ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಬಿ.ಆರ್.ಗವಾಯಿ ಅವರ ಮೇಲೆ ಕೋರ್ಟ್ ಹಾಲ್‌ನಲ್ಲಿ ವಕೀಲ ರಾಕೇಶ್ ಕಿಶೋರ್ ಶೂ ಎಸೆದ ಘಟನೆ ಖಂಡನೀಯ, ತಕ್ಷಣ ಅವರ ಮೇಲೆ ಕಠಿಣ ಕ್ರಮ ಕೈಗೊಳ್ಳುವಂತೆ ಮಾದಿಗ ಮೀಸಲಾತಿ ಹೋರಾಟ ಸಮಿತಿ ವಡಗೇರಾ ತಾಲ್ಲೂಕು ತಹಶೀಲ್ದಾರ್ ಮೂಲಕ ರಾಷ್ಟ್ರಪತಿ ರವರಿಗೆ ಮನವಿ ಸಲ್ಲಿಸಿದರು.
ರಾಕೇಶ್ ಕಿಶೋರ್ ಮತ್ತು ಭಾಸ್ಕರ್ ರಾವ್ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸಿ ಬಂಧಿಸುವಂತೆ, ಹಾಗೂ ವಕೀಲ ರಾಕೇಶ್ ಕಿಶೋರ್ ಅವರನ್ನು ಬಾರ್ ಕೌನ್ಸಿಲ್‌ನಿಂದ ಶಾಶ್ವತ ಅಮಾನತ್ತು ಮಾಡಬೇಕು ಎಂದು ಒತ್ತಾಯಿಸಲಾಗಿದೆ. ಈ ಅವಮಾನ ಬರಿ ಗವಾಯಿ ಅವರಿಗೆ ಮಾತ್ರವಾಗಿಲ್ಲ, ಬದಲಾಗಿ ಇಡೀ ನ್ಯಾಯಾಂಗ ವ್ಯವಸ್ಥೆಗೆ ಮತ್ತು ಡಾ. ಬಿ ಆರ್ ಅಂಬೇಡ್ಕರ್ ಅವರು ಬರೆದ ಸಂವಿಧಾನಕ್ಕೆ ಅವಮಾನವಾಗಿದೆ’ ಎಂದು ಸಮಿತಿಯು ತೀವ್ರ ಆಕ್ರೋಶ ವ್ಯಕ್ತಪಡಿಸಿದೆ.
ಇದನ್ನೂ ಓದಿ: ಯಾದಗಿರಿ | ರೈತರಿಗೆ ಅನ್ಯಾಯವಾಗದಂತೆ ಬೆಳೆ ಹಾನಿ ಸಮೀಕ್ಷೆ ನಡೆಸಲಾಗುವುದು: ಜಿ.ಕುಮಾರ ನಾಯಕ
ಎಂಆರ್‌ಎಚ್ಎಸ್ ಸಮಿತಿಯ ಕಾರ್ಯದರ್ಶಿ ಮಲ್ಲು ಹಲಗಿ ಮಾತನಾಡಿ, “ದಲಿತರು ಉನ್ನತ ಹುದ್ದೆಗಳಲ್ಲಿ ಇದ್ದರೆ ಜಾತಿ ವಿರೋಧಿಗಳಿಗೆ ಸಹಿಸಲಾಗುತ್ತಿಲ್ಲ. ಕೆಲವರು ಪ್ರಚೋದನಾತ್ಮಕ ಹೇಳಿಕೆಗಳನ್ನು ನೀಡುತ್ತಲೇ ದಲಿತರ ಮೇಲೆ ನಿರಂತರ ದೌರ್ಜನ್ಯ, ದಬ್ಬಾಳಿಕೆ ನಡೆಸುತ್ತಿದ್ದಾರೆ. ಇಂಥ ಭಯದ ವಾತಾವರಣದಲ್ಲಿ ಜೀವನ ನಡೆಸಬೇಕು. ಕೇಂದ್ರ ಮತ್ತು ರಾಜ್ಯ ಸರ್ಕಾರ ಇಂಥ ಘಟನೆಗಳು ಮರುಕಳಿಸಿದಂತೆ ತಕ್ಷಣ ಕಠಿಣ ಕ್ರಮ ಕೈಗೊಳ್ಳಬೇಕೆಂದುʼ ಹೇಳಿದರು.
ಈ ಸಂದರ್ಭದಲ್ಲಿ ವಡಗೇರ ತಾಲೂಕು ಯುವ ಘಟಕದ ಅಧ್ಯಕ್ಷ ಹಣಮಂತ ಒಡ್ಕರ್, ಪ್ರಧಾನ ಕಾರ್ಯದರ್ಶಿ ಶಿವಶರಣಪ್ಪ ಗೋನಾಲ, ಸಿದ್ದಪ್ಪ ಬೀರನಕಲ್, ಮಹೇಶ್ ಹುಲಿ, ಹುಲಗಪ್ಪ ಹಿರಿಮೆಟಿ ಸೇರಿದಂತೆ ಹಲವಾರು ಮುಖಂಡರು ಹಾಜರಿದ್ದರು.





