ಕೊಲೆ ಪ್ರಕರಣವೊಂದರಲ್ಲಿ ಆರೋಪಿಯು ಕೊಲೆ ಮಾಡಿರುವ ಅಪರಾಧ ಸಾಬೀತಾದರೂ ಕೂಡ ನ್ಯಾಯಾಲಯವು ಜೈಲು ಶಿಕ್ಷೆ ನೀಡದೆ, ಅಪರಾಧಿಕ ಹೊಣೆಯಿಂದ ದೋಷ ಮುಕ್ತಗೊಳಿಸಿರುವ ವಿಶೇಷ ಪ್ರಕರಣವೊಂದು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವರದಿಯಾಗಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ನಾವೂರು ಗ್ರಾಮದಲ್ಲಿ 2022ರಲ್ಲಿ ನಡೆದ ಪತಿಯ ಹತ್ಯೆ ಪ್ರಕರಣದ ತೀರ್ಪು ಇಂದು ಹೊರಬಿದ್ದಿದ್ದು, ಮಂಗಳೂರಿನ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ, ಎಫ್.ಟಿ.ಎಸ್.ಸಿ -೧ (ಪೋಕ್ಸೋ) ದ ನ್ಯಾಯಾಧೀಶರಾದ ಮೋಹನ ಜೆ.ಎಸ್. ಅವರು, ಪತಿಯನ್ನು ಕೊಂದಿದ್ದ ಕೊಲೆ ಆರೋಪಿ, ಪತ್ನಿ ಎಲಿಯಮ್ಮ ಅವರನ್ನು ಅಪರಾಧಿಕ ಹೊಣೆಯಿಂದ ಮುಕ್ತಗೊಳಿಸುವ ಮೂಲಕ ವಿಶೇಷ ತೀರ್ಪನ್ನು ಪ್ರಕಟಿಸಿದ್ದಾರೆ.
ದಿನಾಂಕ 05-07-2022 ರಂದು ಬೆಳಗ್ಗೆ 5:30ಕ್ಕೆ ಪತಿ ಯೋಹಾನನ್ ಅಲಿಯಾಸ್ ಬೇಬಿ ಅವರನ್ನು ಎಲಿಯಮ್ಮ ಕತ್ತಿಯಿಂದ ಕಡಿದು ಕೊಲೆ ಮಾಡಿದ್ದರು. ಪೊಲೀಸರ ವಿಚಾರಣೆಯ ವೇಳೆ ಆರೋಪಿ ಎಲಿಯಮ್ಮ, “ತನ್ನ ಪತಿಯನ್ನು ತಾನು ಕೊಂದಿರುವುದು ಹೌದು” ಎಂದು ಒಪ್ಪಿಕೊಂಡಿದ್ದರು. ಆದರೂ ನ್ಯಾಯಾಲಯ ಪೂರ್ಣ ಸಾಕ್ಷಿ ವಿಚಾರಣೆ ನಡೆಸಿತ್ತು. ಅಭಿಯೋಜನೆ ಪರ ಸಾಕ್ಷಿಗಳು ಕೃತ್ಯವನ್ನು ದೃಢಪಡಿಸಿದ್ದರು.

ಆದರೆ, ಕ್ರಾಸ್ ಎಕ್ಸಾಮಿನೇಷನ್ (ಪಾಟಿ ಸವಾಲು) ಸಂದರ್ಭದಲ್ಲಿ ಪ್ರಕರಣಕ್ಕೆ ತಿರುವು ಸಿಕ್ಕಿತು. ಆರೋಪಿಗೆ ದೀರ್ಘಕಾಲದ ಮಾನಸಿಕ ಆರೋಗ್ಯದ ಸಮಸ್ಯೆಗಳಿರುವುದು ಮತ್ತು ಆಕೆ “Delusional Disorder” (ಭ್ರಮಾಧೀನ ಕಾಯಿಲೆ) ನಿಂದ ಬಳಲುತ್ತಿದ್ದಾರೆ ಎಂಬ ಬಗ್ಗೆ ಪ್ರಬಲ ಸಾಕ್ಷ್ಯಗಳು ದೊರೆತವು. ಇದನ್ನು ಆಧರಿಸಿ ವಾದ ಮಂಡಿಸಿದ ಆರೋಪಿ ಪರ ವಕೀಲರಾದ ವಿಕ್ರಮ್ ರಾಜ್ ಎ., “ಆರೋಪಿ ಕೃತ್ಯ ನಡೆಸಿದ್ದು ಹೌದಾದರೂ, ಆಕೆ ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿದ್ದ ಕಾರಣ, ಆಕೆಗೆ ತಾನು ತಪ್ಪು ಮಾಡುತ್ತಿದ್ದೇನೆ ಎನ್ನುವ ಅರಿವಿಲ್ಲದ ಕಾರಣ, ಕಾನೂನು ರೀತಿಯ ಆಕೆ ಅಪರಾಧ ಎಸಗಿಲ್ಲ. ಆಕೆಗೆ ಕಾನೂನಿನ ರಕ್ಷಣೆ ಇದೆ” ಎಂದು ಬಲವಾಗಿ ಪ್ರತಿಪಾದಿಸಿದರು.
“ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿದ್ದ ಕಾರಣ, ಆಕೆಗೆ ತಾನು ಮಾಡುತ್ತಿರುವ ಕೃತ್ಯ ತಪ್ಪು ಎಂಬ ಅರಿವು ಇರಲಿಲ್ಲ. ಆದ್ದರಿಂದ ಆಕೆ ಅಪರಾಧ ಎಸಗಿಲ್ಲ” ಎಂದು ವಕೀಲರು ವಾದಿಸಿದ್ದರು. ಈ ವಾದವನ್ನು ಮನ್ನಿಸಿದ ನ್ಯಾಯಾಧೀಶರಾದ ಮೋಹನ ಜೆ.ಎಸ್., ಡಿಸೆಂಬರ್ 23ರಂದು ಕಾಯ್ದಿರಿಸಿದ್ದ ತೀರ್ಪನ್ನು ಇಂದು ಪ್ರಕಟಿಸಿದ್ದಲ್ಲದೇ, ಅಪರಾಧಿಕ ಹೊಣೆಯಿಂದ ದೋಷ ಮುಕ್ತಗೊಳಿಸಿದ್ದಾರೆ.
ಇದನ್ನು ಓದಿದ್ದೀರಾ? ದ.ಕ. | ಪಾಸ್ಪೋರ್ಟ್ ವೆರಿಫಿಕೇಶನ್ ವೇಳೆ ಸುಳ್ಳು ದಾಖಲೆ ಸೃಷ್ಟಿ: ಪೊಲೀಸ್ ಸಿಬ್ಬಂದಿಯನ್ನೇ ಬಂಧಿಸಿದ ಪೊಲೀಸರು!
“ಎಲಿಯಮ್ಮ ಗಂಡನನ್ನು ಕೊಂದಿರುವುದು ಸಾಬೀತಾಗಿದೆ, ಆದರೆ ಆಕೆ ಮಾನಸಿಕ ಅಸ್ವಸ್ಥರಾಗಿದ್ದರಿಂದ ಅಪರಾಧಿಕ ಹೊಣೆ(Criminal Liability) ಇಲ್ಲ ಎಂದು ತೀರ್ಪು ನೀಡಿದ್ದಾರೆ. ತೀರ್ಪಿನ ಅನ್ವಯ, ಜೈಲು ಅಧೀಕ್ಷಕರು ಆರೋಪಿಯನ್ನು ಬೆಂಗಳೂರಿನ ನಿಮ್ಹಾನ್ಸ್ಗೆ (NIMHANS) ಕಳುಹಿಸಿ, ಆಕೆ ಬಿಡುಗಡೆಗೆ ಯೋಗ್ಯಳೇ ಮತ್ತು ಆಕೆ ತನಗೆ ಅಥವಾ ಸಮಾಜಕ್ಕೆ ಅಪಾಯಕಾರಿಯೇ” ಎಂಬ ಬಗ್ಗೆ ವರದಿ ಪಡೆಯುವಂತೆ ನ್ಯಾಯಾಲಯವು ಆದೇಶಿಸಿದೆ.
ಈ ಪ್ರಕರಣದಲ್ಲಿ ಆರೋಪಿ ಪರವಾಗಿ ನ್ಯಾಯವಾದಿಗಳಾದ ವಿಕ್ರಮ್ ರಾಜ್ ಎ ಮತ್ತು ಜೀವನ್ ಎ.ಎಂ. ವಾದ ಮಂಡಿಸಿದ್ದರು.





