‘ದ್ವೇಷ, ಅಸೂಯೆಯಿಂದ ಸಮಾಜ ನಿರ್ಮಾಣ ಸಾಧ್ಯವಿಲ್ಲ ಪ್ರೀತಿಯಿಂದ ಮಾತ್ರ ಸಾಧ್ಯ. ಕವಿಯು ಬೇಟೆಯ ಜೊತೆಗಿರಬೇಕು, ಬೇಟೆಗಾರನ ಜೊತೆ ಅಲ್ಲ,’ ಎಂದು ಹಿರಿಯ ಕವಿ ವಿಶ್ವನಾಥ ರೆಡ್ಡಿ ಗೊಂದೆಡಗಿ ಹೇಳಿದರು.
ಅವರು ಶನಿವಾರ ಯುವಜನ ಸಾಂಸ್ಕೃತಿಕ ವೇದಿಕೆ, ಯಾದಗಿರಿ ವತಿಯಿಂದ ಮಲ್ಲಿಕಾ ಕಾಲೇಜಿನಲ್ಲಿ ‘ನೆಮ್ಮದಿಯ ನಾಳೆಗಾಗಿ’ ಎಂಬ ಘೋಷವಾಕ್ಯದಡಿ ಹಮ್ಮಿಕೊಂಡಿದ್ದ ಜಿಲ್ಲಾ ಮಟ್ಟದ ಯುವ ಕವಿಗೋಷ್ಠಿ ಮತ್ತು ಸಾಹಿತ್ಯ ಸಂವಾದ ಕಾರ್ಯಕ್ರಮವನ್ನು ಸಸಿಗೆ ನೀರುಣಿಸುವ ಮೂಲಕ ಉದ್ಘಾಟಿಸಿ ಮಾತನಾಡಿದರು.
‘ಬಂಡಾಯ ಎಂದರೆ ಯಾರ ವಿರುದ್ಧದ ದ್ವೇಷವಲ್ಲ; ಅದು ಸಾತ್ವಿಕ ಸಿಟ್ಟು. ಲೋಕದ ಡೊಂಕು ತಿದ್ದಲು ಅದನ್ನು ಬಳಸಬೇಕು. ಕವಿಗಳು ಮಹಲುಗಳಲ್ಲಿ ಕುಳಿತು ಬರೆಯುವ ಆಸ್ಥಾನ ಕವಿಗಳಾಗದೇ, ಬೀದಿಗೆ ಬಂದು ಜನರ ನೋವಿಗೆ ಮಿಡಿಯಬೇಕು,’ ಎಂದು ಅವರು ಕಿವಿಮಾತು ನೀಡಿದರು.
ಮುಖ್ಯ ಅತಿಥಿಯಾಗಿ ಮಾತನಾಡಿದ ಯುವಜನ ಸಾಂಸ್ಕೃತಿಕ ವೇದಿಕೆಯ ರಾಜ್ಯ ಘಟಕದ ಸದಸ್ಯ ವಿಜಯಕುಮಾರ್ ಅವರು, ‘ಸಾಹಿತ್ಯದಲ್ಲಿ ಸಾರ ಮತ್ತು ಸ್ವರೂಪ ಎರಡೂ ಅತಿ ಮುಖ್ಯ. ಕವಿತೆಯ ವಿಷಯ ಒಳ್ಳೆಯದಾದರೂ ಅದು ಸ್ವರೂಪದಲ್ಲಿ ಜನರನ್ನು ತಟ್ಟದೇ ಇದ್ದರೆ ಯಶಸ್ವಿಯಾಗುವುದಿಲ್ಲ. ಹಾಗೆಯೇ ಸ್ವರೂಪ ರಸಪೂರ್ಣವಾಗಿದ್ದರೂ ಅದರೊಳಗಿನ ಸಾರ ಇಲ್ಲದಿದ್ದರೆ ಅದು ಜನರನ್ನು ವೈಚಾರಿಕವಾಗಿ ಉದ್ಧೀಪನಗೊಳಿಸಲಾರದು’ ಎಂದು ಅಭಿಪ್ರಾಯಪಟ್ಟರು. ‘ಯುವ ಕವಿಗಳು ಹೆಚ್ಚು ಅಧ್ಯಯನ ನಡೆಸಿ ಸಾಹಿತ್ಯ ಪರಂಪರೆಯ ಇತಿಹಾಸ ತಿಳಿದು ಬರೆಯಬೇಕು’ ಎಂದು ಸಲಹೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಎಐಡಿವೈಓ ರಾಜ್ಯ ಉಪಾಧ್ಯಕ್ಷ ಚನ್ನಬಸವ ಜಾನೇಕಲ್ ಮಾತನಾಡಿ, ‘ದ ರಾ ಬೇಂದ್ರೆ, ಕುವೆಂಪು, ಸು.ರಂ. ಎಕ್ಕುಂಡಿ, ದಿನಕರ ದೇಸಾಯಿ, ಶರತ್ ಚಂದ್ರ ಚಟರ್ಜಿ, ಪ್ರೇಮ್ ಚಂದ್ ಮುಂತಾದ ಕವಿಗಳ ಸಾಹಿತ್ಯವನ್ನು ಓದಿ ಅವರು ಹೇಗೆ ಬದುಕಿದರು, ಏಕೆ ಬರೆದರು ಎಂಬುದನ್ನು ಅರಿತುಕೊಳ್ಳಬೇಕು. ಬರಹ ಮತ್ತು ಬದುಕು ಜನರಿಗೆ ಮಾದರಿಯಾಗಬೇಕು,’ ಎಂದು ಹೇಳಿದರು.

