ರಾಜ್ಯ ಮತ್ತು ಕೇಂದ್ರದ ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಗಾಗಿ ಆಗ್ರಹಿಸಿ ಉದ್ಯೋಗಾಕಾಂಕ್ಷಿಗಳ ಹೋರಾಟ ಸಮಿತಿ ನೇತೃತ್ವದಲ್ಲಿ ಇಂದು ಯಾದಗಿರಿಯಲ್ಲಿ ಬೃಹತ್ ಪ್ರತಿಭಟನೆ ಜರುಗಿತು. ನಗರದ ಹೊಸ ಬಸ್ ನಿಲ್ದಾಣದಿಂದ ಸುಭಾಷ್ ವೃತ್ತದವರೆಗೆ ನಡೆದ ರ್ಯಾಲಿಯಲ್ಲಿ ಭಾಗವಹಿಸಿದ್ದ ನೂರಾರು ನಿರುದ್ಯೋಗಿಗಳು, ಯುವಕರು ಸರ್ಕಾರಗಳ ವಿರುದ್ಧ ಘೋಷಣೆ ಕೂಗುತ್ತಾ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿದರು.
ಹೋರಾಟ ಸಮಿತಿಯ ರಾಜ್ಯ ಸಹ ಸಂಚಾಲಕ ಚನ್ನಬಸವ ಜಾನೇಕಲ್ ಮಾತನಾಡಿ, “ಸರ್ಕಾರ ಬದಲಾದರೂ ಯುವಕರ ಭವಿಷ್ಯ ಬದಲಾಗಿಲ್ಲ. ಬಿಜೆಪಿ ಪಕ್ಷದ ವೈಫಲ್ಯಗಳನ್ನು ಎತ್ತಿತೋರಿಸುತ್ತಾ ಅಧಿಕಾರಕ್ಕೆ ಬಂದ ಕಾಂಗ್ರೆಸ್, ಎರಡು ವರ್ಷಗಳಾದರೂ ಒಬ್ಬ ಆಕಾಂಕ್ಷಿಗೂ ಒಳ ಮೀಸಲಾತಿ ಹೆಸರಿನಲ್ಲಿ ನೇಮಕ ಮಾಡಿಲ್ಲ. ಪ್ರಾಥಮಿಕ-ಪ್ರೌಢಶಿಕ್ಷಣ ಇಲಾಖೆಯಲ್ಲಿರುವ 59,454 ಖಾಲಿ ಹುದ್ದೆಗಳು ಸೇರಿ ಒಟ್ಟು 43 ಇಲಾಖೆಗಳಲ್ಲಿ ರಾಜ್ಯದಲ್ಲಿ ಪ್ರಸ್ತುತ 2.84 ಲಕ್ಷ ಹುದ್ದೆಗಳು ಖಾಲಿ ಇವೆ. ನೇಮಕಾತಿ ಮಾಡುವ ಬದಲು ಹುದ್ದೆಗಳನ್ನು ವಿಲೀನಗೊಳಿಸುವ, ಹುದ್ದೆಗಳನ್ನು ರದ್ದು ಮಾಡುವ ಕ್ರಮ ನಡೆಯುತ್ತಿದೆ” ಎಂದು ಆಕ್ರೋಶ ವ್ಯಕ್ತಪಡಿಸಿದರು.



“ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ ಯುವಕರು ಲಕ್ಷಾಂತರ ರೂಪಾಯಿ ವ್ಯಯಿಸುತ್ತಿದ್ದರೂ, ವರ್ಷಗಳಿಂದ ನೇಮಕಾತಿ ಪ್ರಕ್ರಿಯೆಯೇ ನಿಂತು ಯುವಕರ ನಿರೀಕ್ಷೆಗಳು ಸುಳ್ಳಾಗುತ್ತಿವೆ ಎಂದು ಹೇಳಿದರು. ಭರ್ತಿಯಲ್ಲಿ ಅಕ್ರಮ, ಭ್ರಷ್ಟಾಚಾರ, ಪ್ರಶ್ನೆಪತ್ರಿಕೆ ಸೋರಿಕೆ ತಡೆಯಲು ಗಟ್ಟಿಯಾದ ಕ್ರಮ ಕೈಗೊಳ್ಳಬೇಕು. ದುಬಾರಿ ಅರ್ಜಿ ಶುಲ್ಕ ತೆಗೆದು ಹಾಕಿ, ಪರೀಕ್ಷಾರ್ಥಿಗಳಿಗೆ ಉಚಿತ ಸಾರಿಗೆ ಒದಗಿಸಬೇಕು” ಎಂದ ಅವರು, “ಕೆಲವು ಕುಂಟುನೆಪಗಳನ್ನು ಹೇಳುತ್ತಾ ನೇಮಕಾತಿಗಳನ್ನು ಮುಂದೂಡಲಾಗುತ್ತಿದೆ. ಉದ್ಯೋಗದ ಭರವಸೆಯಿಲ್ಲದೆ ಯುವಜನರು ಆತ್ಮಹತ್ಯೆಯಂತಹ ಕಠಿಣ, ನೋವಿನ ನಿರ್ಧಾರಗಳ ಮೊರೆ ಹೋಗುತ್ತಿದ್ದಾರೆ. ಕಳೆದ ಹಲವಾರು ವರ್ಷಗಳಿಂದಲೂ ನೇಮಕಾತಿ ಇಲ್ಲದಿದ್ದರೂ ಜಾತಕ ಪಕ್ಷಿಯಂತೆ ನೇಮಕಾತಿಗಾಗಿ ಕಾಯುತ್ತಾ, ಸಾವಿರಾರು ರೂಪಾಯಿಗಳನ್ನು ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿಗೆ ಖರ್ಚು ಮಾಡಿಕೊಂಡಿದ್ದಾರೆ. ಹಗಲಿರುಳು ಕೂಲಿ-ನಾಲಿ ಮಾಡಿ, ಸಾಲ ಮಾಡಿ ಪೋಷಕರು ಮಕ್ಕಳಿಗೆ ಕೋಚಿಂಗ್ ಕೊಡಿಸುತ್ತಿದ್ದಾರೆ. ಯಾವುದೇ ನೆಪಗಳನ್ನು ಹೇಳದೆ, ಕೆಲವೇ ಸಾವಿರ ಹುದ್ದೆಗಳ ಭರ್ತಿಗೆ ಸೀಮಿತಗೊಳಿಸದೆ ಎಲ್ಲ ಖಾಲಿ ಹುದ್ದೆಗಳ ಭರ್ತಿಗೆ ಕೂಡಲೇ ತುರ್ತು ಕ್ರಮಗಳನ್ನು ಕೈಗೊಳ್ಳಬೇಕು ಎಂದು ಕೇಂದ್ರ ಹಾಗೂ ರಾಜ್ಯ ಸರ್ಕಾರವನ್ನು ಆಗ್ರಹಿಸಿದರು.
