ಅಪೂರ್ಣಗೊಂಡಿರುವ ರಸ್ತೆ ಕಾಮಗಾರಿಗಳನ್ನು ತಕ್ಷಣ ಪೂರ್ಣಗೊಳಿಸುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಸುರಪುರ ಮತ್ತು ಹುಣಸಗಿ ತಾಲೂಕು ಸಮಿತಿಯಿಂದ ಗುರುವಾರ ಬೃಹತ್ ಪ್ರತಿಭಟನೆ ನಡೆಸಲಾಯಿತು.
ಸುರಪುರ ತಾಲೂಕಿನ ರುಕ್ತಾಪೂರ, ಚಂದಲಾಪೂರ, ಕರ್ನಾಳ, ಸೂಗೂರು ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆ ಸೇರಿದಂತೆ ವಿವಿಧ ಗ್ರಾಮಾಂತರ ಪ್ರದೇಶಗಳ ಅನೇಕ ರಸ್ತೆ ಕಾಮಗಾರಿಗಳು ಅರ್ಧಕ್ಕೆ ನಿಂತಿರುವುದರಿಂದ ವಾಹನ ಸವಾರರು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ಈ ರಸ್ತೆಗಳನ್ನು ಶೀಘ್ರವಾಗಿ ಪೂರ್ಣಗೊಳಿಸುವಂತೆ ಆಗ್ರಹಿಸಿ ಪ್ರತಿಭಟನಾಕಾರರು ತಹಶೀಲ್ದಾರ್ ಕಚೇರಿ ಎದುರು ಧರಣಿ ನಡೆಸಿದರು.
ಪ್ರತಿಭಟನೆಯನ್ನು ಉದ್ದೇಶಿಸಿ ರೈತ ಸಂಘದ ತಾಲೂಕು ಅಧ್ಯಕ್ಷ ಹಣ್ಣಮಂತ್ರಾಯ ಚಂದಲಾಪೂರ ಮಾತನಾಡಿ, ‘ಸೂಗೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕರ್ನಾಳದಿಂದ ರುಕ್ಕಾಪರವರೆಗೆ ಹೋಗುವ ರಸ್ತೆ, ಚಂದಲಾಪೂರದಿಂದ ಪೆಟ್ರೋಲ್ ಪಂಪ್‌ಗೆ ಹೋಗುವ ರಸ್ತೆ, ಬೇವಿನಾಳದಿಂದ ಅಡೊಡಗಿಗೆ ಹೋಗುವ ರಸ್ತೆ ಹಾಗೂ ಚೌಡೇಶ್ವರಿಹಾಳದಿಂದ ಸೂಗೂರಿಗೆ ಹೋಗುವ ರಸ್ತೆಗಳನ್ನು ಪೂರ್ಣಗೊಳಿಸದೇ ಗುತ್ತಿಗೆದಾರರು ಮತ್ತು ಅಧಿಕಾರಿಗಳು ಸೇರಿಕೊಂಡು ಕಾಮಗಾರಿಗಳನ್ನು ಅರ್ಧದಲ್ಲೇ ನಿಲ್ಲಿಸಿದ್ದಾರೆ’ ಎಂದು ಆರೋಪಿಸಿದರು.
‘ಹಾಲಭಾವಿ ಗ್ರಾಮದಲ್ಲಿ ನಡೆಯುತ್ತಿರುವ ರಸ್ತೆ ಕಾಮಗಾರಿಯೂ ಅಪೂರ್ಣವಾಗಿದ್ದು, ಹುಣಸಗಿ ತಾಲೂಕಿನಲ್ಲಿ ಮದಲಿಂಗನಾಳದಿಂದ ಕುರೇಕನಾಳದವರೆಗೆ ಹೋಗುವ ರಸ್ತೆ ಸಂಪೂರ್ಣ ಹದಗೆಟ್ಟಿದೆ. ರಸ್ತೆಯ ಎರಡೂ ಬದಿಗಳಲ್ಲಿ ಜಾಲಿ ಗಿಡಗಳು ಬೆಳೆದಿದ್ದು, ವಾಹನ ಸಂಚಾರಕ್ಕೆ ತೀವ್ರ ಅಡಚಣೆಯಾಗಿದೆ. ರಸ್ತೆ ಬದಿಯ ಜಾಲಿ ತೆರವುಗೊಳಿಸುವಂತೆ ಗ್ರಾಮ ಪಂಚಾಯಿತಿ ಅಧಿಕಾರಿಗಳಿಗೆ ಮನವಿ ಸಲ್ಲಿಸಿದಾಗ, ಅನುದಾನ ಇಲ್ಲವೆಂದು ಉತ್ತರ ನೀಡುತ್ತಾರೆ’ ಎಂದು ಅವರು ಬೇಸರ ವ್ಯಕ್ತಪಡಿಸಿದರು.
