ವಸತಿಶಾಲೆಯ ಅಡುಗೆ ಮನೆಯಲ್ಲಿ ಕೆಲಸ ಮಾಡುತ್ತಿರುವಾಗ ಮೇಮೇಲೆ ಬಿಸಿ ಪಾನಕ ಬಿದ್ದು, ಮೈ ಸುಟ್ಟಿರುವುದಕ್ಕೆ ಚಿಕಿತ್ಸೆ ನೀಡಲು ₹5 ಲಕ್ಷ ಖರ್ಚಾಗುವುದಾಗಿ ವೈದ್ಯರು ಹೇಳಿದ್ದಾರೆ. ಆದರೆ ಸಂಪೂರ್ಣ ಚಿಕಿತ್ಸೆ ವೆಚ್ಚ ಭರಿಸುವುದಾಗಿ ಹೇಳಿದ್ದ ಸ್ವಾಮಿ ನಾರಾಯಣ ಗುರುಕುಲ ವಿದ್ಯಾಪೀಠದ ಮುಖ್ಯೋಪಧ್ಯಾಯರು, ಈಗ ನಮ್ಮ ಫೋನ್ ಕರೆಗಳನ್ನೇ ಸ್ವೀಕರಿಸುತ್ತಿಲ್ಲ ಎಂದು ವಿದ್ಯಾರ್ಥಿಯ ಪೋಷಕ ಸಂಗಮೇಶ ಎಂಬುವವರು ಆರೋಪಿಸಿದ್ದಾರೆ.
ಕಲಬುರಗಿ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳಿಗೆ ಮನವಿ ಸಲ್ಲಿಸಿ ಅಲವತ್ತುಕೊಂಡಿರುವ ಅವರು, “ಯಾದಗಿರಿ ಜಿಲ್ಲೆಯ ಶಹಾಪುರ ತಾಲೂಕಿನ ಹೊತಪೇಟ ಗ್ರಾಮದವರಾದ ನಾವು ಮಗ(ಚೇತನ್)ನನ್ನು ಕಲಬುರಗಿ ನಗರದ ಸ್ವಾಮಿ ನಾರಾಯಣ ಗುರುಕುಲ ವಿದ್ಯಾಪೀಠದಲ್ಲಿ ವಿದ್ಯಾಭ್ಯಾಸ ಮಾಡಲು ಬಿಟ್ಟಿದ್ದೆವು. ಅಲ್ಲಿಯ ಅಡುಗೆ ಮನೆಯಲ್ಲಿ ಮಕ್ಕಳಿಂದಲೇ ಕೆಲಸ ಮಾಡಿಸುತ್ತಿದ್ದರು. ಈ ವೇಳೆ ಜಾಮೂನು ಮಾಡುವ ಸಂದರ್ಭದಲ್ಲಿ ಅವನ ಮೇಲೆ ಬಿಸಿ ಪಾಕ ಬಿದ್ದಿದ್ದು, ಗಂಭಿರ ಗಾಯಗಳಾಗಿವೆ” ಎಂದು ಆತಂಕ ವ್ಯಕ್ತಪಡಿಸಿದರು.
“ಈ ಕುರಿತು ಮುಖ್ಯೋಪಾಧ್ಯಾಯರ ಗಮನಕ್ಕೆ ತಂದಾಗ, ಶಾಲೆವತಿಯಿಂದಲೇ ಸಂಪೂರ್ಣವಾಗಿ ಅವನ ಚಿಕಿತ್ಸೆ ವೆಚ್ಚ ಭರಿಸುವುದಾಗಿ ಹೇಳಿ ಕಳುಹಿಸಿದ್ದರು. ಆದರೆ ಈಗ ನನ್ನ ಮಗನಿಗೆ ಅಲ್ಪ ಚಿಕಿತ್ಸೆ ಮಾಡಿಸಿ, ಕಣ್ಮರೆಯಾಗಿದ್ದಾರೆ. ನಾನು ಹಲವು ಬಾರಿ ಪೋನ್ ಕಾಲ್ ಮಾಡಿದರೂ ರೀಸಿವ್ ಮಾಡುತ್ತಿಲ್ಲ. ಇತ್ತ ವೈದ್ಯರು ಅವನ ಚಿಕಿತ್ಸೆಗಾಗಿ 5 ಲಕ್ಷ ರೂ.ವರೆಗೂ ಖರ್ಚಾಗುತ್ತದೆಂದು ಹೇಳುತ್ತಿದ್ದಾರೆ. ನಮಗೆ ದಿಕ್ಕೇ ತೋಚದಂತಾಗಿದೆ” ಎಂದು ಅವಲತ್ತುಕೊಂಡಿದ್ದಾರೆ.
ಈ ಸುದ್ದಿ ಓದಿದ್ದೀರಾ? ಧಾರವಾಡ | ಜಿಲ್ಲೆಯಲ್ಲಿ 245 ಇಸ್ಪೀಟ್, ಜೂಜು ಆಟಗಾರರ ಬಂಧನ
ದಯಾಳುಗಳಾದ ತಾವುಗಳು ಮಧ್ಯ ಪ್ರವೇಶಿಸಿ ನನ್ನ ಮಗನ ಆರೋಗ್ಯದ ಸಲುವಾಗಿ ಶಾಲೆಯ ಕಡೆಯಿಂದ ವೈದ್ಯಕೀಯ ಚಿಕಿತ್ಸೆ ಪರಿಹಾರವನ್ನು ಕೊಡಿಸುವುದರ ಜತೆಗೆ ಅವನ ಮುಂದಿನ ವಿದ್ಯಾಭ್ಯಾಸಕ್ಕೆ ಅನುಕೂಲ ಮಾಡಿಕೊಡಬೇಕು” ಎಂದು ಮನವಿ ಮಾಡಿದರು.





