ಸುರಪುರ ನಗರಸಭೆ ವ್ಯಾಪ್ತಿಯ ಪೆಟ್ರೋಲ್ ಪಂಪ್ ಬಳಿ ಇರುವ ನಾಲ್ವಡಿ ರಾಜಾ ವೆಂಕಟಪ್ಪ ನಾಯಕ ಚೌಕ್‌ಗೆ ಪ್ರತಿದಿನ ಎಲ್‌ಇಡಿ ಮತ್ತು ಮ್ಯೂಸಿಯಂ ಲೈಟ್ ಅಳವಡಿಸಬೇಕೆಂದು ಸುರಪುರ ತಾಲೂಕು ಸಗರನಾಡು ಎಲೆಕ್ಟ್ರಿಕಲ್ ಕಾರ್ಮಿಕ ಸಂಘದ ಪದಾಧಿಕಾರಿಗಳು ನಗರಸಭೆ ಪೌರಾಯುಕ್ತರಿಗೆ ಶುಕ್ರವಾರ ಮನವಿ ಸಲ್ಲಿಸಿದರು.
ʼ1857ರ ಪ್ರಥಮ ಸ್ವಾತಂತ್ರ್ಯ ಹೋರಾಟದ ನಾಯಕ ಮತ್ತು ಸುರಪುರ ಸಂಸ್ಥಾನದ ಗೌರವದ ಪ್ರತಿರೂಪವಾದ ನಾಲ್ವಡಿ ರಾಜಾ ವೆಂಕಟಪ್ಪ ನಾಯಕರ ಚೌಕ್ ನಗರದ ಐತಿಹಾಸಿಕ ಸ್ಮಾರಕಗಳಲ್ಲಿ ಒಂದಾಗಿದೆ. ಆದರೆ, ಇಲ್ಲಿ ಸರಿಯಾದ ಬೆಳಕು ವ್ಯವಸ್ಥೆ ಇಲ್ಲದ ಕಾರಣ ರಾತ್ರಿ ವೇಳೆ ವಾಹನ ಸಂಚಾರ ಹಾಗೂ ಸಾರ್ವಜನಿಕರ ಸಂಚಾರಕ್ಕೆ ತೊಂದರೆ ಉಂಟಾಗುತ್ತಿದೆʼ ಎಂದು ಸಂಘಟನೆ ಮುಖಂಡರು ಹೇಳಿದರು.
ನಗರದ ಪ್ರಮುಖ ವೃತ್ತವಾಗಿರುವ ಈ ಪ್ರದೇಶದಲ್ಲಿ ಎಲ್‌ಇಡಿ ಲೈಟ್ ಮತ್ತು ಮ್ಯೂಸಿಯಂ ಲೈಟ್ ಅಳವಡಿಸಿದರೆ ಚೌಕ್ ಪ್ರದೇಶದ ಸೌಂದರ್ಯ ಹೆಚ್ಚುವುದರೊಂದಿಗೆ ಸುರಕ್ಷತೆ ಕೂಡ ಬಲವಾಗಲಿದೆ. ಸ್ವಾತಂತ್ರ್ಯ ಹೋರಾಟಗಾರರ ಸ್ಮರಣಾರ್ಥ ನಿರ್ಮಿಸಲಾದ ಸ್ಥಳಕ್ಕೆ ಗೌರವ ಕಾಪಾಡುವ ಉದ್ದೇಶದಿಂದಲೇ ಬೆಳಕು ವ್ಯವಸ್ಥೆ ಮಾಡಿಕೊಡಬೇಕೆಂದು ಮನವಿ ಮಾಡಿದರು.
ಇದನ್ನು ಓದಿದ್ದೀರಾ? ಬೀದರ್ ಜಿಲ್ಲಾಧಿಕಾರಿ ಕಚೇರಿಗೆ ಬಾಂಬ್ ಬೆದರಿಕೆ : ತೀವ್ರ ತಪಾಸಣೆ
ಈ ಸಂದರ್ಭದಲ್ಲಿ ಸಂಘದ ಗೌರವಾಧ್ಯಕ್ಷ ಮದನಶಾ, ಉಪಾಧ್ಯಕ್ಷ ತಿಪ್ಪಣ್ಣ ಮಡಿವಾಳ, ಪ್ರಧಾನ ಕಾರ್ಯದರ್ಶಿ ಆನಂದ ಕಟ್ಟಿಮನಿ, ಅಧ್ಯಕ್ಷ ಅಬ್ದುಲ್ ರೌಫ್, ಖಜಾಂಚಿ ಅಮಜಾದ್ ಹುಸೇನ್, ಸಂಘಟನಾ ಕಾರ್ಯದರ್ಶಿ ಅಬೀದ್ ಪಗಡಿ, ರಿಯಾಜ್ ಅಹ್ಮದ್ ಸೇರಿದಂತೆ ಅನೇಕ ಪದಾಧಿಕಾರಿಗಳು ಉಪಸ್ಥಿತರಿದ್ದರು.