ಕೇಂದ್ರ ಸರ್ಕಾರಕ್ಕೂ ಮನವಿ ಸಲ್ಲಿಸಿರುವ ಪ್ರತಿಭಟನಾಕಾರರು, ರೈಲ್ವೇ, ಬ್ಯಾಂಕ್, ಎಲ್‌ಐಸಿ ಸೇರಿದಂತೆ ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ 9.79 ಲಕ್ಷ ಹುದ್ದೆಗಳನ್ನು ಕೂಡಲೇ ಭರ್ತಿ ಮಾಡಬೇಕೆಂದು ಒತ್ತಾಯಿಸಿದರು. ಜೊತೆಗೆ, ದಿನಗೂಲಿ-ಗುತ್ತಿಗೆ ಪದ್ಧತಿಯನ್ನು ರದ್ದು ಮಾಡಿ ಎಲ್ಲ ಹುದ್ದೆಗಳನ್ನು ಖಾಯಂ ಮಾಡುವಂತೆ ಆಗ್ರಹಿಸಿದರು.
ಇದನ್ನೂ ಓದಿ: ಯಾದಗಿರಿ | ಗುಂಡಳ್ಳಿ ಗ್ರಾಮಕ್ಕೆ ಬಸ್ ಕಲ್ಪಿಸಲು ಒತ್ತಾಯ; ರಾಹೆ ತಡೆದು ವಿದ್ಯಾರ್ಥಿಗಳ ಪ್ರತಿಭಟನೆ
ಪ್ರತಿಭಟನೆಯಲ್ಲಿ ಸಕ್ಸೆಸ್ ಗ್ರಂಥಾಲಯದ ನಿರ್ದೇಶಕ ಮಾಳಪ್ಪ ಯಾದವ್ ಹಾಗೂ ಹೋರಾಟ ಸಮಿತಿಯ ಸದಸ್ಯರಾದ ಮಹೇಶ್ ಲಿಂಗೇರಿ, ಬಾಗಪ್ಪ ರಾಂಪುರ, ಪರಮ ಸುರಪುರ, ಭೀಮಮ್ಮ ಮೊದಲಾದವರು ಮಾತನಾಡಿ ಸರ್ಕಾರದ ನಿರ್ಲಕ್ಷ್ಯವನ್ನ ಟೀಕಿಸಿದರು.
ಆ ನಂತರ ಪ್ರತಿಭಟನಾಕಾರರು ಹೆಚ್ಚುವರಿ ಜಿಲ್ಲಾಧಿಕಾರಿ ರಮೇಶ್ ಕೋಲಾರ ಅವರಿಗೆ ಮನವಿ ಪತ್ರ ಸಲ್ಲಿಸಿದರು. ಸಮಿತಿಯ ಸದಸ್ಯರಾದ ಸಂತೋಷ್ ರಾಥೋಡ್, ಮಹೇಶ್ ಲಿಂಗೇರಿ, ಬಾಗಪ್ಪ ರಾಂಪುರ, ಮಾಳಪ್ಪ ಯಾದವ್, ಪರಮ ಸುರಪುರ, ದೇವರಾಜ, ಕರಣ್, ಅನಿಲ್‌ಕುಮಾರ್, ರಾಜು, ರೋಹಿತ್, ಮೌನೇಶ್, ಸಂಗಮೇಶ್, ಯಲ್ಲಾಲಿಂಗ, ವಿಶ್ವನಾಥ್, ಹಣಮಂತ ಶಹಪುರ, ಸೋಮ್ಲಾ, ತಾಯಪ್ಪ, ಐಲಿಂಗ, ಮಲ್ಲಮ್ಮ, ಬಸಮ್ಮ, ಭೀಮಮ್ಮ ಮುಂತಾದ ನೂರಾರು ಜನ ಉದ್ಯೋಗಾಕಾಂಕ್ಷಿಗಳು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.





