ಯಾದಗಿರಿ ಜಿಲ್ಲೆಯ ಶಹಾಪುರ ತಾಲ್ಲೂಕಿನ ಗ್ರಾಮೀಣ ಪ್ರದೇಶಗಳಿಗೆ ಸಮರ್ಪಕ ಬಸ್ ವ್ಯವಸ್ಥೆ ಕಲ್ಪಿಸಬೇಕೆಂದು ಒತ್ತಾಯಿಸಿ ಭಾರತ ವಿದ್ಯಾರ್ಥಿ ಫೆಡರೇಶನ್ (ಎಸ್‌ಎಫ್‌ಐ) ತಾಲ್ಲೂಕು ಸಮಿತಿ ವತಿಯಿಂದ ಪ್ರತಿಭಟನೆ ನಡೆಸಿ ಸಾರಿಗೆ ನಿಗಮದ ವ್ಯವಸ್ಥಾಪಕರಿಗೆ ಮನವಿ ಸಲ್ಲಿಸಿದರು.
ಸಂಘಟನೆಯ ಮುಖಂಡರು ಮಾತನಾಡಿ, ʼತಾಲ್ಲೂಕಿನ ಗ್ರಾಮೀಣ ಪ್ರದೇಶಗಳಿಂದ ನೂರಾರು ವಿದ್ಯಾರ್ಥಿಗಳ ಶಹಾಪುರ ನಗರಕ್ಕೆ ಶಿಕ್ಷಣಕ್ಕಾಗಿ ಬರುತ್ತಾರೆ. ಸಕಾಲಕ್ಕೆ ಸಮರ್ಪಕ ಬಸ್ ವ್ಯವಸ್ಥೆಯಿಲ್ಲದೇ ದಿನನಿತ್ಯ ಪರದಾಡುವ ಪರಿಸ್ಥಿತಿ ಎದುರಾಗಿದೆʼ ಎಂದು ಆಕ್ರೋಶ ವ್ಯಕ್ತಪಡಿಸಿದರು.
ʼಸಮಯಕ್ಕೆ ಸರಿಯಾಗಿ ಬಸ್ ಇಲ್ಲದೇ ಶಾಲಾʼಕಾಲೇಜುಗಳಿಗೆ ತಡವಾಗಿ ಹೋಗುವುದ್ದರಿಂದ ವಿದ್ಯಾರ್ಥಿಗಳ ಹಾಜರಾತಿ ಕೊರತೆಯಿಂದ ಶಿಕ್ಷಣ ಕುಂಠಿತವಾಗಿದೆ, ಇದರಿಂದ ಕೆಲ ವಿದ್ಯಾರ್ಥಿಗಳು ತಮ್ಮ ವಿದ್ಯಾಭ್ಯಾಸವನ್ನೇ ಮೊಟುಕುಗೊಳಿಸುತ್ತಿದ್ದಾರೆ. ಕೂಡಲೇ ಬಸ್ ಕೊರತೆ ಇರುವ ಎಲ್ಲ ಹಳ್ಳಿಗಳಿಗೆ ಬಸ್ ಓಡಿಸಬೇಕು. ಇಲ್ಲದಿದ್ದರೆ ಭಾರತ ವಿದ್ಯಾರ್ಥಿ ಫೆಡರೇಶನ್ ವತಿಯಿಂದ ಉಗ್ರ ಹೋರಾಟ ಹಮ್ಮಿಕೊಳ್ಳಲಾಗುವುದುʼ ಎಂದು ಎಚ್ಚರಿಕೆ ನೀಡಿದರು.
ಎಸ್‌ಎಫ್‌ಐ ಸಂಘಟನಾ ಸಮಿತಿ ಜಿಲ್ಲಾ ಸಂಚಾಲಕ ಇಮಾಮಸಾಬ್ ನದಾಫ್ ಸೇರಿದಂತೆ ಸಂಘಟನೆಯ ಮುಖಂಡರಾದ ಶರಣುಗೌಡ, ಗೀತಾ, ಬಸವರಾಜ್, ವಿದ್ಯಾಶ್ರೀ, ರೇವಣಸಿದ್ದ, ಶಾಲಾ, ಕಾಲೇಜಿನ ವಿದ್ಯಾರ್ಥಿಗಳು ಇದ್ದರು.





