ಕಲ್ಯಾಣ ಕರ್ನಾಟಕ ಭಾಗದ ಅಭಿವೃದ್ಧಿಗಾಗಿ ಮೀಸಲಿರುವ ಕೆಕೆಆರ್‌ಡಿಬಿ ಹಣಯನ್ನು ಸರ್ಕಾರಿ ಶಾಲೆಗಳನ್ನು ಮುಚ್ಚುವ ಕಾರ್ಯಕ್ಕೆ ಬಳಸಲಾಗುತ್ತಿದೆ ಎಂದು ಎಐಡಿಎಸ್‌ಓ ಜಿಲ್ಲಾ ಸಂಚಾಲಕಿ ಶಿಲ್ಪಾ ಬಿ.ಕೆ ಆರೋಪಿಸಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ‘ರಾಜ್ಯ ಸರ್ಕಾರ ಗ್ರಾಮ ಪಂಚಾಯಿತಿಗೆ ಒಂದು ಕೆಪಿಎಸ್ ಶಾಲೆ ನಿರ್ಮಿಸಿ ಅದರ ಸುತ್ತಲಿನ 3 ರಿಂದ 5 ಕಿ.ಮೀ ವ್ಯಾಪ್ತಿಯಲ್ಲಿರುವ ಸರ್ಕಾರಿ ಶಾಲೆಗಳನ್ನು ಮುಚ್ಚುವ ಉದ್ದೇಶ ಹೊಂದಿದೆ ಎಂದು ತಿಳಿಸಿದ್ದಾರೆ. ಇದರ ಪರಿಣಾಮವಾಗಿ ಸಾವಿರಾರು ಸರ್ಕಾರಿ ಶಾಲೆಗಳು ಮುಚ್ಚುವ ಸಾಧ್ಯತೆ ಎದುರಾಗಲಿದೆ’ ಎಂದು ಅವರು ಆತಂಕ ವ್ಯಕ್ತಪಡಿಸಿದ್ದಾರೆ.
‘ಕಲ್ಯಾಣ ಕರ್ನಾಟಕ ಭಾಗದಲ್ಲಿ ಅನೇಕ ಸರ್ಕಾರಿ ಶಾಲೆಗಳು ಮೂಲಭೂತ ಸೌಕರ್ಯಗಳ ಕೊರತೆಯಿಂದ ಸಂಕಷ್ಟ ಅನುಭವಿಸುತ್ತಿವೆ. ಹಲವೆಡೆ ಕಟ್ಟಡಗಳ ಕೊರತೆ, ಶುದ್ಧ ಕುಡಿಯುವ ನೀರು, ವಿದ್ಯುತ್ ಹಾಗೂ ಶೌಚಾಲಯಗಳ ಸೌಲಭ್ಯಗಳಿಲ್ಲದೆ ಶಾಲೆಗಳು ನಲುಗುತ್ತಿವೆ. ರಾಜ್ಯದಲ್ಲಿ ಸುಮಾರು 59 ಸಾವಿರಕ್ಕೂ ಹೆಚ್ಚು ಶಿಕ್ಷಕರ ಹುದ್ದೆಗಳು ಖಾಲಿ ಇರುವುದರಿಂದ ಶಿಕ್ಷಣ ವ್ಯವಸ್ಥೆ ಮತ್ತಷ್ಟು ದುರ್ಬಲವಾಗುತ್ತಿದೆ’ ಎಂದು ಅವರು ತಿಳಿಸಿದ್ದಾರೆ.
‘ಈ ಹಿನ್ನೆಲೆ ಸಾರ್ವಜನಿಕ ಶಿಕ್ಷಣ ಉಳಿಸಿ ಹಾಗೂ ನಮ್ಮೂರ ಸರ್ಕಾರಿ ಶಾಲೆಗಳನ್ನು ಉಳಿಸುವ ಹೋರಾಟದ ಭಾಗವಾಗಿ ಇದೇ ಮಾರ್ಚ್ 14ರಂದು ಕಲ್ಯಾಣ ಕರ್ನಾಟಕ ವಲಯ ಮಟ್ಟದ “ನಮ್ಮೂರ ಶಾಲೆ ಉಳಿಸಿ” ಸಮಾವೇಶವನ್ನು ಹಮ್ಮಿಕೊಳ್ಳಲಾಗಿದೆ’ ಎಂದು ಮಾಹಿತಿ ನೀಡಿದ್ದಾರೆ.
‘ಈ ಸಮಾವೇಶದಲ್ಲಿ ಶಿಕ್ಷಣ ತಜ್ಞರು, ಸಾಮಾಜಿಕ ಹೋರಾಟಗಾರರು, ಜನಪರ ಸಂಘಟನೆಗಳ ಮುಖಂಡರು ಹಾಗೂ ಕಲ್ಯಾಣ ಕರ್ನಾಟಕದ ವಿವಿಧ ಜಿಲ್ಲೆಗಳ ಪೋಷಕರು ಮತ್ತು ವಿದ್ಯಾರ್ಥಿಗಳು ಭಾಗವಹಿಸಲಿದ್ದಾರೆ’ ಎಂದು ತಿಳಿಸಿದರು.
ಇದನ್ನು ಓದಿದ್ದೀರಾ? ಕಲಬುರಗಿ | ವಿದ್ಯಾರ್ಥಿಗಳಿಗೆ ದಂತ ಆರೋಗ್ಯ ತಪಾಸಣೆ: ಸ್ವಚ್ಛತೆ ಕುರಿತು ಜಾಗೃತಿ ಶಿಬಿರ
ಸಾರ್ವಜನಿಕ ಶಿಕ್ಷಣವನ್ನು ಉಳಿಸುವ ಈ ಹೋರಾಟವನ್ನು ಯಶಸ್ವಿಗೊಳಿಸಲು ಶಿಕ್ಷಣಪ್ರೇಮಿ ಜನತೆ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಎಐಡಿಎಸ್‌ಒ ಕರೆ ನೀಡಿದೆ.





