಯ ದೊರಕಬೇಕು ಎಂದು ಆಗ್ರಹಿಸುತ್ತಾರೆ” ಎಂದು ತಿಳಿಸಿದ್ದಾರೆ.
“ಬೆಳ್ತಂಗಡಿಯಲ್ಲಿ ನಡೆಯುವ ಮಹಿಳಾ ನ್ಯಾಯ ಸಮಾವೇಶಕ್ಕೆ ಬೇರೆ ಬೇರೆ ಜಿಲ್ಲೆಗಳಿಂದ ಮಹಿಳೆಯರು ಸೇರಲಿದ್ದಾರೆ. ನಾವು ಪ್ರಚಾರಕ್ಕೆ ಹೋದಲ್ಲಿ ಇಷ್ಟು ವರ್ಷವಾದರೂ ನ್ಯಾಯ ಯಾಕೆ ಸಿಗಲಿಲ್ಲ? ಸರ್ಕಾರ, ನ್ಯಾಯಾಂಗ ವ್ಯವಸ್ಥೆ ಎಲ್ಲಿ ಎಡವುತ್ತಿದೆ? ಹೀಗೆಯೇ ಮುಂದುವರೆದರೆ, ಅಪರಾಧಿಗಳಿಗೆ ಶಿಕ್ಷೆಯಾಗದಿದ್ದರೆ ಜನರಲ್ಲಿ ನ್ಯಾಯಾಂಗದ ಮೇಲೆ ಭಯ ಇರುವುದಿಲ್ಲ. ಈ ರೀತಿಯೇ ಅಪರಾಧ ಕೃತ್ಯಗಳು ಮುಂದುವರೆಯುತ್ತದೆ ಎಂಬಂತಹ ಅಭಿಪ್ರಾಯಗಳು ಮಹಿಳೆಯರಿಂದ ವ್ಯಕ್ತವಾಗಿದೆ” ಎಂದು ಹೇಳಿದರು.
ಧರ್ಮಸ್ಥಳದ ಸುತ್ತ ನಡೆದಿದೆ ಎನ್ನಲಾದ ಅತ್ಯಾಚಾರ, ಕೊಲೆ ಪ್ರಕರಣಗಳಿಗೆ ಸಂಬಂಧಿಸಿದಂತೆ ಕೊಂದವರು ಯಾರು ತಂಡ ಹಲವು ಪ್ರಶ್ನೆಗಳನ್ನು ಎತ್ತಿದೆ. ಈ ಪ್ರಶ್ನೆಗಳನ್ನು ಮುಂದಿಟ್ಟು ಸಹಿ ಸಂಗ್ರಹ ಮತ್ತು ಸಮಾವೇಶವನ್ನು ನಡೆಸಲಾಗುತ್ತಿದೆ. ತಂಡ ಎತ್ತಿರುವ ಪ್ರಶ್ನೆಗಳು, ಅನುಮಾನಗಳು ಈ ಕೆಳಗಿನಂತಿವೆ:
- ವೇದವಲ್ಲಿ ಹತ್ಯೆ: ಧರ್ಮಸ್ಥಳದ ಎಸ್‌ಡಿಎಂ ಸಂಸ್ಥೆಯಲ್ಲಿ ದಕ್ಷ ಶಿಕ್ಷಕಿಯಾಗಿದ್ದ ವೇದವಲ್ಲಿಯವರು ತಮಗೆ ಬಡ್ತಿ ಸಿಗದ ಅನ್ಯಾಯದ ವಿರುದ್ಧ ಹೋರಾಡಿದವರು. 1979ರಲ್ಲಿ ಅವರ ಮನೆಯಲ್ಲೇ ಅವರ ಮೇಲೆ ಅತ್ಯಾಚಾರವೆಸಗಿ ಬೆಂಕಿ ಹಚ್ಚಲಾಗುತ್ತದೆ. ಅದನ್ನು ಪೊಲೀಸರು ಆತ್ಮಹತ್ಯೆ ಎಂದು ದಾಖಲಿಸುತ್ತಾರೆ. ಸರ್ಕಾರಿ ವೈದ್ಯರಾಗಿದ್ದ ಆಕೆಯ ಗಂಡ ಅದನ್ನು ಕೊಲೆ ಎಂದು ದಾಖಲಿಸಲು ಒತ್ತಾಯಿಸಿದಾಗ ಪೊಲೀಸರು ಅವರನ್ನೇ ಆರೋಪಿಯನ್ನಾಗಿ ಮಾಡುತ್ತಾರೆ. ಅವರು ನ್ಯಾಯಾಲಯದಿಂದ ಖುಲಾಸೆಯಾದರೂ ನಿಜವಾದ ಕೊಲೆಗಾರರನ್ನು ಪೊಲೀಸರು ಈವರೆಗೂ ಪತ್ತೆ ಮಾಡದಿರುವುದು ಯಾಕೆ?
