ಮೈಸೂರು ಜಿಲ್ಲೆ, ಹೆಗ್ಗಡದೇವನಕೋಟೆ ತಾಲ್ಲೂಕು, ಹೆಗ್ಗಡಪುರ ಗ್ರಾಮದ ಅಂಗನವಾಡಿ ಕೇಂದ್ರದಲ್ಲಿ ತಾಲ್ಲೂಕು ಮಟ್ಟದ ವಿಶ್ವ ತಂಬಾಕು ರಹಿತ ದಿನಾಚರಣೆ ಕಾರ್ಯಕ್ರಮ ನಡೆಯಿತು.
ತಾಲ್ಲೂಕು ಆರೋಗ್ಯಾಧಿಕಾರಿ ಡಾ. ಟಿ. ರವಿಕುಮಾರ್ ಮಾತನಾಡಿ, ಪ್ರತಿ ವರ್ಷದಂತೆ ಈ ವರ್ಷವೂ ಸಹ ಹೆಗ್ಗಡಪುರ ಗ್ರಾಮದ ದಲ್ಲಿ ತಾಲ್ಲೂಕು ಮಟ್ಟದ ವಿಶ್ವ ತಂಬಾಕು ರಹಿತ ದಿನಾಚರಣೆ ಕಾರ್ಯಕ್ರಮವನ್ನು ನಡೆಸುತ್ತಿದ್ದೇವೆ. ವಿಶ್ವ ತಂಬಾಕು ರಹಿತ ದಿನವಾದ ಇಂದು ಎಲ್ಲರೂ ಪ್ರತಿಜ್ಞಾವಿಧಿ ಸ್ವೀಕರಿಸಿ, ನಾನು ನನ್ನ ಜೀವನದಲ್ಲಿ ಎಂದೆಂದಿಗೂ ಯಾವುದೇ ರೀತಿಯಾದ ತಂಬಾಕು ಉತ್ಪನ್ನಗಳನ್ನು ಸೇವಿಸುವುದಿಲ್ಲ. ನನ್ನ ಕುಟುಂಬ, ಸದಸ್ಯರಾಗಲಿ, ಸ್ನೇಹಿತರಾಗಲಿ, ನನ್ನ ಸಹಪಾಠಿಗಳಾಗಲಿ ಯಾವುದೇ ರೀತಿಯ ತಂಬಾಕು ಉತ್ಪನ್ನಗಳನ್ನು ಸೇವಿಸಿದಂತೆ ಪ್ರೇರೇಪಿಸುವುದಿಲ್ಲ. ಅದೇ ರೀತಿ ನನ್ನ ಮನೆ, ಶಾಲೆ, ಕಚೇರಿ ಒಟ್ಟಾರೆ ನಮ್ಮ ಪರಿಸರವನ್ನು ತಂಬಾಕು ಉತ್ಪನ್ನಗಳಿಂದ ಕಲುಷಿತಗೊಳ್ಳದಂತೆ ರಕ್ಷಿಸುತ್ತೇನೆ. ಹಾಗೆಯೇ, ತಂಬಾಕು ಹಾಗೂ ನಿಕೋಟಿನ್ ಉದ್ಯಮಗಳ ಆಕರ್ಷಕ ಉತ್ಪನ್ನಗಳ ಹಿಂದಿರುವ ಸರಳ ಉದ್ದೇಶಗಳ ಅರಿವು ನಮಗಿದೆ. ಹಾಗಾಗಿ, ಇವುಗಳ ಹಸ್ತಕ್ಷೇಪಕ್ಕೆ ನಾನು ಬಲಿಯಾಗುವುದಿಲ್ಲ. ತಂಬಾಕು ಮುಕ್ತ ಸಮಾಜವನ್ನು ಕಟ್ಟಲು ನಾವೆಲ್ಲರೂ ಇಂದಿನಿಂದಲೇ ಪಣತೊಡೋಣ ಎಂದು ಕರೆ ನೀಡಿದರು.
ಕರ್ನಾಟಕದಲ್ಲಿ ಸುಮಾರು 1.5 ಲಕ್ಷ ಕ್ಯಾನ್ಸರ್ ರೋಗಿಗಳಿದ್ದು, ಪ್ರತಿವರ್ಷ 35 ಸಾವಿರ ಹೊಸ ಕ್ಯಾನ್ಸರ್ ರೋಗಿಗಳು ಸೇರ್ಪಡೆಯಾಗುತ್ತಿದ್ದಾರೆ. ಇದರಲ್ಲಿ ಶೇ.50ರಷ್ಟು ಗಂಡಸರು, ಶೇ.25 ರಷ್ಟು ಮಹಿಳೆಯರು ತಂಬಾಕು ಸೇವನೆಯ ದುಷ್ಪರಿಣಾಮದಿಂದ ಉಂಟಾದ ಕ್ಯಾನ್ಸರ್ ರೋಗದಿಂದ ನರಳುತ್ತಿದ್ದಾರೆ. ಭಾರತದಲ್ಲಿ ಪ್ರತಿದಿನ ತಂಬಾಕಿನ ಸೇವನೆಯ ದುಷ್ಪರಿಣಾಮದಿಂದಾಗಿ 200 ಜನರು ಸಾವನ್ನಪ್ಪುತ್ತಿದ್ದಾರೆ. ಹಾಗೂ 25 ಜನರು ಹೃದಯ ಬೇನೆಗೆ ತುತ್ತಾಗುತ್ತಿದ್ದಾರೆ ಎಂದು ಹೇಳಿದರು.

