ನಗರ ಹಾಗೂ ಜಿಲ್ಲೆಯ ವಿವಿಧ ಭಾಗಗಳಲ್ಲಿ ರಸ್ತೆ ವಿಭಾಜಕಗಳು ಸೇರಿದಂತೆ ಸಾರ್ವಜನಿಕ ಸ್ಥಳಗಳಲ್ಲಿ ದುಬೈ ಸಸಿಗಳನ್ನು ನೆಡುವುದನ್ನು ತಕ್ಷಣ ಕೈಬಿಡಬೇಕೆಂದು ಆಗ್ರಹಿಸಿ ಜಯ ಕರ್ನಾಟಕ ಸಂಘಟನೆ ವತಿಯಿಂದ ಮನವಿ ಸಲ್ಲಿಸಿದರು.
ಬುಧವಾರ ಪ್ರಾದೇಶಿಕ ಅರಣ್ಯ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿಗೆ ಮನವಿ ಸಲ್ಲಿಸಿ ಜಿಲ್ಲಾ ಅಧ್ಯಕ್ಷ ಬಿ ಎನ್ ವಿಶ್ವನಾಥ ನಾಯಕ ಮಾತನಾಡಿ, ‘ದುಬೈ ಸಸಿಗಳು ಪರಿಸರಕ್ಕೆ ವಿಷಕಾರಿ ಅಶುದ್ಧ ಗಾಳಿಯನ್ನು ಬಿಡುತ್ತಿವೆ. ಅವುಗಳಿಂದ ಅಸ್ತಮಾ, ಶ್ವಾಸಕೋಶದ ತೊಂದರೆಗಳು ಹಾಗೂ ಕ್ಯಾನ್ಸರ್‌ನಂತಹ ಆರೋಗ್ಯ ಸಮಸ್ಯೆಗಳು ಉಂಟಾಗುತ್ತವೆ ಎಂಬುದು ವೈಜ್ಞಾನಿಕವಾಗಿ ಸಾಬೀತಾಗಿದೆ,’ ಎಂದು ಹೇಳಿದರು.
ಅವರು ಮುಂದುವರೆದು ‘ಅರಣ್ಯ ಇಲಾಖೆ ಇತ್ತೀಚೆಗೆ ವಿವಿಧ ಸ್ಥಳಗಳಲ್ಲಿ ಈ ಸಸಿಗಳನ್ನು ನೆಡುವ ಕಾರ್ಯ ಕೈಗೊಂಡಿದೆ. ಇದು ಸಂಪೂರ್ಣ ಅವೈಜ್ಞಾನಿಕ ಹಾಗೂ ಅವಿವೇಕದ ನಿರ್ಧಾರ. ಪರಿಸರ ಮತ್ತು ಮಾನವ ಆರೋಗ್ಯಕ್ಕೆ ಅಪಾಯ ಉಂಟುಮಾಡುವ ಈ ಸಸಿಗಳನ್ನು ನೆಡುವ ಬದಲು ಆಮ್ಲಜನಕ ಉತ್ಪಾದನೆಗೆ ಸಹಾಯಕವಾದ, ಹಣ್ಣು-ಹಂಪಲು ನೀಡುವ ಸಸಿಗಳನ್ನು ನೆಡಬೇಕು,’ ಎಂದು ಆಗ್ರಹಿಸಿದರು.
ಇದನ್ನು ಓದಿದ್ದೀರಾ? ಪಥಸಂಚಲನ ಪಾಲಿಟಿಕ್ಸ್ | ವಾಗ್ವಾದ, ಗೊಂದಲದಲ್ಲೇ ಕಲಬುರಗಿ ಶಾಂತಿ ಸಮಿತಿ ಸಭೆ ಮುಕ್ತಾಯ
‘ಯಾದಗಿರಿ ಜಿಲ್ಲಾಧಿಕಾರಿ ಕಚೇರಿ, ಖಾಸಗಿ ಕಟ್ಟಡಗಳ ಮುಂಭಾಗ, ಹೈದ್ರಾಬಾದ್ ರಸ್ತೆ ವಿಭಾಜಕಗಳು ಸೇರಿದಂತೆ ಸುರಪುರ, ಶಹಾಪೂರ, ವಡಗೇರಾ, ಗುರುಮಠಕಲ್, ಹುಣಸಗಿ ಹಾಗೂ ಕಡೇಚೂರು ಕೈಗಾರಿಕಾ ಪ್ರದೇಶಗಳಲ್ಲಿ ಶೇಕಡಾ 90ರಷ್ಟು ದುಬೈ ಸಸಿಗಳು ನೆಡಲ್ಪಟ್ಟಿವೆ ಎಂದು ತಿಳಿಸಿ, ಈ ಕೆಲಸವನ್ನು ಕೂಡಲೇ ನಿಲ್ಲಿಸಲು ಅರಣ್ಯ ಅಧಿಕಾರಿಗಳಲ್ಲಿ ಒತ್ತಾಯಿಸಿ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ರಾಜ್ಯ ಕಾರ್ಯದರ್ಶಿ ವಿಜಯಕುಮಾರ ಮೊಗದಂಪುರ, ಶಿವರಾಜ ಗುತ್ತೇದಾರ, ನಾಗರಾಜ ರಾಮಸಮುದ್ರ, ಮಾರುತಿ ಮುದ್ನಾಳ, ದೀಪಕ ಪೊದ್ದಾರ, ಅಶೋಕ್ ರೆಡ್ಡಿ ಎಲ್ಲೇರಿ, ರಂಗನಾಥ ನಾಯಕ, ಭೀಮಣ್ಣ ಪೂಜಾರಿ, ಸಾಬೆರಡ್ಡಿ, ನಾಗರಡ್ಡಿ, ಸಿದ್ದು ಸಿದ್ಧಿ, ಎಂ.ಡಿ. ಅಮೀರ್, ಮಂಜುನಾಥ ಸೇರಿದಂತೆ ಇನ್ನಿತರರು ಇದ್ದರು.





