ಕರ್ನಾಟಕ ಪಬ್ಲಿಕ್ ಸ್ಕೂಲ್ (KPS) ಶಾಲೆಗಳಲ್ಲಿ ಉಚಿತ ಸಾರಿಗೆ ಅವಕಾಶ ಕಲ್ಪಿಸುವುದರಿಂದ ಖಾಸಗಿ ಶಾಲೆಗಳ ಹಿರಿಮೆ ಕಡಿಮೆಯಾಗುತ್ತದೆ ಎಂದು ಆಡಳಿತ ಹೇಳುತ್ತದೆ. ಜೊತೆಗೆ, ಕೆಲವು ಕೌಶಲ್ಯಗಳ ಬದಲಾವಣೆ ಮಾಡುವುದರಿಂದ ಪೋಷಕರು ಖಾಸಗಿ ಶಾಲೆಗಳಿಗಿಂತ ಹೆಚ್ಚಾಗಿ ಸರ್ಕಾರಿ ಶಾಲೆಗಳನ್ನೇ ಆಯ್ಕೆ ಮಾಡುತ್ತಾರೆ ಎಂದು ಸರ್ಕಾರ ಅಂದುಕೊಳ್ಳುತ್ತಿದೆ. ಆದರೆ, ಈ ಉಚಿತ ಬಸ್ ವ್ಯವಸ್ಥೆ ಮಾಡುವ ಹೊಣೆಯನ್ನು ಯಾರು ಹೊರಬೇಕು? ಯಾರು ಹಣಕಾಸು ಒದಗಿಸಬೇಕು? ಎಂದು AIDSO ಪ್ರಶ್ನಿಸಿದೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಸಂಘಟನೆಯ ಮುಖಂಡರು, “ಸರ್ಕಾರದ ದಾಖಲೆಗಳ ಪ್ರಕಾರ ವಿದ್ಯಾರ್ಥಿಗಳಿಗೆ ಉಚಿತ ಬಸ್ ಸೇವೆ ಒದಗಿಸುವ ಹೊಣೆಯನ್ನು ಶಾಲಾ ಅಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ (SDMC)ಗೆ ವಹಿಸಲಾಗಿದೆ. ಈ SDMCಗಳು ಗ್ರಾಮ ಪಂಚಾಯತಿಗಳಿಂದ ಹಣ ಪಡೆಯಬೇಕಾಗುತ್ತದೆ ಎಂದು ಹೇಳಲಾಗಿದೆ. ಆದರೆ, ನಾಡ ಆಳಿಕೆ ಏಕೆ ಹಣಕಾಸು ನೆರವು ನೀಡುತ್ತಿಲ್ಲ?, ಈ ಹಮ್ಮುಗೆಯಲ್ಲಿ ಕರ್ನಾಟಕ ಸರ್ಕಾರದ ಪಾತ್ರವೇನು?, ಈ ದಾಖಲೆಯಲ್ಲಿ, ಕರ್ನಾಟಕ ಆಳಿಕೆಯು ಅನುದಾನವನ್ನು ಹೇಗೆ ಒದಗಿಸುತ್ತದೆ ಎಂಬುದರ ಬಗ್ಗೆ ಎಲ್ಲೂ ಹೇಳಿಲ್ಲ ಯಾಕೆ?, ಉಚಿತ ಬಸ್ ಸೇವೆಗೆ SDMC ಗಳನ್ನು ಏಕೆ ಒತ್ತಾಯಿಸಲಾಗುತ್ತಿದೆ? SDMC ಗಳು ಗ್ರಾಮ ಪಂಚಾಯಿತಿಗಳಿಂದ ಹಣಕಾಸು ನೆರವು ಹೇಗೆ ಪಡೆಯಬೇಕು?” ಎಂಬುದು ಸೇರಿದಂತೆ ಹಲವು ಪ್ರಶ್ನೆಗಳಿಗೆ ಉತ್ತರ ಅಪೇಕ್ಷಿಸಿದ್ದಾರೆ.
ಇದನ್ನೂ ಓದಿ: ಧಾರವಾಡ | ಡಿ. 10ರಂದು ಉದ್ಯೋಗಾಕಾಂಕ್ಷಿಗಳ ಬೃಹತ್ ಪ್ರತಿಭಟನಾ ಧರಣಿ
“ಇಂತಹ ಪ್ರಮುಖ ಹಮ್ಮುಗೆಗೆ ಹಣಕಾಸು ಹಂಚಿಕೆಯ ಬಗ್ಗೆ ಆಡಳಿತ ಮಂಡಳಿ ಸರಿಯಾದ ಮತ್ತು ಪಾರದರ್ಶಕ ಉತ್ತರ ನೀಡಬೇಕಿದೆ. ಉಚಿತ ಸಾರಿಗೆ ವ್ಯವಸ್ಥೆಯೊಂದಿಗೆ ಕಡ್ಡಾಯ ಕಲಿಕೆಯ ಹಕ್ಕಿನ ಜಾರಿಗೆ ಸರಿಯಾದ ಹಣಕಾಸು ಕೊಡದೆ ಈ ಹಮ್ಮುಗೆಯನ್ನು ಏಕೆ ಜಾರಿ ಮಾಡಲು ಹೊರಟಿದೆ? ಇದರ ಹಿಂದೆ ಏನಾದರೂ ಕುತಂತ್ರ ಅಡಗಿದೆಯೇ? ಕಲಿಸುವ ಹೊಣೆಗಾರಿಕೆಯಿಂದ ನಾಡ ಆಡಳಿತ ಉಪಾಯವಾಗಿ ಹಿಂದೆ ಸರಿಯುತ್ತಿದೆಯೇ?” ಎಂದು ಪ್ರಶ್ನಿಸಿದ್ದಾರೆ.





