ಧರ್ಮಸ್ಥಳದಲ್ಲಿ ಅತ್ಯಾಚಾರ, ಮಹಿಳೆಯರ ಅಸಹಜ ಸಾವು, ನಾಪತ್ತೆ, ಕೊಲೆ, ಇತ್ಯಾದಿ ಹಿಂಸೆಯ ಪ್ರಕರಣಗಳ ಬಗ್ಗೆ ಸಮಗ್ರ ತನಿಖೆ ಕೈಗೊಳ್ಳುವಂತೆ ಎಸ್‌ಐಟಿಗೆ ಸರ್ಕಾರ ನಿರ್ದೇಶನ ನೀಡಬೇಕೆಂದು ಆಗ್ರಹಿಸಿ ಹಲವು ಮಹಿಳಾ ಸಂಘಟನೆಗಳು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಸಿದೆ. ‘ಕೊಂದವರು ಯಾರು’ ಎಂಬ ಅಭಿಯಾನದ ಭಾಗವಾಗಿ ಸರ್ಕಾರಕ್ಕೆ ಮಹಿಳಾ ದೌರ್ಜನ್ಯ ವಿರೋಧಿ ವೇದಿಕೆ ಈ ಮನವಿಯನ್ನು ಸಲ್ಲಿಸಿದೆ.
“ಬೆಳ್ತಂಗಡಿ ತಾಲೂಕಿನ ಧರ್ಮಸ್ಥಳ ಮತ್ತು ಸುತ್ತಮುತ್ತ ಗ್ರಾಮಗಳಲ್ಲಿ ನಾಲ್ಕೈದು ದಶಕಗಳಿಂದ ನಿರಂತರವಾಗಿ ಹೆಣ್ಣುಮಕ್ಕಳು ಕಾಣೆಯಾಗಿರುವುದು, ಮಹಿಳೆಯರ ಮೇಲೆ ಅತ್ಯಾಚಾರ ಎಸಗಿ, ಹತ್ಯೆ ಮಾಡಿರುವುದು, ಮಹಿಳೆಯರ ಅಸಹಜ ಸಾವುಗಳಾಗಿರುವುದು ಪೊಲೀಸರ, ಸ್ಥಳೀಯ ಗ್ರಾಮ ಪಂಚಾಯತಿಯ ಮತ್ತು ತಮ್ಮ ಸರ್ಕಾರವೇ ರಚಿಸಿದ್ದ ವಿ.ಎಸ್. ಉಗ್ರಪ್ಪ ಸಮಿತಿ ಸಲ್ಲಿಸಿ ಸರ್ಕಾರ ಅಂಗೀಕರಿಸಿರುವ ವರದಿಯ ದಾಖಲೆಗಳಿಂದ ಮತ್ತು ಅನೇಕ ನಿರ್ದಿಷ್ಟ ಪ್ರಕರಣಗಳಿಂದ ಕಂಡು ಬರುತ್ತದೆ. ತಮ್ಮ ಸರ್ಕಾರ ಮೊಟ್ಟಮೊದಲ ಬಾರಿಗೆ ಈ ಅಪರಾಧಗಳ ಸಮಗ್ರ ತನಿಖೆಗಾಗಿ ಎಸ್ಐಟಿ ರಚನೆ ಮಾಡಿದ್ದಕ್ಕಾಗಿ ನಮ್ಮ ಜಿಲ್ಲೆಯ ಮಹಿಳೆಯರ ಮತ್ತು ನ್ಯಾಯಕ್ಕಾಗಿ ಆಗ್ರಹಿಸುವವರ ಪರವಾಗಿ ನಾವು ತಮಗೆ ಕೃತಜ್ಞರಾಗಿದ್ದೇವೆ” ಎಂದೂ ಸಂಘಟನೆಗಳು ತಿಳಿಸಿದೆ.
