ಲಿಂಗಾಯತರು ಬಸವಾದಿ ಶರಣರ ತತ್ವ ವಿಚಾರಧಾರೆ ಮರೆತು ವೈದಿಕತ್ವಕ್ಕೆ ಅಂಟಿಕೊಳ್ಳುತ್ತಿರುವುದು ವಿಷಾದದ ಸಂಗತಿ. ಯಾವ ಕಾಲ ಶ್ರೇಷ್ಠವೂ ಅಲ್ಲ, ಕನಿಷ್ಠವೂ ಅಲ್ಲ. ಎಲ್ಲವೂ ಇಷ್ಟಲಿಂಗದಲ್ಲಿಯೇ ಅಡಗಿವೆ. ವೈದಿಕ ಪ್ರಲೋಭನೆಗೆ ಒಳಗಾದ ಲಿಂಗಾಯತರು ದಾರಿ ತಪ್ಪುತ್ತಿದ್ದಾರೆ ಎಂದು ಫಕೀರೇಶ್ವರ ಮಠದ ಗುರುಪಾದ ಸ್ವಾಮೀಜಿ ಕಳವಳ ವ್ಯಕ್ತಪಡಿಸಿದರು.
ಶಹಾಪುರ ನಗರದ ಬಸವ ಮಾರ್ಗ ಪ್ರತಿಷ್ಠಾನ ಸತ್ಯಂಪೇಟೆ ಶಿವನ್ ಕಾರ್ತೀಕ ನಿಲಯದ ಗುರು ಪ್ರವೇಶದ ಪ್ರಯುಕ್ತ ಹಮ್ಮಿಕೊಂಡ ʼಮನೆಯಲ್ಲಿ-ಮಹಾಮನೆʼ ಕಾರ್ಯಕ್ರಮದಲ್ಲಿ ಸಾನಿಧ್ಯ ವಹಿಸಿ ಅವರು ಮಾತನಾಡಿದರು.
ಮದ್ಯಪಾನ ಸಂಯಮ ಮಂಡಳಿಯ ಅಧ್ಯಕ್ಷ ಶರಣಪ್ಪ ಸಲಾದಪುರ ಮಾತನಾಡಿ, ʼನೂರಾರು ಮಾತುಗಳನ್ನು ಆಡುವುದಕ್ಕಿಂತ ನಮ್ಮ ಬದುಕು ಹೆಚ್ಚು ಜನರನ್ನು ಪ್ರಭಾವಿಸುತ್ತದೆ. ನಾನು ಚಿಕ್ಕವನಿರುವಾಗ ಗ್ರಹಿಸಿದ ಸಂಗತಿಗಳು, ಮಾರ್ಗದರ್ಶನ ನೀಡಿದ ಮಹನೀಯರ ವಿಚಾರಗಳು ಇಂದಿಗೂ ನನ್ನನ್ನು ಕೈ ಹಿಡಿದು ನಡೆಸುತ್ತಿವೆ. ಶರಣರ ಸಮಗ್ರ ಚಿಂತನೆಗಳನ್ನು ಇಂದಿನ ಸಮಾಜ ಅಳವಡಿಸಿಕೊಳ್ಳಬೇಕಾಗಿದೆʼ ಎಂದರು.
ಕರ್ನಾಟಕ ಪ್ರಾಂತ ರೈತ ಸಂಘದ ಚೆನ್ನಪ್ಪ ಆನೇಗುಂದಿ ಮಾತನಾಡಿ, ʼಬಸವಾದಿ ಶರಣರು ರೈತಾಪಿ ದುಡಿಯುವ ವರ್ಗದ ಬಗೆಗೆ ಅಪಾರವಾದ ಪ್ರೀತಿ ಗೌರವಗಳನ್ನು ಇಟ್ಟುಕೊಂಡಿದ್ದರು. ಇಂದು ರೈತರ ಎಲ್ಲರಿಂದಲೂ ಶೋಷಣೆಗೆ ಗುರಿಯಾಗುವ ಸ್ಥಿತಿ ನಿರ್ಮಾಣಗೊಂಡಿದೆ. ಸಣ್ಣ ಪುಟ್ಟ ಸಾಲ ಮಾಡಿದ ರೈತ ಮರ್ಯಾದೆ ಭಯದಿಂದ ಆತ್ಮಹತ್ಯೆ ದಾರಿ ಹಿಡಿಯುತ್ತಿದ್ದಾನೆ. ರೈತ ಬೆಳೆಗೆ ಸೂಕ್ತ ಬೆಲೆ ದೊರೆತರೆ ರೈತರ ಆತ್ಮಹತ್ಯೆ ಪ್ರಕರಣ ತಗ್ಗಿಸಬಹುದು. ಸರಕಾರ ಈ ಬಗ್ಗೆ ಗಂಭೀರವಾಗಿ ಆಲೋಚಿಸಬೇಕುʼ ಎಂದರು.
