ಕೆಪಿಎಸ್ ಮ್ಯಾಗ್ನೆಟ್ ಯೋಜನೆಯಡಿ ಗೋಟಗಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯನ್ನು ವಿಲೀನಗೊಳಿಸುವ ಸರ್ಕಾರದ ನಿರ್ಧಾರಕ್ಕೆ ತೀವ್ರ ವಿರೋಧ ವ್ಯಕ್ತವಾಗಿದ್ದು, ಎಐಡಿಎಸ್‌ಒ ನೇತೃತ್ವದಲ್ಲಿ ಶನಿವಾರ ಗೋಟಗಿ ತಾಂಡದ ಗ್ರಾಮಸ್ಥರು ಮತ್ತು ವಿದ್ಯಾರ್ಥಿಗಳು ಬೃಹತ್ ಪ್ರತಿಭಟನೆ ನಡೆಸಿದರು.
ಯಾದಗಿರಿಯ ಅರಿಕೇರಾ ಗ್ರಾಮ ಪಂಚಾಯತಿ ವ್ಯಾಪ್ತಿಯಗೆ ಒಳಪಡುವ ಗೋಟಗಿ ತಾಂಡದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಹಲವು ವರ್ಷಗಳಿಂದ ಸ್ಥಳೀಯ ಮಕ್ಕಳಿಗೆ ಮೂಲಭೂತ ಶಿಕ್ಷಣದ ಕೇಂದ್ರವಾಗಿದ್ದು, ಇದನ್ನು ಮ್ಯಾಗ್ನೆಟ್ ಶಾಲೆಗೆ ವಿಲೀನಗೊಳಿಸುವ ಪ್ರಸ್ತಾವನೆಯನ್ನು ಪ್ರತಿಭಟನಾಕಾರರು ತೀವ್ರವಾಗಿ ವಿರೋಧಿಸಿದರು. ತಮ್ಮ ಊರಿನ ಶಾಲೆ ಮುಚ್ಚುವ ಕಾರ್ಯವನ್ನು ಸರ್ಕಾರ ತಕ್ಷಣವೇ ಹಿಂಪಡೆಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಎಐಡಿಎಸ್‌ಒ ಜಿಲ್ಲಾ ಸಂಚಾಲಕಿ ಶಿಲ್ಪಾ ಬಿ ಕೆ ಮಾತನಾಡಿ, ‘ಕೆಪಿಎಸ್ ಮ್ಯಾಗ್ನೆಟ್ ಯೋಜನೆ ಹೆಸರಿನಲ್ಲಿ ರಾಜ್ಯದಾದ್ಯಂತ 40 ಸಾವಿರಕ್ಕೂ ಅಧಿಕ ಸರ್ಕಾರಿ ಶಾಲೆಗಳನ್ನು ಮುಚ್ಚುವ ಕ್ರಮ ನಡೆಯುತ್ತಿದೆ. ಗೋಟಗಿ ಹಾಗೂ ಸುತ್ತಲಿನ ಶಾಲೆಗಳನ್ನು ಮ್ಯಾಗ್ನೆಟ್ ಶಾಲೆಗೆ ವಿಲೀನಗೊಳಿಸುವ ಮೂಲಕ ಬಡವರ ಮಕ್ಕಳ ಶಿಕ್ಷಣ ಹಕ್ಕನ್ನು ಕಸಿದುಕೊಳ್ಳುವ ಪ್ರಯತ್ನಕ್ಕೆ ಸರ್ಕಾರ ಮುಂದಾಗಿದೆ’ ಎಂದು ಆರೋಪಿಸಿದರು.
‘ಮಂಡ್ಯದಲ್ಲಿ ಮ್ಯಾಗ್ನೆಟ್ ಶಾಲೆಗೆ ವಿದ್ಯಾರ್ಥಿಗಳು ತಿಂಗಳಿಗೆ ₹4,800 ಸಾರಿಗೆ ಶುಲ್ಕ ಪಾವತಿಸಬೇಕಾಗಿದೆ. ಇದೇ ವ್ಯವಸ್ಥೆಯನ್ನು ಗೋಟಗಿಯಲ್ಲೂ ಜಾರಿಗೊಳಿಸಲಾಗಬಹುದು. ಸಾರ್ವಜನಿಕ ಶಾಲೆಗಳು ಜನರ ಹಕ್ಕು ಅವನ್ನು ಮುಚ್ಚುವುದನ್ನು ನಾವು ಒಪ್ಪುವುದಿಲ್ಲ’ ಎಂದು ಎಚ್ಚರಿಸಿದರು.
ಗ್ರಾಮಸ್ಥರಾದ ಮನೋಹರ್ ಮಾತನಾಡಿ, ‘ಕೆಪಿಎಸ್ ಮ್ಯಾಗ್ನೆಟ್ ಬಡವರ ವಿರೋಧಿ ಯೋಜನೆ. ನಮ್ಮೂರ ಶಾಲೆ ಯಾವ ಪರಿಸ್ಥಿತಿಯಲ್ಲೂ ಮುಚ್ಚಲು ನಾವು ಅವಕಾಶ ಕೊಡುವುದಿಲ್ಲ’ ಎಂದು ಖಂಡಿಸಿದರು.

ಬಳಿಕ ಪ್ರತಿಭಟನೆಯಲ್ಲಿ ಸೋನುಬಾಯಿ ಮಾತನಾಡಿ, ‘ನಾವು ಬಡವರು, ನಮ್ಮ ಮಕ್ಕಳಿಗೆ ಸರ್ಕಾರಿ ಶಾಲೆಯೇ ಆಶ್ರಯ. ಸರ್ಕಾರವು ನಮ್ಮ ತೆರಿಗೆಯ ಹಣದಲ್ಲಿ ಸರಕಾರಿ ಶಾಲೆ ನಡೆಸಲಿ. ಯಾರೇ ಬಂದು ಒತ್ತಡ ಹೇರಿದರೂ ಶಾಲೆ ಮುಚ್ಚಲು ನಾವು ಬಿಡುವುದಿಲ್ಲ’ ಎಂದು ಸ್ಪಷ್ಟಪಡಿಸಿದರು.
ಇದನ್ನು ಓದಿದ್ದೀರಾ? ಯಾದಗಿರಿ | ದೇವಪ್ಪ ಅಬ್ಲಿ ಭಾರತೀಯ ಸೇನೆಗೆ ಆಯ್ಕೆ; ಗ್ರಾಮಸ್ಥರಿಂದ ಅದ್ದೂರಿ ಮೆರವಣಿಗೆ
ಪ್ರತಿಭಟನೆಯಲ್ಲಿ ಎಐಡಿಎಸ್‌ಒ ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ನಾಗರಾಜ್, ಕುಮಾರ್, ದಿನೇಶ್, ಆಕಾಶ್, ಸುಭಾಷ್, ಅರುಣ್, ಚೆನ್ನಪ್ಪ, ಕಾರ್ತಿಕ್, ನಂದಿನಿ, ರವೀನಾ, ಶಿವಾನಿ ಸೇರಿದಂತೆ ನೂರಾರು ಪೋಷಕರು ಹಾಗೂ ವಿದ್ಯಾರ್ಥಿಗಳು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.





