ಚಿತ್ತಾಪುರದಲ್ಲಿ ಆರ್‌ಎಸ್‌ಎಸ್ ಆಯೋಜಿಸಲು ಉದ್ದೇಶಿಸಿದ್ದ ಪಥಸಂಚಲನಕ್ಕೆ ಭಾರೀ ಹಿನ್ನಡೆಯಾದ ಬೆನ್ನಲ್ಲೇ, ಯಾದಗಿರಿ ಜಿಲ್ಲೆಯಲ್ಲಿಯೂ ಆರ್‌ಎಸ್‌ಎಸ್ ಹಿನ್ನಡೆ ಅನುಭವಿಸಿದೆ. ಆರ್‌ಎಸ್‌ಎಸ್‌ನ ಪಥಸಂಚಲನಕ್ಕೆ ದಲಿತ ಸಂಘಟನೆಗಳು ಸೆಡ್ಡು ಹೊಡೆದಿದ್ದು, ಸಂಘಪರಿವಾರ ತಿಣಕಡುತ್ತಿದೆ.
ಯಾದಗಿರಿ ಜಿಲ್ಲೆಯ ಕೆಂಬಾವಿಯಲ್ಲಿ ನವೆಂಬರ್ 4ರಂದು ಪಥಸಂಚಲನ ನಡೆಸಲು ಉದ್ದೇಶಿಸಿತ್ತು. ಅನುಮತಿ ಕೋರಿ ತಾಲೂಕು ಆಡಳಿತಕ್ಕೆ ಅರ್ಜಿ ಸಲ್ಲಿಸಿತ್ತು. ಈ ಬೆನ್ನಲ್ಲೇ, ದಲಿತ ಸಂಘಟನೆಗಳು ಕೂಡ ತಮಗೂ ಅದೇ ದಿನ ಪಥಸಂಚಲನ ನಡೆಸಲು ಅನುಮತಿ ಬೇಕೆಂದು ಅರ್ಜಿ ಸಲ್ಲಿಸಿವೆ.
ಪರಿಣಾಮವಾಗಿ, ತಾಲೂಕು ಆಡಳಿತವು ಆರ್‌ಎಸ್‌ಎಸ್‌ಗೆ ಅನುಮತಿ ನೀಡಲು ಹಿಂದೇಟು ಹಾಕಿದೆ. ಮಾತ್ರವಲ್ಲದೆ, ತಾಲೂಕು ಆಡಳಿತ ‘ಶಾಂತಿ ಸಂದಾನ ಸಭೆ’ ನಡೆಸಿದೆ. ಆದರೆ, ಪರಿಸ್ಥಿತಿಯನ್ನು ತಿಳಿಗೊಳಿಸುವ ಪ್ರಯತ್ನ ಯಶಸ್ವಿಯಾಗಿಲ್ಲ.
ಈ ಲೇಖನ ಓದಿದ್ದೀರಾ?: ಕಲಬುರಗಿ ಹೈಕೋರ್ಟ್ ಮಹತ್ವದ ಸೂಚನೆ: ನ. 2ರಂದು ಚಿತ್ತಾಪುರದಲ್ಲಿ ಪಥಸಂಚಲನಕ್ಕೆ ಮುಂದಾಗಿದ್ದ ಆರ್‌ಎಸ್‌ಎಸ್‌ಗೆ ಹಿನ್ನಡೆ
ಆರ್‌ಎಸ್‌ಎಸ್ ಒಂದು ನೋಂದಣಿಯಾಗದ ಸಂಸ್ಥೆ. ಅದು ದಂಡ ಹಿಡಿದು ಜನರಲ್ಲಿ ಭಯ ಮೂಡಿಸುತ್ತಿದೆ. ದಂಡ ಹಿಡಿದು ಪಧಸಂಚಲನ ನಡೆಸಲು ಅವಕಾಶ ಕೊಡಬಾರದು. ಅನುಮತಿ ಕೊಡುವುದೇ ಆದರೆ, ನಮಗೂ ಸಂವಿಧಾನ ಪೀಠಿಕೆ ಹಿಡಿದು ಜಾಥಾ ನಡೆಸಲು ಅವಕಾಶ ನೀಡಬೇಕು ಎಂದು ದಲಿತ ಸಂಘರ್ಷ ಸಮಿತಿ ಆಗ್ರಹಿಸಿದೆ.
ಆದಾಗ್ಯೂ, ತನ್ನ ಸಮವಸ್ತ್ರ ಧರಿಸಿ ಪಥಸಂಚಲನ ನಡೆಸಲು ದಂಡವೂ ಮುಖ್ಯ. ಅದನ್ನು ಬಿಟ್ಟು ಪಥಸಂಚಲನ ಮಾಡಲು ಸಾಧ್ಯವಿಲ್ಲ ಎಂದು ಆರ್‌ಎಸ್‌ಎಸ್ ಹೇಳುತ್ತಿದೆ. ಹೀಗಾಗಿ, ಶಾಂತಿ ಸಭೆ ವಿಫಲವಾಗಿದೆ. ಈ ಬಗ್ಗೆ ತಾಲೂಕು ಆಡಳಿತವು ಜಿಲ್ಲಾಡಳಿತಕ್ಕೆ ವರದಿ ಸಲ್ಲಿಸಿದೆ.




