ತನ್ನ ಅಳಿಯನೊಂದಿಗೆ ವಿವಾಹೇತರ ಸಂಬಂಧ ಹೊಂದಿದ್ದಾರೆ ಎಂಬ ಆರೋಪ ಮೇಲೆ ಮಹಿಳೆಯನ್ನು ವಿವಸ್ತ್ರಗೊಳಿಸಿ, ತಲೆ ಬೋಳಿಸಿ, ಖಾರದ ಪುಡಿ ಎರಚಿ ಕುಟುಂಬಸ್ಥರೇ ವಿಕೃತಿ ಮೆರೆದಿರುವ ಘಟನೆ ಯಾದಗಿರಿ ಜಿಲ್ಲೆಯಲ್ಲಿ ನಡೆದಿದೆ.
ಜಿಲ್ಲೆಯ ಶಹಾಪುರ ತಾಲೂಕಿನ ಚಾಮನಾಳ ತಾಂಡಾದಲ್ಲಿ ಅಕ್ಟೋಬರ್ 16ರಂದು ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಅಮಾನವೀಯ ದೌರ್ಜನ್ಯ ಎಸಗಿದ 11 ಆರೋಪಿಗಳ ವಿರುದ್ಧ ಕೆಂಭಾವಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಹಿಳೆಯು ಅನಾರೋಗ್ಯಕ್ಕೆ ತುತ್ತಾಗಿದ್ದರು. ಹೀಗಾಗಿ, ಆಗ್ಗಾಗ್ಗೆ ತನ್ನ ಚಿಕ್ಕಮ್ಮನ ಮನೆಗೆ ಹೋಗಿಬರುತ್ತಿದ್ದರು. ಅರವನ್ನು ಆಕೆಯ ಅಳಿಯ ತನ್ನ ಬೈಕ್‌ನಲ್ಲಿ ಕರೆದೊಯ್ಯುವುದು, ಕರೆತಂದು ಬಿಡುವುದು ಮಾಡುತ್ತಿದ್ದರು. ಆ ಕಾರಣಕ್ಕೆ ಅವರಿಬ್ಬರ ನಡುವೆ ವಿವಾಹೇತರ ಸಂಬಂಧವಿದೆ ಎಂಬ ಶಂಕಿಸಿದ ಮಹಿಳೆಯ ಕುಟುಂಬಸ್ಥರು ಆಕೆಯ ಮೇಲೆ ವಿಕೃತಿ ಮರೆದಿದ್ದಾರೆ ಎಂದು ವರದಿಯಾಗಿದೆ.
ಆಕೆಯನ್ನು ನಗ್ನಗೊಳಿಸಿ, ತಲೆ ಬೋಳಿಸಿ, ಆಕೆಯ ದೇಹಕ್ಕೆ ಸುಣ್ಣ ಹಚ್ಚಿ, ಖಾರದ ಪುಡಿ ಎರಚಿ ವಿಕೃತ ದೌರ್ಜನ್ಯ ಎಸಗಿದ್ದಾರೆ. ಮನಬಂದಂತೆ ಥಳಿಸಿದ್ದಾರೆ ಎಂದು ಆರೋಪಿಸಲಾಗಿದೆ.
ಮಹಿಳೆಯು ಅಕ್ಟೋಬರ್ 17ರಂದು ಕೆಂಭಾವಿ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ಆರೋಪಿಗಳಾದ ಕಸ್ತೂರಿಬಾಯಿ, ಡಾಕಪ್ಪ, ವಿಜಯಕುಮಾರ್, ತಿಪ್ಪಣ್ಣ, ರಮೇಶ, ದೇವಿಬಾಯಿ, ತಿಪ್ಪಿಬಾಯಿ, ರೂಪ್ಲಿಬಾಯಿ, ಅನುಸೂಯಾ, ಚಾವಳಿಬಾಯಿ ಮತ್ತು ತಿಪ್ಪಣ್ಣ ನಾಯ್ಕ್ ವಿರುದ್ಧ ಎಫ್ಐಆರ್ ದಾಖಲಿಸಿದ್ದಾರೆ. ಇಬ್ಬರನ್ನು ಬಂಧಿಸಿರುವುದಾಗಿ ತಿಳಿಸಿದ್ದಾರೆ.




