ಗ್ರಾಮದ ಹನುಮಾನ ದೇವಸ್ಥಾನದ ಬಳಿಯ ಕಟ್ಟೆಯ ಮೇಲೆ ಕುಳಿತಿದ್ದಕ್ಕೆ ಆಕ್ಷೇಪಿಸಿ, ದಲಿತ ಯುವಕನ ಮೇಲೆ ಪ್ರಬಲ ಜಾತಿಯ ಗುಂಪೊಂದು ಹಲ್ಲೆ ನಡೆಸಿರುವ ಅಮಾನವೀಯ ಘಟನೆ ಯಾದಗಿರಿ ಜಿಲ್ಲೆಯಲ್ಲಿ ನಡೆದಿದೆ.
ಜಿಲ್ಲೆಯ ಗುರುಮಠಕಲ್ ತಾಲೂಕಿನ ಯಂಪಾಡ ಗ್ರಾಮದಲ್ಲಿ ಘಟನೆ ನಡೆದಿದ್ದು, ಈಗ ಗ್ರಾಮದಲ್ಲಿ ಬಿಗುವಿನ ವಾತಾವರಣ ಸೃಷ್ಟಿಯಾಗಿದೆ.
ಎಂ.ಟಿ.ಪಳ್ಳಿ ಗ್ರಾಮದ ಪೋಷಪ್ಪ ಮತ್ತು ಅನಂತಮ್ಮ ದಂಪತಿಗಳು ತಮ್ಮ ಪುತ್ರ ಮಹಾಂತೇಶನ ‘ಕೂದಲು ತೆಗೆಯುವ ಶಾಸ್ತ್ರ’ಕ್ಕಾಗಿ ಯಂಪಾಡ ಗ್ರಾಮದ ಹನುಮಾನ ದೇವಸ್ಥಾನಕ್ಕೆ ಬಂದಿದ್ದರು. ಈ ಕಾರ್ಯಕ್ರಮಕ್ಕೆ ಬಂದಿದ್ದ ಗಾಜರಕೋಟ ಗ್ರಾಮದ ಅನಿಲ್‌ಕುಮಾರ ಬೇನಳ್ಳಿ ಅವರು ದೇವಸ್ಥಾನದ ಮುಂದಿನ ಕಟ್ಟೆಯ ಮೇಲೆ ಕುಳಿತಿದ್ದರು. ಅವರು ಅಲ್ಲಿ ಕುಳಿತುಕೊಳ್ಳದಂತೆ ಯಂಪಾಡ ಗ್ರಾಮದ ಪ್ರಬಲ ಜಾತಿಯವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ ಎಂದು ವರದಿಯಾಗಿದೆ.
ಈ ವೇಳೆ, ‘ಜಾತಿ ಹೆಸರಿನಲ್ಲಿ ಭೇದಭಾವ ಮಾಡಬಾರದು’ ಎಂದು ಅನಿಲ್‌ಕುಮಾರ ಪ್ರತಿರೋಧ ವ್ಯಕ್ತಪಡಿಸಿದ್ದಾರೆ. ಇದರಿಂದ, ಕುಪಿತಗೊಂಡ ಗುಂಪು ಏಕಾಏಕಿ ಅನಿಲ್ ಮೇಲೆ ದಾಳಿ ನಡೆಸಿದೆ ಎಂದು ತಿಳಿದುಬಂದಿದೆ.
ದೇವಸ್ಥಾನದ ಆವರಣದಲ್ಲಿದ್ದ ಬಡಿಗೆ ಮತ್ತು ಪ್ಲಾಸ್ಟಿಕ್ ಪೈಪ್‌ಗಳಿಂದ ಅನಿಲ್ ಮೇಲೆ ಹಲ್ಲೆ ನಡೆಸಿರುವ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ಸಾರ್ವಜನಿಕ ವಲಯದಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.
ಈ ಲೇಖನ ಓದಿದ್ದೀರಾ?: ಇರಾನ್-ಕತಾರ್ ಅನಿಲ ಘಟಕಗಳಿಗೆ ಹತ್ತಿದ ಕಿಚ್ಚು: ಭಾರತಕ್ಕೂ ತಟ್ಟಲಿದೆಯಾ ಬಿಸಿ?
ಹಲ್ಲೆಯಿಂದಾಗಿ ಅನಿಲ್ ಅವರ ತಲೆಗೆ ಗಂಭೀರ ಗಾಯಗಳಾಗಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಆರೋಪಿಗಳು ಪರಾರಿಯಾಗಿದ್ದಾರೆ. ಅನಿಲ್ ಅವರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಅವರ ದೂರಿನ ಆಧಾರದ ಮೇಲೆ ಯಂಪಾಡ ಗ್ರಾಮದ ಲಕ್ಷ್ಮಣ ಕಾಳಪ್ಪ, ಅನಂತಪ್ಪ ಹಣಮಂತ ಹಾಗೂ ರಮೇಶ ಸಾಬಣ್ಣ ಸೇರಿದಂತೆ ಹಲವರ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ.
“ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಲಾಗಿದೆ. ತನಿಖೆ ನಡೆಯುತ್ತಿದೆ. ಗ್ರಾಮದಲ್ಲಿ ಶಾಂತಿ ಕಾಪಾಡಲು ಅಧಿಕಾರಿಗಳು ಪ್ರಯತ್ನಿಸಿದ್ದು, ಪರಿಸ್ಥಿತಿ ನಿಯಂತ್ರಣಕ್ಕೆ ಬಂದಿದೆ. ಶೀಘ್ರವೇ ಆರೋಪಿಗಳನ್ನು ಬಂಧಿಸಲಾಗುತ್ತದೆ” ಎಂದು ಯಾದಗಿರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (SP) ಪೃಥ್ವಿಕ್ ಶಂಕರ್ ತಿಳಿಸಿದ್ದಾರೆ.