ಇದನ್ನು ಓದಿದ್ದೀರಾ? ಧರ್ಮಸ್ಥಳ ಪ್ರಕರಣಗಳ ಸಮಗ್ರ ತನಿಖೆಗೆ ಎಡಪಕ್ಷಗಳ ಒತ್ತಾಯ
“ಇಷ್ಟೂ ದಶಕಗಳಲ್ಲಿ ನಮ್ಮ ಜಿಲ್ಲೆಯ ಧರ್ಮಸ್ಥಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಪ್ರಕರಣಗಳಲ್ಲಿ ಯಾವುದರಲ್ಲೂ ನೈಜ ಆರೋಪಿಗಳನ್ನು ಪೊಲೀಸರು ಪತ್ತೆಹಚ್ಚದೆ ಸಂತ್ರಸ್ತರಿಗೆ ನ್ಯಾಯ ಸಿಕ್ಕಿಲ್ಲ. ಅಲ್ಲದೆ ಸಾಕ್ಷಿದಾರರೇ ಅಸಹಜ ಸಾವುಗಳಿಗೆ ತುತ್ತಾಗಿರುವ ಪ್ರಕರಣಗಳನ್ನೂ ಕಾಣಬಹುದು. ಅಮಾಯಕರನ್ನು ಬರ್ಬರವಾಗಿ ಕೊಂದವರು ಯಾರೆಂದು, ಅತ್ಯಾಚಾರ ಎಸಗಿದವರು ಯಾರೆಂದು ಕಾನೂನು ರೀತ್ಯಾ ಪತ್ತೆಯಾಗಿಲ್ಲ. ಎಸ್ಐಟಿ ರಚನೆಯಾದ ಬಳಿಕ ತಮಗೆ ನ್ಯಾಯ ದೊರಕಬಹುದೆಂಬ ಭರವಸೆಯಿಂದ ಅನೇಕ ಸಂತ್ರಸ್ತ ಕುಟುಂಬಸ್ಥರು ಎಸ್ಐಟಿಯ ಮುಂದೆ ದೂರು ದಾಖಲಿಸಿದ್ದಾರೆ ಹಾಗೂ ಅನ್ಯಾಯವಾಗಿ ಪೊಲೀಸರು ಮುಚ್ಚಿಹಾಕಿರುವ ಕೆಲವು ಪ್ರಕರಣಗಳಿಗೆ ಆರೋಪಿಗಳ ವಿರುದ್ಧ ಸಾಕ್ಷ್ಯ ನೀಡಲೂ ಸಹ ಈಗ ಕೆಲವರು ಮುಂದೆ ಬರುತ್ತಿದ್ದಾರೆ” ಎಂದು ಮನವಿಯಲ್ಲಿ ತಿಳಿಸಲಾಗಿದೆ.
“ಆದರೆ ದಕ್ಷ ಮತ್ತು ವಿಶ್ವಾಸಾರ್ಹ ಅಧಿಕಾರಿಗಳ ನೇತೃತ್ವದಲ್ಲಿ ಎಸ್ಐಟಿ ರಚನೆಯಾದರೂ ಅನೇಕ ಮಾಧ್ಯಮಗಳ ಮತ್ತು ಬೇಜವಾಬ್ದಾರಿ ರಾಜಕೀಯ ಪಕ್ಷಗಳ ಹಾದಿ ತಪ್ಪಿಸುವಿಕೆಯಿಂದ ಮಹಿಳೆಯರಿಗೆ ಮತ್ತು ಜನಸಾಮಾನ್ಯರಿಗೆ ನ್ಯಾಯ ದೊರಕುವಂತಹ ರೀತಿಯಲ್ಲಿ ಮತ್ತು ಸರ್ಕಾರದ ಆದೇಶದಂತೆ ತನಿಖೆ ಸಮಗ್ರವಾಗಿ ನಡೆಯುತ್ತಿಲ್ಲ ಎಂಬ ನೋವು ಎಲ್ಲ ಸಂತ್ರಸ್ತ ಕುಟುಂಬಗಳನ್ನು ಮತ್ತು ನಮ್ಮನ್ನು ಕಾಡುತ್ತಿದೆ. ಆದ್ದರಿಂದ, ಯಾವುದೇ ಒತ್ತಡಕ್ಕೂ ತಮ್ಮ ಸರ್ಕಾರ ಮಣಿಯದೆ ಮುಂದೆ ಇಟ್ಟಿರುವ ಹೆಜ್ಜೆಯನ್ನು ಹಿಂದಕ್ಕೆ ತೆಗೆಯಬೇಡಿರೆಂದು ವಿನಂತಿ ಮಾಡಿಕೊಳ್ಳುತ್ತೇವೆ. ನ್ಯಾಯಪರವಾದ ಬಹುಸಂಖ್ಯೆಯ ಜನರು ತಮ್ಮ ಸರ್ಕಾರ ತೆಗೆದುಕೊಳ್ಳುವ ಒಳ್ಳೆಯ ತೀರ್ಮಾನಗಳ ಜೊತೆಗಿದ್ದೇವೆ” ಎಂದು ಹೇಳಿದೆ.