‘ಅಪೂರ್ಣ ರಸ್ತೆಗಳ ಕಾರಣ ಮನೆಗಳು ಮತ್ತು ಜಮೀನುಗಳಿಗೆ ಧೂಳು ಹರಡುತ್ತಿದ್ದು, ಬಿತ್ತಿದ ಬೆಳೆಗಳು ಹಾನಿಯಾಗುತ್ತಿವೆ. ಮನೆಗಳಲ್ಲಿ ಊಟ ಮಾಡುವುದಕ್ಕೂ ತೊಂದರೆಯಾಗಿದ್ದು, ರೈತರು ತಮ್ಮ ಹೊಲಗಳಿಗೆ ತೆರಳಲು ಸಹ ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣವಾಗಿದೆ. ಇಷ್ಟಾದರೂ ಸಂಬಂಧಿಸಿದ ಅಧಿಕಾರಿಗಳು ನಿರ್ಲಕ್ಷ್ಯ ವಹಿಸುತ್ತಿದ್ದಾರೆ’ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.
ಇದನ್ನು ಓದಿದ್ದೀರಾ? ಕಲಬುರಗಿ | ಪೂರ್ವ ಪ್ರಾಥಮಿಕ ಶಿಕ್ಷಕರ ನೇಮಕಾತಿಗೆ ವೆಲ್ಫೇರ್ ಪಾರ್ಟಿ ಮನವಿ
‘ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಕೂಡಲೇ ಎಲ್ಲಾ ಅಪೂರ್ಣ ರಸ್ತೆ ಕಾಮಗಾರಿಗಳನ್ನು ಪೂರ್ಣಗೊಳಿಸಿ ಸಾರ್ವಜನಿಕರ ಸಂಚಾರಕ್ಕೆ ಅನುಕೂಲ ಮಾಡಿಕೊಡಬೇಕೆಂದು ಒತ್ತಾಯಿಸಿದರು. ಬೇಡಿಕೆಗಳನ್ನು ನಿರ್ಲಕ್ಷಿಸಿದರೆ ಮುಂದಿನ ದಿನಗಳಲ್ಲಿ ಕಚೇರಿಗೆ ಬೀಗ ಹಾಕಿ ನ್ಯಾಯ ಸಿಗುವವರೆಗೆ ಉಗ್ರ ಹೋರಾಟ ನಡೆಸಲಾಗುವುದು’ ಎಂದು ರೈತ ಸಂಘ ಎಚ್ಚರಿಕೆ ನೀಡಿತು.
ಈ ಸಂದರ್ಭದಲ್ಲಿ ವೆಂಕಟೇಶಗೌಡ ಕುಪಗಲ್, ಹನುಮಗೌಡ್ ನಾರಾಯಣಪೂರ್, ಮಲ್ಲಣ್ಣ ಹಾಲಭಾವಿ, ಸಾಹೇಬಗೌಡ ಮದಲಿಂಗನಾಳ, ಗದ್ದೆಪ್ಪ ನಾಗದೇವಿನಾಳ, ಭೀಮಣ್ಣ ತಿಪ್ಪನಟಗಿ, ಭೀಮನಗೌಡ ಮದಲಿಂಗನಾಳ, ರಾಗು ಕುಪ್ಪಗಲ್, ಮರೆಪ್ಪ ಮಾಸ್ಟರ್ ಹೇಮನೂರು, ಚಂದ್ರು ವಜ್ಜಲ್, ನಾಗಪ್ಪ ಕುಪಗಲ್, ಶಿವನಗೌಡ ರುಕ್ಮಾಪೂರ, ಮೌನೇಶ ಅರಳಹಳ್ಳಿ, ಪ್ರಭು ದೊರಿ, ದೇವಿಂದ್ರಪ್ಪ ತಿಪ್ಪನಟಗಿ, ನಿಂಗನಗೌಡ ಗುಳಬಾಳ, ತಿಪ್ಪಣ್ಣ ತಳವಾರ, ಭೀಮರಾಯ ಒಕ್ಕಲಿಗ, ಖುದಾಭಕ್ಷ, ಯಂಕೋಬ ದೊರೆ ಕುಪಗಲ್, ಯಂಕಪ್ಪ ದಾಸರ, ದೇವಪ್ಪ ತಿಪ್ಪನಟಗಿ, ಮರಲಿಂಗಪ್ಪ ಅಡ್ಡೂಡಗಿ, ಮಲ್ಲಣ್ಣ ಹಾಲಭಾವಿ, ಮಾನಪ್ಪ ಕೊಂಬಿನ್, ನಾಗಪ್ಪ ಕುಪ್ಪಗಲ್, ಶಿವು ಸಾಹುಕಾರ ಸೂಗುರ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.





