ಹಾಸ್ಟೆಲ್‌ಗಳಲ್ಲಿ ಕೆಲಸ ಮಾಡುತ್ತಿರುವ ಹೊರಗುತ್ತಿಗೆ ನೌಕರರಿಗೆ ಮಾಸಿಕ ₹36 ವೇತನ ಕೊಡುವಂತೆ ಆಗ್ರಹಿಸಿ ರಾಜ್ಯ ಸರ್ಕಾರಿ ಹಾಸ್ಟೆಲ್ ಮತ್ತು ವಸತಿ ಶಾಲಾ ಹೊರಗುತ್ತಿಗೆ ನೌಕರರ ಸಂಘದ ಯಾದಗಿರಿ ಜಿಲ್ಲಾ ಸಮಿತಿಯ ಪದಾಧಿಕಾರಿಗಳು ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ಸೋಮವಾರ ಪ್ರತಿಭಟನೆ ನಡೆಸಿದರು.
ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಸಮಾಜ ಕಲ್ಯಾಣ ಇಲಾಖೆ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಹಾಗೂ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದಲ್ಲಿ ಹೊರಗುತ್ತಿಗೆ ನೌಕರರು ಸುಮಾರು 15 ವರ್ಷಗಳಿಂದ ಕಡಿಮೆ ಸಂಬಳಕ್ಕೆ ದುಡಿಯುತ್ತಿದ್ದಾರೆ ಎಂದು ಪ್ರತಿಭಟನಕಾರರು ಹೇಳಿದರು.
ʼಹೊರ ಗುತ್ತಿಗೆ ನೌಕರ ರನ್ನು ಶೋಷಣೆಯಿಂದ ತಪ್ಪಿಸಲು ಇಲಾಖೆಯಿಂದ ನೇರವಾಗಿ ವೇತನ ಪಾವತಿಸಬೇಕು. ನಿವೃತ್ತಿವರೆಗೆ ಸೇವಾ ಭದ್ರತೆ ಕೊಡಬೇಕು. ಕಾರ್ಮಿಕ ಕಾನೂನು ಪ್ರಕಾರ ಕಡ್ಡಾಯವಾಗಿ ವಾರಕ್ಕೆ ಒಂದು ರಜೆ ನೀಡಬೇಕು. ಕೆಲಸದ ಸಮಯವನ್ನು ನಿಗದಿ ಮಾಡಬೇಕು. ಬೀದರ್ ಜಿಲ್ಲೆಯ ಮಾದರಿಯಲ್ಲಿ ಜಿಲ್ಲಾ ಕಾರ್ಮಿಕ ಸೇವೆಗಳ ವಿವಿಧೋದ್ದೇಶ ಸಹಕಾರ ಸಂಘ ಯಾದಗಿರಿಯಲ್ಲಿಯೂ ಮಾಡಬೇಕು. ಗುತ್ತಿಗೆದಾರರು ಸಂಬಳದ ಚೀಟಿ, ನೇಮಕಾತಿ ಆದೇಶ ಪತ್ರ, ಗುರುತಿನ ಚೀಟಿ, ಸೇವಾ ಪ್ರಮಾಣ ಪತ್ರ, ಇಎಸ್‌ಐ ಮತ್ತು ಪಿಎಫ್ ಹಣ ತುಂಬಿದ ರಶೀದಿ ಕೊಡಬೇಕುʼ ಎಂದು ಆಗ್ರಹಿಸಿದರು.
ʼಹಿಂದುಳಿದ ವರ್ಗ, ಸಮಾಜ ಕಲ್ಯಾಣ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಲ್ಲಿ ಸಿಬ್ಬಂದಿ ಸಂಖ್ಯೆ ಕಡಿತ ಮಾಡಿರುವ ಆದೇಶವನ್ನು ರದ್ದು ಮಾಡಬೇಕು. 50 ವಿದ್ಯಾರ್ಥಿಗಳಿಗೆ 3 ಮೂವರು ಸಿಬ್ಬಂದಿಯಂತೆ ಈ ಹಿಂದಿನ ಪದ್ಧತಿ ಮುಂದುವರಿಸಬೇಕು. ಪ್ರತಿ ತಿಂಗಳು 5ನೇ ತಾರೀಖು ಸಂಬಳ ಕೊಡಬೇಕು. ಬಾಕಿ ಇರುವ ಸಂಬಳವನ್ನು ತಕ್ಷಣವೇ ಪಾವತಿ ಮಾಡಬೇಕು. 10 ವರ್ಷ ಸೇವೆ ಸಲ್ಲಿಸಿರುವ ಹೊರಗುತ್ತಿಗೆ ಸಿಬ್ಬಂದಿಯನ್ನು ದಿನಗೂಲಿ ನೌಕರರ ಕ್ಷೇಮಾಭಿವೃದ್ಧಿ ಅಧಿನಿಯಮದ ಅಡಿಯಲ್ಲಿ ತರಬೇಕುʼ ಎಂದು ಒತ್ತಾಯಿಸಿದರು.