ಬಸವಮಾರ್ಗ ಪ್ರತಿಷ್ಠಾನದ ಅಧ್ಯಕ್ಷ ವಿಶ್ವಾರಾಧ್ಯ ಸತ್ಯಂಪೇಟೆ ಮಾತನಾಡಿ, ʼಮನೆ ಕಟ್ಟುವುದು ದೊಡ್ಡದಲ್ಲ. ಆ ಮನೆಯಲ್ಲಿ ಬಹು ದೊಡ್ಡ ಮನಸ್ಸು ಇರಬೇಕಾದುದು ಮುಖ್ಯ. ಮನೆ ಮಹಾಮನೆ ಆಗಬೇಕಾದರೆ ಅಲ್ಲಿ ವಾಸಿಸುವವರು ʼಇವನಾರವ ಇವನಾರವʼ ಎಂದು ದೂರಿಕರಿಸದೆ, ಎಲ್ಲರನ್ನು ಅಪ್ಪಿಕೊಳ್ಳುವ ಭಾವ ಬೆಳೆಸಿಕೊಳ್ಳಬೇಕು. ಮೌಢ್ಯಗಳಿಗೆ ಒಳಗಾಗಿ ಯಜ್ಞಯಾಗ ಮಾಡುವುದಕ್ಕೆ ಜನ ಸಾಮಾನ್ಯ ಬಲಿಯಾಗಬಾರದು. ಸಹಜ ಮತ್ತು ಸರಳ ನಡೆ-ನುಡಿಗಳಲ್ಲಿ ದೇವರಿದ್ದಾನೆ. ದೇವರನ್ನು ಒಲಿಸಿಕೊಳ್ಳಲಿಕ್ಕೆ ನಿರ್ಮಲ ಮನಸ್ಸೊಂದೆ ಸಾಕುʼ ಎಂದು ನುಡಿದರು.
ಸಾಹಿತಿ ಶಿವಣ್ಣ ಇಜೇರಿ ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಕರ್ನಾಟಕ ಸಾಹಿತ್ಯ ಅಕಾಡೆಮಿ ಸದಸ್ಯ ಡಾ.ಸಿದ್ಧರಾಮ ಹೊನ್ಕಲ್ ಅಧ್ಯಕ್ಷತೆ ವಹಿಸಿದ್ದರು.
ಇದನ್ನೂ ಓದಿ : ಕೊಪ್ಪಳ | ಸರಾಯಿ ಕುಡಿದು ಇಬ್ಬರು ಯುವಕರು ಸಾವು
ಕಾರ್ಯಕ್ರಮದಲ್ಲಿ ಶರಣ ಸಾಹಿತಿ ಶಿವಣ್ಣ ಇಜೇರಿ ಸೇರಿದಂತೆ ಪ್ರಮುಖರಾದ ಶಿವಶಂಕರ ಔರಸಂಗ, ಗುಂಡಪ್ಪ ತುಂಬಗಿ, ವಿರೂಪಾಕ್ಷಿ ಹೇರುಂಡಿ, ಖಾಜಾ ಪಟೇಲ, ಕರೀಂ ಪಟೇಲ, ಡಾ.ಪ್ರಭುರಾಜ ಮಡ್ಡಿ, ನಾಡಗೌಡ,ಗುರುಬಸಯ್ಯ ಗದ್ದುಗೆ, ಸೋಮಶೇಖರ ಹಿರೇಮಠ, ಸೂಗಣ್ಣ ದೇವದುರ್ಗ, ಬಸವರಾಜ ಶಿಣ್ಣೂರ, ಅಕ್ಬರ್ ಹೊಟಗಿ, ಮಹೇಶ್ ಬಾಬು ಸುರ್ವೆ, ರವೀಂದ್ರನಾಥ ಹೊಸ್ಮನಿ,ಸಿದ್ದಲಿಂಗಣ್ಣ ಆನೇಗುಂದಿ,ರವಿ ರಾಂಪೂರ, ವಿಶ್ವನಾಥ ಕುಂಬಾರ, ಸಿದ್ದಲಿಂಗಪ್ಪ ಕೆರವಟಿಗಿ, ಉಮೇಶ ಗುಡಗುಂಟಿ, ಬಸವರಾಜ ಮ್ಯಾಗಿನಮನಿ, ತಿಪ್ಪಣ್ಣ ಜಮಾದಾರ ಕಳ್ಳಿ, ಕಂಠೆಪ್ಪ ಮ್ಯಾಗಿನಮನಿ, ಬಸವರಾಜ ಆನೇಗುಂದಿ, ಸಂಗಮೇಶ ತುಂಬಿಗಿ, ಪಂಪಣ್ಣಗೌಡ ಮಳಗ, ಭೀಮಣ್ಣ ಚನ್ನೂರ ಮೊದಲಾದವರು ಉಪಸ್ಥಿತರಿದ್ದರು. ಶರಣು ಯಡ್ರಾಮಿ ನಿರೂಪಿಸಿದರು. ಮಡಿವಾಳಮ್ಮ ಇಜೇರಿ ವಂದಿಸಿದರು.