ಯುವ ಕವಿಗೋಷ್ಠಿಯಲ್ಲಿ ಒಟ್ಟು 25 ಕವಿಗಳು ಭಾಗವಹಿಸಿ ತಮ್ಮ ಕವನಗಳನ್ನು ವಾಚಿಸಿದರು. ರೈತರ ಬವಣೆಗಳು, ಕಾರ್ಮಿಕರ ಬದುಕು, ಮಹಿಳೆಯರ ಮೇಲಿನ ದೌರ್ಜನ್ಯ, ಭ್ರಷ್ಟಾಚಾರ, ಶಾಂತಿ ಮತ್ತು ಸಹಬಾಳ್ವೆ ಇತ್ಯಾದಿ ವಿಷಯಗಳು ಕವನಗಳ ಕೇಂದ್ರವಾಗಿದ್ದವು.
ಇದನ್ನು ಓದಿದ್ದೀರಾ? ಚಿತ್ತಾಪುರದಲ್ಲಿ ನ.2ರಂದು RSS ಪಥಸಂಚಲನಕ್ಕೆ ಹೈಕೋರ್ಟ್ ಅನುಮತಿ
ಕವಿತಾ ವಾಚನ ಮಾಡಿದ ಕವಿಗಳಲ್ಲಿ ಯಲ್ಲಪ್ಪ ಸಾಲಿ (ಚಿಂತಾಕುಂಟ), ಅರ್ಜುನ ಬಸವರಾಜ್ ಕೋಟಗೇರಾ, ವಿಶ್ವಪೂರ್ವಾ ಸತ್ಯಂಪೇಟೆ, ರಾಮಲಿಂಗಪ್ಪ ಬಿ.ಎನ್, ರಾಘವೇಂದ್ರ ಬಿ.ಎ ದ್ರಾಕ್ಷಿ, ಗೂಳಪ್ಪ ಎಸ್.ಪಾಟೀಲ್, ಶಿವರಾಜ್ ಮೇಟಿ (ಸುರಪುರ), ಡಿ.ಎನ್. ಕರದಳ್ಳಿ (ಶಿವಪೂರ), ಬಸವರಾಜ್ ಕೊಂಕಲ್, ಶಶಿಕಲಾ ಎಸ್.ಕೌಳೂರು, ವಿಶ್ವರಾಧ್ಯ ಕೆ.ಶಾಪುರ್, ನಿರ್ಮಲ ಗೋಪಾಳಪುರ, ಮಲ್ಲಮ್ಮ ಎನ್.ಹೋರುಂಚಾ, ದೇವಿ ಬಿ.ಕೆ, ಜಗದೀಶ್ ಬಿ.ಕೆ, ಕಾವೇರಿ ಡಿ.ಗೌನಳ್ಳಿ, ಬಸವರಾಜ್ ಎಸ್.ಕೆ, ಬೀರಲಿಂಗ ಕೆ.ದೇವರಮನಿ, ಜ್ಯೋತಿ ಎನ್.ಬೆಳ್ಳಿಕಟ್ಟಿ, ಸತೀಶಮ್ಮ, ಗುರುಪ್ರಸಾದ್ ವೈದ್ಯ ಹಾಗೂ ಕುಮಾರಿ ಅನನ್ಯ ರೆಡ್ಡಿ ಸೇರಿದಂತೆ ಹಲವರು ಭಾಗವಹಿಸಿದರು.
ಈ ಸಂದರ್ಭದಲ್ಲಿ ವೇದಿಕೆ ಮೇಲೆ ಮಲ್ಲಿಕಾ ಕಾಲೇಜಿನ ಪ್ರಾಚಾರ್ಯ ರಾಯಪ್ಪ ಪೂಜಾರಿ ಅವರು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ರಾಮು ನಿರ್ವಹಿಸಿ, ವಂದಿಸಿದರು.





