ಯಾದಗಿರಿ ನಗರದಲ್ಲಿನ ಪ್ರಮುಖ ರಸ್ತೆಗಳಲ್ಲಿ ಹೆಚ್ಚಾಗುತ್ತಿರುವ ಗುಂಡಿಗಳು ಮತ್ತು ಹಂಪ್ಸ್ ಇಲ್ಲದಕ್ಕೆ ಅಪಘಾತ ಸಂಖ್ಯೆ ಹೆಚ್ಚುತ್ತಿದ್ದು, ಕೂಡಲೇ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಬೇಕೆಂದು ಆಗ್ರಹಿಸಿ ಅಂಬೇಡ್ಕರ್ ಸೇವಾ ಸಮಿತಿ ಜಿಲ್ಲಾ ಸಮಿತಿ ಪದಾಧಿಕಾರಿಗಳು ಲೋಕೋಪಯೋಗಿ ಇಲಾಖೆಯ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರಿಗೆ ಮನವಿ ಸಲ್ಲಿಸಿದರು.
ಸಮಿತಿಯ ಜಿಲ್ಲಾಧ್ಯಕ್ಷ ರಾಹುಲ್ ಕೊಲ್ಲೂರಕರ್ ಮಾತನಾಡಿ, ‘ಯಾದಗಿರಿ ನಗರದಲ್ಲಿ ಅನೇಕ ಮುಖ್ಯ ರಸ್ತೆಗಳಲ್ಲಿ ಗುಂಡಿಗಳು ಬಿದ್ದಿದ್ದು, ನಾಗರಿಕರು, ವಿಶೇಷವಾಗಿ ವಿದ್ಯಾರ್ಥಿಗಳು ಮತ್ತು ಹಿರಿಯರು ದಿನನಿತ್ಯ ಜೀವಭಯದಲ್ಲಿ ಸಂಚರಿಸುವಂತಾಗಿದೆ. ಹೊಸ ಬಸ್ ನಿಲ್ದಾಣ ಎದುರುಗಡೆ, ಹೊಸಳ್ಳಿ ಕ್ರಾಸ್, ಸೈದಾಪೂರ ಹೋಟೆಲ್ ಎದುರು, ಬಸವೇಶ್ವರ ಗಂಜ್, 1ನೇ ಮತ್ತು 2ನೇ ಗೇಟ್ ಪ್ರದೇಶಗಳಲ್ಲಿ ಹಂಪ್ಸ್ ತಕ್ಷಣ ಅಳವಡಿಸಬೇಕು. ಹೊಸಳ್ಳಿ ರಸ್ತೆ ಚರ್ಚ್ ಎದುರು ಹಾಗೂ ಜೆಸ್ಕಾಂ ಕ್ವಾಟರ್ಸ್ ಬಳಿಯ ಗುಂಡಿಗಳನ್ನು ಕೂಡಲೇ ಮುಚ್ಚಬೇಕು’ ಎಂದು ಒತ್ತಾಯಿಸಿದರು.
ʼನಗರದ ಹಲವು ಭಾಗಗಳಲ್ಲಿ ಹಂಪ್ಸ್ ಕೊರತೆಯಿಂದ ಬೃಹತ್ ಲಾರಿ, ಟಿಪ್ಪರ್‌ಗಳು ಮತ್ತು ಬೈಕ್‌ಗಳು ವೇಗವಾಗಿ ಸಂಚರಿಸುತ್ತಿದ್ದು, ಶಾಲೆಗೆ ಹೋಗುವ ಮಕ್ಕಳಿಗೆ ಅಪಘಾತ ಸಂಭವಿಸುವ ಆತಂಕ ಹೆಚ್ಚಾಗಿದೆ. ಸಾರ್ವಜನಿಕರ ಸುರಕ್ಷತೆಗಾಗಿ ತಕ್ಷಣ ಕ್ರಮ ಕೈಗೊಳ್ಳುವುದು ಅವಶ್ಯಕವಾಗಿದೆ ಎಂದು ಹೇಳಿದರು.
ಇದನ್ನು ಓದಿದ್ದೀರಾ? ಯಾದಗಿರಿ | ರಾಜಾ ವೆಂಕಟಪ್ಪ ನಾಯಕ ಚೌಕ್‌ಗೆ ಎಲ್‌ಇಡಿ, ಮ್ಯೂಸಿಯಂ ಲೈಟ್ ಅಳವಡಿಸಲು ಮನವಿ
ಮನವಿಗೆ ಸ್ಪಂದಿಸಿ ಒಂದು ವಾರದೊಳಗೆ ಕ್ರಮ ಕೈಗೊಳ್ಳದಿದ್ದಲ್ಲಿ ಲೋಕೋಪಯೋಗಿ ಇಲಾಖೆಯ ಕಚೇರಿ ಮುಂದೆ ನಿರಂತರ ಹೋರಾಟ ನಡೆಸಲಾಗುವುದು ಎಂದು ಸಮಿತಿ ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ಮುಖಂಡ ಕಾಶಿನಾಥ ಕಣೇಕಲ್ ಮತ್ತು ಸಮಿತಿಯ ಸದಸ್ಯರು ಉಪಸ್ಥಿತರಿದ್ದರು.