“ಧರ್ಮಸ್ಥಳ ಗ್ರಾಮ ಮತ್ತು ಅದರ ಸುತ್ತಲೂ ಹತ್ತಾರು ವರ್ಷಗಳಿಂದ ಮಹಿಳೆಯರ ಮತ್ತು ಜನಸಾಮಾನ್ಯರ ಮೇಲೆ ನಡೆಯುತ್ತಿರುವ ದೌರ್ಜನ್ಯಗಳು, ಹಿಂಸೆಗಳು, ಅನ್ಯಾಯಗಳಿಗೆ ಎಸ್ಐಟಿ ತನಿಖೆ ನ್ಯಾಯ ಕಲ್ಪಿಸಿ ವಿರಾಮ ಹಾಕಬಹುದೆಂಬ ಆಶಯದಲ್ಲಿ ನಾವು ಇರುವಾಗಲೇ, ಎಸ್ಐಟಿ ತನಿಖೆ ಕೇವಲ ಬುರುಡೆ ಮತ್ತು ಶವ ಹೂತ ಪ್ರಕರಣವನ್ನು ಕೇಂದ್ರೀಕರಿಸಿದ್ದು ನಮ್ಮ ಜಿಲ್ಲೆಯ ಮಹಿಳೆಯರನ್ನು ಕಂಗಾಲಾಗಿಸಿದೆ” ಎಂದು ತಿಳಿಸಿದೆ.
ಇದನ್ನು ಓದಿದ್ದೀರಾ? ಸೌಜನ್ಯ ಹತ್ಯೆ ಸೇರಿ ಧರ್ಮಸ್ಥಳದ ಕೊಲೆ ಪ್ರಕರಣಗಳ ಸಮಗ್ರ ತನಿಖೆಯನ್ನು ಎಸ್‌ಐಟಿಗೆ ವಹಿಸುವಂತೆ ಆಗ್ರಹ
ಮಹಿಳಾ ದೌರ್ಜನ್ಯ ವಿರೋಧಿ ವೇದಿಕೆಯ ಆಗ್ರಹಗಳು
- “ಧರ್ಮಸ್ಥಳ ವ್ಯಾಪ್ತಿಯಲ್ಲಿನ ಸಾವಿನ ಪ್ರಕರಣಗಳಿಗೆ ಸಂಬಂಧಿಸಿದಂತೆ ವಿಶೇಷ ತನಿಖಾ ತಂಡವನ್ನು ರಚಿಸುವಂತೆ ಕೋರಿ ಮುಖ್ಯಮಂತ್ರಿಯವರಿಗೆ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷರು 14.07.2025ರಂದು ಬರೆದಿದ್ದ ಪತ್ರವನ್ನು ಆಧರಿಸಿ, ಎಸ್ಐಟಿ ರಚನೆ ಮಾಡಿದ ಸರ್ಕಾರದ ಆದೇಶ ಸಂಖ್ಯೆ: ಹೆಚ್ ಡಿ 142 ಸಿಒಡಿ 2025, ಬೆಂಗಳೂರು, ದಿನಾಂಕ 19/07/2025ರಲ್ಲಿ ”………. ಮೇಲ್ಕಂಡ ಪ್ರಕರಣವೂ ಸೇರಿದಂತೆ ಹಾಗೂ ಇದರ ಸಂಬಂಧ ಕರ್ನಾಟಕ ರಾಜ್ಯದ ಇತರೆ ಪೊಲೀಸ್ ಠಾಣೆಗಳಲ್ಲಿ ದಾಖಲಾಗಿರುವ/ದಾಖಲಾಗುವ ಇತರೆ ಎಲ್ಲಾ ಕ್ರಿಮಿನಲ್ ಪ್ರಕರಣಗಳ ತನಿಖೆಯನ್ನು ಡಿಜಿ ಮತ್ತು ಐಜಿಪಿರವರು ವಿಶೇಷ ತನಿಖಾ ತಂಡಕ್ಕೆ (Special Investigation Team) ವರ್ಗಾಯಿಸುವುದು…..” ಎಂದು ತಿಳಿಸಲಾಗಿದೆ (ಪತ್ರದ ಕಾಪಿ ಲಗತ್ತಿಸಿದೆ). ಆದ್ದರಿಂದ ಈ ಆದೇಶದನ್ವಯ ಎಸ್‌ಐಟಿ ಕೂಡಲೇ ಧರ್ಮಸ್ಥಳ ಪ್ರದೇಶದಲ್ಲಿ ನಡೆದಿರುವ ನಾಪತ್ತೆ, ಅತ್ಯಾಚಾರ, ಕೊಲೆಗಳನ್ನೂ ಸೇರಿದಂತೆ ಅಸಹಜ ಮತ್ತು ಅನುಮಾನಾಸ್ಪದ ಸಾವುಗಳು ಮತ್ತಿತರ ಪ್ರಕರಣಗಳ ಸಮಗ್ರ ತನಿಖೆ ನಡೆಸುವಂತೆ ಸರ್ಕಾರ ಎಸ್‌ಐಟಿಗೆ ನಿರ್ದೇಶನ ನೀಡಬೇಕು”
- “ಮಾಹಿತಿ ಹಕ್ಕು ಕಾಯಿದೆಯ ಅಡಿಯಲ್ಲಿ 2012ರಲ್ಲಿ ಪಡೆದಿರುವ ಮಾಹಿತಿಯ ಪ್ರಕಾರವೇ, 2001ರಿಂದ 2012ರವರೆಗೆ ಬೆಳ್ತಂಗಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ‘ಆತ್ಮಹತ್ಯೆಗಳು’ ಎಂದು ದಾಖಲಾಗಿದ್ದ ಒಟ್ಟು 452 ಪ್ರಕರಣಗಳ ಪೈಕಿ 349 ಮತ್ತು 85 ಪ್ರಕರಣಗಳು ಕ್ರಮವಾಗಿ ಧರ್ಮಸ್ಥಳ ಮತ್ತು ಉಜಿರೆಯಲ್ಲಿ ದಾಖಲಾಗಿದ್ದು, ಅವುಗಳಲ್ಲಿ 96 ಮಹಿಳೆಯರಿಗೆ ಸಂಬಂಧಿಸಿವೆ. ಆದ್ದರಿಂದ ‘ಆತ್ಮಹತ್ಯೆಗಳು’ ಎಂದು ದಾಖಲಾಗಿರುವ ಈ ಅಗಾಧ ಪ್ರಮಾಣದ ಅಪರಾಧ ಪ್ರಕರಣಗಳಿಗೆ ನಿಜವಾದ ಕಾರಣವೇನು ಮತ್ತು ಕಾರಣರಾರು ಎಂಬುದನ್ನು ಎಸ್ಐಟಿ ಸಮಗ್ರವಾಗಿ ತನಿಖೆ ನಡೆಸಬೇಕು”
- “ರಾಜ್ಯದಲ್ಲಿ ಮಹಿಳೆಯರ ಮತ್ತು ಮಕ್ಕಳ ಮೇಲಿನ ದೌರ್ಜನ್ಯ, ಅತ್ಯಾಚಾರ, ಹಿಂಸೆಗಳನ್ನು ತಡೆಗಟ್ಟಲು ಮತ್ತು ಅದನ್ನು ವರದಿ ಮಾಡಿ ಶಿಫಾರಸುಗಳನ್ನು ನೀಡಲು ಕಳೆದ ಅವಧಿಯಲ್ಲಿ ತಮ್ಮ ಸರ್ಕಾರವು ವಿ.ಎಸ್.ಉಗ್ರಪ್ಪ ಅವರ ಅಧ್ಯಕ್ಷತೆಯಲ್ಲಿ ರಚಿಸಿದ್ದ ಸಮಿತಿ ನೀಡಿದ್ದ ವರದಿಯಲ್ಲಿ 2016ರ ಜನವರಿಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಅಂದಿನ ಅಪರ ಎಸ್ ಪಿ ಅವರು, ‘ಧರ್ಮಸ್ಥಳ ವ್ಯಾಪ್ತಿಯಲ್ಲಿ ಪ್ರತಿ ವರ್ಷವೂ ಕಳೆದ ಐದು ವರ್ಷಗಳಲ್ಲಿ ಕನಿಷ್ಠವೆಂದರೂ 100 ಮಂದಿ ಅಸಹಜ ಸಾವಿಗೀಡಾಗಿದ್ದಾರೆ’ ಎಂದು ಹೇಳಿರುವುದಾಗಿ ದಾಖಲಾಗಿದೆ. ಈ ಸರ್ಕಾರಿ ಅಧಿಕೃತ ದಾಖಲೆಯನ್ನು ಎಸ್ಐಟಿ ಗಂಭೀರವಾಗಿ ಪರಿಗಣಿಸಿ, ಇದರ ಕುರಿತು ತನಿಖೆ ನಡೆಸಲು ಕ್ರಮ ಕೈಗೊಳ್ಳಬೇಕು”
- “ಎಸ್ಐಟಿ ಕಾರ್ಯಾಚರಣೆ ಆರಂಭವಾದ ಆನಂತರ ಅನೇಕ ದೂರುಗಳು ದಾಖಲಾಗಿದ್ದರೂ ಅವುಗಳ ತನಿಖೆ ತೃಪ್ತಿಕರವಾಗಿ ನಡೆಯದೆ ಸ್ಥಗಿತಗೊಂಡಿದೆ ಎಂಬುದಾಗಿ ನಮ್ಮ ಗಮನಕ್ಕೆ ಬಂದಿದೆ (ಉದಾ: ಪುಂಜಾಲಕಟ್ಟೆಯ ಅಪ್ರಾಪ್ತ ಬಾಲಕಿ ಹೇಮಲತಾ ನಾಪತ್ತೆ ಪ್ರಕರಣ) ನ್ಯಾಯದ ನಿರೀಕ್ಷೆಯಲ್ಲಿದ್ದ ಸಂತ್ರಸ್ತ ಕುಟುಂಬಗಳಿಗೆ ಇದು ಮತ್ತೊಂದು ಭಯಂಕರ ಆಘಾತ ಉಂಟುಮಾಡಿದೆ. ಆದ್ದರಿಂದ ಸರ್ಕಾರದ ಮೇಲಿನ ಆದೇಶದಂತೆ ಧರ್ಮಸ್ಥಳಕ್ಕೆ ಸಂಬಂಧಿಸಿದ ಎಲ್ಲ ಅಪರಾಧ ಪ್ರಕರಣಗಳಲ್ಲೂ ಎಸ್ಐಟಿ ತನಿಖೆಯನ್ನು ಚುರುಕುಗೊಳಿಸಿ ರಾಜ್ಯದ, ಅದರಲ್ಲೂ ನಮ್ಮ ಜಿಲ್ಲೆಯ ಜನತೆಗೆ ನ್ಯಾಯ ದೊರಕಿಸಿ ಕೊಡಬೇಕು.
- “ಧರ್ಮಸ್ಥಳ ಪಂಚಾಯತಿ ದಾಖಲೆಗಳಲ್ಲೇ ನೂರಾರು ‘ಅಪರಿಚಿತ’ ಶವಗಳನ್ನು ದಫನ ಮಾಡಿರುವ ಅಧಿಕೃತ ಮಾಹಿತಿಗಳು ದೊರಕಿವೆ ಹಾಗೂ ಆ ಯುಡಿಆರ್ ಸಂಖ್ಯೆಗಳಿಗೆ ಸಂಬಂಧಪಟ್ಟ ದಾಖಲೆಗಳನ್ನು ಪೊಲೀಸರು ನಾಶಪಡಿಸಿರುವುದಾಗಿ ಮಾಹಿತಿ ಹಕ್ಕಿನ ಅಡಿಯಲ್ಲಿ ತಿಳಿದುಬಂದಿದೆ. ಈ ಬಗ್ಗೆಯೂ ಎಸ್ಐಟಿ ಸಮಗ್ರ ತನಿಖೆ ನಡೆಸಿ ದಫನ ಮಾಡಿರುವ ಶವಗಳ ‘ಅಪರಿಚಿತರು’ ಯಾರೆಂದು ಮತ್ತು ಹೇಗೆ ಈ ‘ಅನುಮಾನಾಸ್ಪದ’ ಮತ್ತು ‘ಅಸಹಜ’ ಸಾವುಗಳು ಸಂಭವಿಸಿದವೆಂಬ ವಿಷಯವನ್ನು ಪತ್ತೆಮಾಡಬೇಕು.