ʼಬಿಸಿಎಂ ಇಲಾಖೆಯಲ್ಲಿ ಕೆಲಸ ಕಳೆದುಕೊಂಡಿರುವ ಹೊರಗುತ್ತಿಗೆ ಸಿಬ್ಬಂದಿಯನ್ನು ಮರು ನೇಮಕ ಮಾಡಿಕೊಳ್ಳಬೇಕು. ಹೊಸದಾಗಿ ಪ್ರಾರಂಭ ಮಾಡುವ ಹಾಸ್ಟೆಲ್‌ಗಳಿಗೆ ಕಡ್ಡಾಯವಾಗಿ ಕೆಲಸಕ್ಕೆ ತೆಗೆದುಕೊಳ್ಳಬೇಕು. ಅಡುಗೆಯವರು, ಅಡುಗೆ ಸಹಾಯಕರು, ಸ್ವಚ್ಛತಾಗಾರರಿಂದ ಶೌಚಾಲಯ ಸ್ವಚ್ಛತೆ ಮಾಡಿಸಬಾರದು. ವಸತಿ ನಿಲಯ ಮತ್ತು ಹಾಸ್ಟೆಲ್‌ಗಳಿಗೆ ಅಡುಗೆಗೆ ಬೇಕಾದ ಗುಣಮಟ್ಟದ ಆಹಾರ ಸಾಮಾಗ್ರಿಗಳನ್ನು ಸರಿಯಾದ ಪ್ರಮಾಣದಲ್ಲಿ ತಂದು ಕೊಡಬೇಕು. ನಿವೃತ್ತಿ ನಂತರ ಜೀವನ ನಿರ್ವಹಣೆಗೆ ₹10 ಲಕ್ಷ ಪರಿಹಾರ ಕೊಡಬೇಕುʼ ಎಂದು ಮನವಿ ಮಾಡಿದರು.
ಇದನ್ನೂ ಓದಿ : ಬೀದರ್ | ಡಿಜಿಟಲ್ ಗ್ರಂಥಾಲಯದಲ್ಲಿ ಓದಿ ವಿದೇಶದಲ್ಲಿ ನೌಕರಿ : ಹಳ್ಳಿ ಹುಡುಗನ ಸಾಧನೆಗೆ ಎಲ್ಲರೂ ದಿಲ್ ಖುಷ್!
ಪ್ರತಿಭಟನೆಯಲ್ಲಿ ರಾಜ್ಯ ಪ್ರಧಾನ ಕಾರ್ಯದರ್ಶಿ ಕೆ.ಹನುಮೇಗೌಡ, ರಾಜ್ಯ ಉಪಾಧ್ಯಕ್ಷ ಹುಲಗಪ್ಪ ಛಲವಾದಿ, ಜಿಲ್ಲಾ ಅಧ್ಯಕ್ಷ ದವಾಲ್‌ಸಾಬ್ ನದಾಫ್ ಸೇರಿದಂತೆ ಪ್ರಮುಖರಾದ ದುರ್ಗಮ್ಮ ಹಳ್ಳಿಸಗರ, ವಸಂತರಾಜ ಪೂಜಾರಿ, ಮಲ್ಲಿಕಾರ್ಜುನ ಯಕ್ಷಿಂತಿ, ಶಂಕರ ಕಡಗುಡ, ಅಯ್ಯಪ್ಪ ಅನಸೂರ, ಪ್ರಕಾಶ ಹಾಲ್ಯ, ಶರಣಬಸವ ಜಂಬಲದಿನ್ನಿ, ರಂಗಮ್ಮ ಕಟ್ಟಿಮನಿ, ಬಸಣ್ಣ ಕೆಂಭಾವಿ, ಲಲಿತಾ ಮುದನೂರ, ಶ್ರೀದೇವಿ ಹುಣಸಗಿ, ಶರಣಪ್ಪ ಗೋಗಿ, ಮಂಜುಳ ಮುಂಡಾನ, ಮಲ್ಲಮ್ಮ ಹೈಕೂರ, ಬಸವರಾಜ ಖ್ಯಾತನಾಳ, ಭೀಮರಡ್ಡಿ ಹಳಕಟ್ಟಿ, ರಮೇಶ ಬೇಡೆಬೆಂಬಳಿ, ಶಾರದಾ ಇನ್ನಿತರರು ಇದ್ದರು.