- ಪದ್ಮಲತಾ ಕೊಲೆ: 17 ವರ್ಷದ, ಉಜಿರೆ ಕಾಲೇಜಿನ ವಿದ್ಯಾರ್ಥಿನಿ ಪದ್ಮಲತಾಳನ್ನು 1986ರಲ್ಲಿ ಅಪಹರಿಸಿ, ಭೀಕರವಾಗಿ ಅತ್ಯಾಚಾರವೆಸೆಗಿ ಕೊಲೆಗೈದು, ಕೈಕಾಲು ಕಟ್ಟಿಹಾಕಿದ್ದ ಸ್ಥಿತಿಯಲ್ಲಿದ್ದ ಆಕೆಯ ದೇಹವನ್ನು 56 ದಿನಗಳ ಬಳಿಕ ಹೊಳೆ ಬದಿಯಲ್ಲಿ ಎಸೆಯಲಾಗಿತ್ತು, ಆಕೆಯ ತಂದೆ ದೂರು ನೀಡಿದರೂ ರಾಜಕೀಯ ಒತ್ತಡದಿಂದ ಪೊಲೀಸರು ಈ ಪ್ರಕರಣವನ್ನು ಮುಚ್ಚಿಹಾಕಿದರು.
- ಯಮುನಾ (ಮತ್ತು ನಾರಾಯಣ) ಜೋಡಿ ಕೊಲೆ: 2012ರಲ್ಲಿ ಧರ್ಮಸ್ಥಳದಲ್ಲಿ ಈ ಅಣ್ಣ-ತಂಗಿ ಜೋಡಿಯ ತಲೆಗೆ ಕಲ್ಲು ಜಜ್ಜಿ ಅವರ ಮನೆಯೊಳಗರ ಭೀಕರವಾಗಿ ಕೊಲೆ ಮಾಡಲಾಗಿತ್ತು. ನಾರಾಯಣ ದೇವಸ್ಥಾನವೊಂದರಲ್ಲಿ ಆನೆ ಮಾವುತನಾಗಿ ನಿವೃತ್ತರಾಗಿದ್ದರು. ತಾವು ಆಗ ಸ್ಥಳೀಯ ಪೊಲೀಸರಿಗೆ ದೂರು ನೀಡಲು ಹೋದರೂ ದೂರು ಸ್ವೀಕರಿಸಲಿಲ್ಲ ಎಂದು ನಾರಾಯಣನ ಮಗ ಹೇಳುತ್ತಾರೆ. ಈಗ SITಯಲ್ಲಿ ಶಂಕಿತರ ಹೆಸರನ್ನು ಬರೆದು ಪುನಃ ದೂರು ದಾಖಲಿಸಿದ್ದಾರೆ.
- ಸೌಜನ್ಯ ಅತ್ಯಾಚಾರ-ಕೊಲೆ: 2012ರಲ್ಲಿ 17 ವರ್ಷದ ವಿದ್ಯಾರ್ಥಿನಿ ಸೌಜನ್ಯಳನ್ನು ಧರ್ಮಸ್ಥಳದಲ್ಲಿ ಅಪಹರಿಸಿ ಘೋರವಾಗಿ ಅತ್ಯಾಚಾರಗೈದು ಹತ್ಯೆಮಾಡಿ ಅವಳ ಮೃತದೇಹವನ್ನು ಕಾಡಿನಲ್ಲಿ ಎಸೆಯಲಾಗಿತ್ತು. ಅವಳ ಮನೆಯವರು ಪೊಲೀಸರಲ್ಲಿ ದೂರು ದಾಖಲಿಸಿದ ಬಳಿಕ ಅಮಾಯಕ ಯುವಕನನ್ನು ಬಂಧಿಸಿದ ಪೊಲೀಸರು, ಮನೆಯವರು ಹೆಸರಿಸಿದ ಶಂಕಿತರನ್ನು ವಿಚಾರಿಸಲಿಲ್ಲ. ಪ್ರಕರಣ ಸಿಬಿಐಗೆ ಹಸ್ತಾಂತರವಾಯಿತು. ಯುವಕನನ್ನು ಸಿಬಿಐ ಕೋರ್ಟ್ 2023ರಲ್ಲಿ ಖುಲಾಸೆಗೊಳಿಸಿ ಪೊಲೀಸ್ ತನಿಖೆಯ ಬಗ್ಗೆ ಛೀಮಾರಿ ಹಾಕಿ ಸಾಕ್ಷ್ಯ ನಾಶಪಡಿಸಿದ್ದ ಅಧಿಕಾರಿಗಳ ಮೇಲೆ ಆಕ್ಟಿಟಲ್ ಕಮಿಟಿ ಕ್ರಮ ಕೈಗೊಳ್ಳುವಂತೆ ಸರ್ಕಾರಕ್ಕೆ ಆದೇಶ ನೀಡಿತು. SIT ಈ ಪೊಲೀಸರನ್ನೂ ವಿಚಾರಣೆ ಮಾಡಬೇಕು ಅಲ್ಲವೇ?