- “ಧರ್ಮಸ್ಥಳ ವ್ಯಾಪ್ತಿಯ ಎಲ್ಲ ಬಗೆಗಳ ಅಪರಾಧ ಪ್ರಕರಣಗಳಲ್ಲಿ ಎಸ್ಐಟಿ ಸಂಪೂರ್ಣವಾಗಿ ಮತ್ತು ನಿಷ್ಪಕ್ಷಪಾತವಾಗಿ ಸಮಗ್ರವಾಗಿ ತನಿಖೆ ನಡೆಸಿ ನಿಜವಾದ ಅಪರಾಧಿಗಳನ್ನು ಪತ್ತೆಹಚ್ಚುವವರೆಗೂ ಎಸ್ಐಟಿ ಅಂತಿಮ ವರದಿ ಕೊಡುವಂತೆ ಮತ್ತು ಅರ್ಧಕ್ಕೆ ಕೆಲಸ ಮುಗಿಸುವಂತೆ ಅದರ ಮೇಲೆ ಒತ್ತಡ ಹೇರಬಾರದು”
- “ಹಲವು ನಿರ್ದಿಷ್ಟ ಪ್ರಕರಣಗಳಲ್ಲಿ ಆರೋಪಿಗಳನ್ನು ರಕ್ಷಿಸಲು ಕಾನೂನು ಬಾಹಿರವಾಗಿ ಕೆಲಸ ಮಾಡಿರುವ ಮತ್ತು ಮಾಡುತ್ತಿರುವ ಸರ್ಕಾರಿ ಅಧಿಕಾರಿಗಳನ್ನೂ ಎಸ್ಐಟಿ ತನಿಖೆಗೆ ಒಳಪಡಿಸಬೇಕು”
“ಹಾಗೇನಾದರೂ ಯಾವುದೇ ಕಾರಣಕ್ಕೂ ಎಸ್ಐಟಿ ಕಾರ್ಯಾಚರಣೆ ಧರ್ಮಸ್ಥಳದ ವ್ಯಾಪ್ತಿಯಲ್ಲಿ ನಡೆದಿರುವ ಅಪರಾಧ ಪ್ರಕರಣಗಳ ನಿಜ ಆರೋಪಿಗಳನ್ನು ಬಯಲುಗೊಳಿಸಲು ವಿಫಲವಾದಲ್ಲಿ ಮತ್ತು ಈ ಬಾರಿ ಈ ಪ್ರದೇಶದ ಸಂತ್ರಸ್ತ ಜನತೆಗೆ ನ್ಯಾಯ ದೊರಕದೇ ಹೋದರೆ, ಜನರು ಮತ್ತಷ್ಟು ಭೀಕರ ಸಂಕಷ್ಟಗಳಿಗೆ ಮತ್ತು ಸಂಕಟಗಳಿಗೆ ತುತ್ತಾಗುವುದು ಖಚಿತ. ಅಂತಹ ಘೋರ ದುರಂತಕ್ಕೆ ತಮ್ಮ ಸರ್ಕಾರ ಅವಕಾಶ ಮಾಡಿಕೊಡುವುದಿಲ್ಲ ಎಂಬ ನಂಬಿಕೆ, ವಿಶ್ವಾಸಗಳನ್ನು ವ್ಯಕ್ತಪಡಿಸುತ್ತಿದ್ದೇವೆ. ಅನ್ಯಾಯದ ವಿರುದ್ಧದ ನಮ್ಮ ಹೋರಾಟ ಮುಂದುವರಿಯುತ್ತದೆ” ಎಂದು ಮಹಿಳಾ ದೌರ್ಜನ್ಯ ವಿರೋಧಿ ವೇದಿಕೆ ಹೇಳಿದೆ.





