ಜಾತಿನಿಂದನೆ ಪ್ರಕರಣ ದಾಖಲಿಸುತ್ತೇವೆ ಎಂದು ಪರಿಶಿಷ್ಟ ಜಾತಿ ಕುಟುಂಬ ಎಚ್ಚರಿಸಿದ್ದರಿಂದ ಬೆದರಿದ ಯುವಕ ನೇಣುಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು, ಮಗನ ಸಾವಿನ ವಿಷಯ ತಿಳಿದು ತಂದೆಯೂ ಹೃದಯಾಘಾತದಿಂದ ಮೃತಪಟ್ಟಿರುವ ಘಟನೆ ನಡೆದಿದೆ.
ಯಾದಗಿರಿ ಜಿಲ್ಲೆ ವಡಗೇರಾ ತಾಲೂಕಿನ ಕೋನಹಳ್ಳಿ ಗ್ರಾಮದ ಮಾರ್ಗದಲ್ಲಿ ಮಹೆಬೂಬ್ (21) ಮರಕ್ಕೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು. ವಿಷಯ ಕೇಳಿ ತಂದೆ ಸೈಯದ್ ಮೀರಸಾಬ್ ಮುಲ್ಲಾ (50) ಅವರಿಗೆ ಹೃದಯಾಘಾತವಾಗಿದೆ.
ಚಿಕಿತ್ಸೆಗಾಗಿ ಕಲಬುರಗಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾರೆ.ಜಮೀನಿಗೆ ತೆರಳುವ ರಸ್ತೆ ಕುರಿತು ಪರಿಶಿಷ್ಟ ಜಾತಿ ಕುಟುಂಬದೊಂದಿಗೆ ಜಗಳವಾಗಿತ್ತು. ಜಾತಿ ನಿಂದನೆ ಪ್ರಕರಣ ಕುರಿತು ಕುಟುಂಬದವರು ಬೆದರಿಕೆ ಹಾಕುತ್ತಿದ್ದರು ಎಂದು ಮೂಲಗಳು ತಿಳಿಸಿವೆ.
ಈ ಸಂಬಂಧ 8 ಜನರ ವಿರುದ್ಧ ಪ್ರಕರಣ ದಾಖಲಿಸಿದ್ದು, ಈಶಪ್ಪ ನಾಯ್ಕಲ್ ಎಂಬುವರನ್ನು ಬಂಧಿಸಲಾಗಿದೆ ಎಂದು ವಡಗೇರಾ ಠಾಣೆ ತಿಳಿದು ಬಂದಿದೆ.





