ಹುಣಸಗಿ ತಾಲೂಕಿನ ಮಂಜಲಾಪುರಹಳ್ಳಿಯ ಯುವಕ ದೇವಪ್ಪ ಅಬ್ಲಿ ಭಾರತೀಯ ಸೇನೆಗೆ ಆಯ್ಕೆಯಾಗಿದ್ದು, ಗ್ರಾಮದಲ್ಲಿ ಹೆಮ್ಮೆ ಮತ್ತು ಸಂತಸದ ವಾತಾವರಣ ಮೂಡಿಸಿದೆ. ಬಡತನದ ನಡುವೆಯೂ ಗುರಿ ತಲುಪಿ ಸಾಧನೆ ಮಾಡಿರುವ ದೇವಪ್ಪ ಸ್ಥಳೀಯ ಯುವಕರಿಗೆ ಪ್ರೇರಣಾದಾಯಕ ಮಾದರಿಯಾಗಿದ್ದಾರೆ.
ಅಗ್ನಿವೀರ 6ನೇ ಬ್ಯಾಚ್‌ನ ದೇವಪ್ಪ ಅಬ್ಲಿ, ಲಖ್ನೋವಿನ ಎಎಮ್‌ಸಿ ಸೆಂಟರ್ ಅಂಡ್ ಕಾಲೇಜಿನಲ್ಲಿ ಏಳು ತಿಂಗಳ ತರಬೇತಿಯನ್ನು ಪೂರ್ಣಗೊಳಿಸಿ ಗುರುವಾರ ಸ್ವಗ್ರಾಮಕ್ಕೆ ಆಗಮಿಸಿದ ಹಿನ್ನೆಲೆ ಗ್ರಾಮಸ್ಥರು ಹಾಗೂ ಹುಣಸಗಿ ಪಟ್ಟಣದ ಜನತೆ ಅದ್ದೂರಿಯಾಗಿ ಮೆರವಣಿಗೆ ಆಯೋಜಿಸಿದ್ದರು.
ಹುಣಸಗಿ ಪಟ್ಟಣದ ಮಹಾಂತಸ್ವಾಮಿ ವೃತ್ತದಿಂದ ಬಸವೇಶ್ವರ ವೃತ್ತದವರೆಗೆ ಬೈಕ್ ಮೆರವಣಿಗೆ ಮತ್ತು ತೆರೆದ ವಾಹನದಲ್ಲಿ ಮೆರವಣಿಗೆ ನಡೆಯಿತು. ಯುವ ಯೋಧನಿಗೆ ಜಯಘೋಷ ಹಾಗೂ ಹರ್ಷೋದ್ಗಾರದ ನಡುವೆ ಭವ್ಯ ಸ್ವಾಗತ ಮಾಡಿದರು.
ಸನ್ಮಾನ ಸ್ವೀಕರಿಸಿದ ದೇವಪ್ಪ ಅಬ್ಲಿ ಅವರು ಹೆತ್ತವರಿಗೆ ಪರೇಡ್ ಡ್ರಿಲ್ ಮೂಲಕ ಸೆಲ್ಯೂಟ್ ನೀಡಿ, ಟೋಪಿ ಮುಡಿಗೇರಿಸುವ ಮೂಲಕ ಕೃತಜ್ಞತೆ ವ್ಯಕ್ತಪಡಿಸಿದರು. ಗ್ರಾಮದಲ್ಲಿ ನಡೆದ ಈ ಅದ್ದೂರಿ ಮೆರವಣಿಗೆ ಸ್ಥಳೀಯ ಯುವಕರಲ್ಲಿ ಸೇನೆಗೆ ಸೇರುವ ಆಸಕ್ತಿ ಇನ್ನಷ್ಟು ಹೆಚ್ಚಿಸಿತು.
ಈ ಸಂದರ್ಭದಲ್ಲಿ ಪಟ್ಟಣ ಪಂಚಾಯಿತಿ ಸದಸ್ಯರಾದ ಮಲ್ಲಣ್ಣ ಬಿರಾದಾರ, ಹಣಮೇಶ ತೋಳದಿನ್ನಿ, ಅರುಣ್ ದೊರೆ ಹುಣಸಗಿ, ಸುನಿಲ್ ಸೇರಿದಂತೆ ಹಲವರು ದೇವಪ್ಪ ಅಬ್ಲಿಗೆ ಶುಭಹಾರೈಕೆ ತಿಳಿಸಿ ಸನ್ಮಾನಿಸಿದರು. ಬಳಿಕ ಮಂಜಲಾಪುರ ಹಳ್ಳಿಯ ಪ್ರಮುಖ ಬೀದಿಗಳಲ್ಲೂ ಮೆರವಣಿಗೆ ಮುಂದುವರಿಯಿತು.
ಇದನ್ನು ಓದಿದ್ದೀರಾ? ‘ಲೀಪ್’ ಯೋಜನೆಯಡಿ ಕಲಬುರಗಿಯಲ್ಲಿ ಐಟಿ ಬಿಟಿ ವಲಯ ವಿಸ್ತಾರ: ಸಚಿವ ಪ್ರಿಯಾಂಕ್ ಖರ್ಗೆ
ಗ್ರಾಮದ ಪ್ರಮುಖರಾದ ಪ್ರಧಾನೇಪ್ಪ ಮೇಟಿ, ಮಲ್ಲಪ್ಪ ಮೇಟಿ, ಚಂದಪ್ಪ ಬೈಚಬಾಳ, ವೆಂಕಟೇಶ್ ಬಿರಾದಾರ, ಮಲ್ಲಪ್ಪ ಸಾಲವಾಡಗಿ ಮತ್ತಿತರರು ಯುವ ಸೈನಿಕನನ್ನು ಅಭಿನಂದಿಸಿದರು. ಗೆಳೆಯರ ಬಳಗ ಪಟಾಕಿ ಸಿಡಿಸಿ ಸಂಭ್ರಮಾಚರಣೆ ನಡೆಸಿತು.