ಧೂಮಪಾನದಿಂದಾಗುವ ಪ್ರಮುಖ ದುಷ್ಪರಿಣಾಮಗಳು:
- ಧ್ವನಿ ಪೆಟ್ಟಿಗೆ ಕ್ಯಾನ್ಸರ್.
- ಬಾಯಿಯ ಕ್ಯಾನ್ಸರ್.
- ಅನ್ನನಾಳದ ಕ್ಯಾನ್ಸರ್.
- ಶ್ವಾಸಕೋಶದ ತೊಂದರೆ ಹಾಗೂ ಕ್ಯಾನ್ಸರ್ ಉಂಟಾಗುವುದು.
- ಮೂತ್ರಕೋಶ ಮತ್ತು ಮೂತ್ರ ಚೀಲಕ್ಯಾನ್ಸರ್.
- ಜಠರದಲ್ಲಿ ಉಣ್ಣಾಗುವುದು.
- ಹೃದ್ರೋಗಗಳಿಗೆ ಕಾರಣವಾಗಬಹುದು.
- ಹೆಂಗಸರ ಮುಟ್ಟಿನಲ್ಲಿ ಏರುಪೇರಾಗುವುದು.
- ಮೈ ಇಳಿಯಬಹುದು.
- ಕಡಿಮೆ ತೂಕದ ಮಗು ಜನನ.
- ರಕ್ತದೊತ್ತಡ ಹೆಚ್ಚುವುದು.
- ದೃಷ್ಟಿ ದೋಷ ತಲೆದೂರಬಹುದು.
- ಲೈಂಗಿಕ ಆಸಕ್ತಿ ಕುಂದಬಹುದು.
ತಂಬಾಕು ತ್ಯಜಿಸುವುದರಿಂದ ಆಗುವ ಪ್ರಯೋಜನಗಳು:
- ರಕ್ತದೊತ್ತಡ ಮತ್ತು ಹೃದಯ ಬಡಿತ ಸಾಮಾನ್ಯ ಹಂತಕ್ಕೆ ಬರುತ್ತದೆ.
- ದೇಹದಲ್ಲಿ ಕಾರ್ಬನ್ ಮೊನಾಕ್ಸೈಡ್ ಪ್ರಮಾಣ ಕಡಿಮೆಯಾಗುತ್ತದೆ.
- ಹೃದಯಾಘಾತ ಕಡಿಮೆಯಾಗುತ್ತದೆ.
- ಬಾಯಿ ಅಲ್ಸರ್ ಕಡಿಮೆಯಾಗುತ್ತದೆ.
- ಹಣದ ಉಳಿತಾಯ ಆಗುತ್ತದೆ.
ತಂಬಾಕು ಆಕ್ಟ್ 2003ರ ಸೆಕ್ಷನ್ 4 ರಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ನಿಷೇಧಿಸಿದೆ. ಸೆಕ್ಷನ್-5 ತಂಬಾಕು ಕುರಿತು ಜಾಹೀರಾತು, ಪ್ರಚಾರ ಮತ್ತು ಪ್ರಚೋಧನಕಾರಿ ನಿಷೇಧ. ಸೆಕ್ಷನ್- 6ಎ 18 ವರ್ಷದ ಒಳಗಿನವರಿಗೆ ತಂಬಾಕು ಉತ್ಪನ್ನಗಳ ಮಾರಾಟ ನಿಷೇಧ. ಸೆಕ್ಷನ್-6ಬಿ ಶಾಲೆ, ಕಾಲೇಜುಗಳ ನೂರು ಗಜ ದೂರದ ಅಂತರದೊಳಗೆ ತಂಬಾಕು ಉತ್ಪನ್ನಗಳ ಮಾರಾಟವನ್ನು ನಿಷೇಧಿಸಲಾಗಿದೆ.
ಈ ಸುದ್ದಿ ಓದಿದ್ದೀರಾ? ರೈತ ವಿರೋಧಿ ಕೃಷಿ ಕಾಯ್ದೆ ವಿರುದ್ಧ ಹೋರಾಟಕ್ಕೆ ಸಜ್ಜಾಗಬೇಕಿದೆ: ಶಾಸಕ ದರ್ಶನ್ ಪುಟ್ಟಣ್ಣಯ್ಯ
ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯಿತಿ ಸದಸ್ಯರಾದ ರವಿ, ಕುಮಾರ್, ಮಂಜುನಾಯ್ಕ, ಆರೋಗ್ಯ ಇಲಾಖೆಯ ಸಿಬ್ಬಂದಿ ವರ್ಗದವರಾದ ಶರಣಪ್ಪ ರಾಮಣಿ, ರವಿರಾಜ್, ಅಸೀಮಾ ಸುಲ್ತಾನ್, ರೇಖಾ, ನಾಗಮ್ಮ, ರಾಜು, ಶಿಕ್ಷಕರಾದ ಸೋಮಶೇಖರ್, ಮಾಜಿ ತಾಲ್ಲೂಕು ಪಂಚಾಯತಿ ಸದಸ್ಯೆ ಪುಟ್ಟಲ್ಲಮ್ಮ, ಊರಿನ ಮುಖಂಡರಾದ ದೇವ, ಸುಂದರ್, ದೇವನಾಯ್ಕ, ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು, ಸಾರ್ವಜನಿಕರು ಸೇರಿದಂತೆ ಇನ್ನಿತರರು ಇದ್ದರು.





