ಕೊಡಗು ಜಿಲ್ಲೆಯಲ್ಲಿ ಭಾರೀ ಮಳೆಯಾಗುತ್ತಿದ್ದು, ಮನೆಯ ಗೋಡೆ ಕುಸಿದು ಮಹಿಳೆಯೊಬ್ಬರು ಮೃತಪಟ್ಟಿರುವ ಘಟನೆ ಸೋಮವಾರಪೇಟೆ ತಾಲೂಕಿನ ಹಾನಗಲ್ಲು ಗ್ರಾಮದಲ್ಲಿ ನಡೆದಿದೆ.
ಮೃತರನ್ನು ಕಲಬುರಗಿ ಮೂಲದ ಸುಷ್ಮಾ ಎಂದು ಗುರುತಿಸಲಾಗಿದೆ. ಸುಷ್ಮಾ ಅವರು ತಮ್ಮ ಪತಿಯೊಂದಿಗೆ ಕೊಡಗು ಜಿಲ್ಲೆಗೆ ಕೆಲಸಕ್ಕಾಗಿ ವಲಸೆ ಬಂದಿದ್ದರು. ಹಾನಗಲ್ಲು ಗ್ರಾಮದಲ್ಲಿ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದರು. ಶುಕ್ರವಾರ ರಾತ್ರಿ ಸುರಿದ ಭಾರೀ ಮಳೆಗೆ ಮನೆಯ ಗೋಡೆ ಕುಸಿದುಬಿದ್ದಿದ್ದು, ಮನೆಯಲ್ಲಿದ್ದ ಸುಷ್ಮಾ ಮೃಪಟ್ಟಿದ್ದಾರೆ ಎಂದು ತಿಳಿದುಬಂದಿದೆ.
ಶನಿವಾರವೂ ಮಳೆ ಮತ್ತು ಗಾಳಿ ಮುಂದುವರೆದಿದ್ದು, ಜನಜೀವನ ಅಸ್ಥವ್ಯಸ್ತವಾಗಿದೆ. ಬಿರುಗಾಳಿಗೆ ಸಿಲುಕಿ ಹಲವೆಡೆ ಮರಗಳು ಉರುಳಿಬಿದ್ದಿವೆ. ಕಾಜೂರು ಬಳಿ ಮಡಿಕೇರಿ-ಸೋಮವಾರಪೇಟೆ ಮುಖ್ಯರಸ್ತೆಯಲ್ಲಿ ಮರವೊಂದು ಉರುಳಿಬಿದ್ದಿದೆ. ಪರಿಣಾಮ, ವಾಹನ ಸಂಚಾರ ಸ್ಥಗಿತಗೊಂಡಿದೆ. ಅಂತೆಯೇ, ಭಾಗಮಂಡಲ- ತಲಕಾವೇರಿ ರಸ್ತೆಯಲ್ಲಿಯೂ ಮರಗಳು ಬಿದ್ದಿವೆ.
ಇನ್ನು, ರಾಜ್ಯದ ಉತ್ತರ ಕನ್ನಡ, ಉಡುಪಿ, ದಕ್ಷಿಣ ಕನ್ನಡ, ಚಿಕ್ಕಮಗಳೂರು, ಶಿವಮೊಗ್ಗ ಜಿಲ್ಲೆಗಳಲ್ಲಿ ಜುಲೈ 31ರವರೆಗೆ ಭಾರೀ ಮಳೆಯಾಗಲಿದ್ದು, ರೆಡ್ ಅಲರ್ಟ್ ಘೋಷಿಸಲಾಗಿದೆ.