ಮಹಿಳೆಯರು ಮತ್ತು ಯುವತಿಯರು ಸೇರಿದಂತೆ ನೂರಾರು ಜನರ ಅಸಹಜ ಸಾವುಗಳು ಧರ್ಮಸ್ಥಳ ಮತ್ತದರ ಸುತ್ತಲೂ ನಡೆದಿದೆ ಎಂದು ಮಹಿಳೆಯರ ಮತ್ತು ಮಕ್ಕಳ ಮೇಲಿನ ದೌರ್ಜನ್ಯ ತಡೆಯುವ ಸಲುವಾಗಿ ವರದಿ ನೀಡಲು ಸರ್ಕಾರವೇ ರಚಿಸಿದ್ದ ತಜ್ಞರ ಉಗ್ರಪ್ಪ ಸಮಿತಿಯ ಮುಂದೆ 2016ರಲ್ಲಿ ಅಪರ SPತಿಳಿಸಿದ್ದರು. ಪ್ರತಿ ವರ್ಷ ಕನಿಷ್ಠ 100 ಮಂದಿ ಅಸಹಜ ಸಾವನ್ನಪ್ಪಿದ್ದರು ಎಂದೂ ಅವರೇ ಒಪ್ಪಿಕೊಂಡಿದ್ದರು. ಧರ್ಮಸ್ಥಳ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾದರೂ ಅಪರಾಧಿಗಳೇ ಪತ್ತೆಯಾಗದ ಮಹಿಳೆಯರ ಅತ್ಯಾಚಾರ, ಕೊಲೆ, ಅಸಹಜ ಸಾವು, ನಾಪತ್ತೆ ಪ್ರಕರಣಗಳು ಸಂಭವಿಸಿರುವ ಬಗ್ಗೆ ಕಳೆದ ಕೆಲವು ದಶಕಗಳಲ್ಲಿ ಅಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಪೊಲೀಸರನ್ನೂ ವಿಚಾರಣೆ ಮಾಡಿ ಸತ್ಯ ಹೊರತರುವ ಜವಾಬ್ದಾರಿ SITಯದ್ದು ಅಲ್ಲವೇ?
ಇದನ್ನು ಓದಿದ್ದೀರಾ? ‘ಧರ್ಮಸ್ಥಳದಲ್ಲಿ ಕೊಂದವರು ಯಾರು?’; ನೊಂದವರ ಜೊತೆ ನಿಂತ ಮಹಿಳಾ ಶಕ್ತಿ
ಇಂತಹ ಸನ್ನಿವೇಶದಲ್ಲೂ ಪೊಲೀಸರು ಅಪರಾಧಿಗಳನ್ನು ಪತ್ತೆಹಚ್ಚದೆ ಪ್ರಕರಣಗಳನ್ನು ಮುಚ್ಚಿಹಾಕಿರುವುದು ಏಕೆ? ಮಹಿಳೆಯರ ಮೇಲೆ ಅತ್ಯಾಚಾರವಾದಾಗ, ಪೊಲೀಸರು ವೈದ್ಯಕೀಯ ವರದಿಯ ಸಾಕ್ಷ್ಯವನ್ನು ರಕ್ಷಿಸಲಿಲ್ಲವೇಕೆ? ಈ ಸಾವುಗಳಿಗೆ ಕಾರಣ ಯಾರು? ಆರೋಪಿಗಳ ವಿಚಾರಣೆ ಯಾಕಿಲ್ಲ? ಅಪರಾಧಿಗಳನ್ನು ನಮ್ಮ ಪೋಲಿಸ್ ಇಲಾಖೆ ಪತ್ತೆಹಚ್ಚಲಾರದೇ? ಇಡೀ ಪೊಲೀಸ್ ವ್ಯವಸ್ಥೆಗೆ ಇದರಿಂದ ಕಪ್ಪುಚುಕ್ಕೆಯಾಗಿಲ್ಲವೆ ?
ಇದರ ಹಿಂದೆ ಯಾವ ಕಾಣದ ಶಕ್ತಿಗಳ ಕೈವಾಡವಿದೆ? ನೇತ್ರಾವತಿ ಸ್ನಾನಘಟ್ಟದಲ್ಲಿ ಅಸಹಜ ಸಾವುಗಳಾಗುತ್ತವೆ ಎಂದಾಗ, ಅಲ್ಲಿ ಈವರೆಗೆ ಪೊಲೀಸ್ ಭದ್ರತೆ ಯಾಕಿಲ್ಲ? ಬೆಳ್ತಂಗಡಿ ಪೊಲೀಸ್ ಠಾಣೆಯ ಬೇರೆಡೆಗಳಿಗೆ ಹೋಲಿಸಿದರೆ ಧರ್ಮಸ್ಥಳ ವ್ಯಾಪ್ತಿಯಲ್ಲೇ ಆತ್ಮಹತ್ಯೆಗಳು ದಾಖಲಾಗಿರುವುದು ಏಕೆ? (2001-2012)





