ಸಮಾಜ ಕಲ್ಯಾಣ ಇಲಾಖೆಯಲ್ಲಿ ದ್ವಿತೀಯ ದರ್ಜೆ ಸಹಾಯಕಿಯಾಗಿ ಕಾರ್ಯನಿರ್ವಹಿಸುತ್ತಿರುವ ಹಾಗೂ ಶಹಾಬಾದ್ ನಗರಸಭೆಯ ಮಾಜಿ ಅಧ್ಯಕ್ಷೆ ಅಂಜಲಿ ಗಿರೀಶ ಕಾಂಬಾನೂರರ ಮೇಲೆ ನಾಲ್ವರು ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಹತ್ಯೆ ಮಾಡಲು ಯತ್ನಿಸಿದ ಘಟನೆ ಬುಧವಾರ ಬೆಳಿಗ್ಗೆ ಚಿತ್ತಾಪುರ ರಸ್ತೆಯ ಗ್ರೀನ್‌ಸಿಟಿ ಸಮೀಪ ನಡೆದಿದೆ.
ಹರಿತವಾದ ಆಯುಧಗಳಿಂದ ನಡೆದ ದಾಳಿಯಲ್ಲಿ ಅಂಜಲಿ ಗಂಭೀರವಾಗಿ ಗಾಯಗೊಂಡಿದ್ದು, ಕಾರು ಚಾಲಕ ಅಜೀಮಿರ್ ತಕ್ಷಣ ಅವರನ್ನು ಯಾದಗಿರಿಯ ಯಿಮ್ಸ್ ಆಸ್ಪತ್ರೆಗೆ ದಾಖಲಿಸಿದ್ದಾರೆ. ಪ್ರಾಥಮಿಕ ಚಿಕಿತ್ಸೆ ಬಳಿಕ ಅವರನ್ನು ಕಲಬುರಗಿಗೆ ಸ್ಥಳಾಂತರಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ಅಂಜಲಿ ಕಾಂಬಾನೂರ ಅವರು ದಲಿತ ದೌರ್ಜನ್ಯ ಕಾಯ್ದೆಯಡಿ ಅನುಕಂಪದ ಆಧಾರದ ಮೇಲೆ ಸರ್ಕಾರಿ ಸೇವೆಗೆ ಸೇರಿ ಯಾದಗಿರಿ ಸಮಾಜ ಕಲ್ಯಾಣ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದರು. ಬುಧವಾರ ಬೆಳಿಗ್ಗೆ ಎಂದಿನಂತೆ ಕೆಲಸಕ್ಕೆ ತೆರಳುವ ವೇಳೆ ಹಿಂಬಾಲಿಸಿಕೊಂಡು ಬಂದ ದುಷ್ಕರ್ಮಿಗಳು ಹಲ್ಲೆ ನಡೆಸಿದ್ದಾರೆ ಎಂದು ಮಾಹಿತಿ ಲಭ್ಯವಾಗಿದೆ.
ಇದನ್ನು ಓದಿದ್ದೀರಾ? ಯಾದಗಿರಿ | ಬ್ರಾಹ್ಮಣ್ಯವಾದಿ ಶಕ್ತಿಗಳು ಸಂವಿಧಾನ ವಿರೋಧಿ ಚಟುವಟಿಕೆ ನಡೆಸುತ್ತಿವೆ ; ಚಂದ್ರಕಾಂತ ಬಜೇರಿ
ಕೆಲವು ವರ್ಷಗಳ ಹಿಂದೆ ಅವರ ಪತಿ ಗಿರೀಶ ಕಾಂಬಾನೂರರ ಹತ್ಯೆ ಶಹಾಬಾದ್‌ನಲ್ಲಿ ನಡೆದಿದ್ದು, ಆ ಪ್ರಕರಣಕ್ಕೆ ಸಂಬಂಧಿಸಿದ ಹಳೆಯ ವೈಷಮ್ಯವೇ ಈ ದಾಳಿಗೆ ಕಾರಣವಾಗಿರಬಹುದು ಎಂದು ಪೊಲೀಸರು ಪ್ರಾಥಮಿಕ ತನಿಖೆಯಲ್ಲಿ ಶಂಕೆ ವ್ಯಕ್ತಪಡಿಸಿದ್ದಾರೆ.
ಘಟನಾ ಸ್ಥಳಕ್ಕೆ ಜಿಲ್ಲಾ ಪೊಲೀಸ್ ಅಧೀಕ್ಷಕ ಪ್ರಥ್ವಿಕ್ ಶಂಕರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಆರೋಪಿಗಳ ಪತ್ತೆಗೆ ತೀವ್ರ ತನಿಖೆ ಮುಂದುವರಿಸಿದ್ದಾರೆ.





