ಯಾದಗಿರಿ ರೈತರಿಗೆ ಆರ್ಥಿಕ ಭದ್ರತೆ ಇಲ್ಲದ ಕಾರಣ ಅವರನ್ನು ಮದುವೆಯಾಗಲು ವಧುಗಳು ಮುಂದೆ ಬರುತ್ತಿಲ್ಲ. ಇದರಿಂದ ರೈತರ ಜೀವನ ಸಂಕಷ್ಟಕ್ಕೀಡಾಗಿ ಅವರ ವಂಶಾವಳಿ ಕಡಿಮೆಯಾಗುತ್ತಿರುವ ಆತಂಕ ಎದುರಾಗಿದೆ. ಆದ್ದರಿಂದ ರೈತನನ್ನು ಮದುವೆಯಾಗಲು ಮುಂದೆಬರುವ ವಧುವಿನ ಹೆಸರಿನಲ್ಲಿ ಸರ್ಕಾರ ₹10 ಲಕ್ಷ ಠೇವಣಿ ಇಡುವ ವಿಶೇಷ ಯೋಜನೆಯನ್ನು ಈ ಬಜೆಟ್‌ನಲ್ಲಿ ಘೋಷಿಸಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯ ಸಮಿತಿ ಉಪಾಧ್ಯಕ್ಷ ಮಲ್ಲಿಕಾರ್ಜುನ ಸತ್ಯಂಪೇಟೆ ಒತ್ತಾಯಿಸಿದರು.
ಈದಿನ.ಕಾಮ್‌ನೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ರೈತರ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಒದಗಿಸಲು ಸರ್ಕಾರ ಕ್ರಮ ಕೈಗೊಳ್ಳಬೇಕು. ಸರ್ಕಾರಿ ಭತ್ತ ಮತ್ತು ಹತ್ತಿ ಮಿಲ್‌ಗಳನ್ನು ಸ್ಥಾಪಿಸಬೇಕು. ಮೆಣಸಿನಕಾಯಿ ಸಂಗ್ರಹಿಸಲು ಶೀತಲೀಕರಣ ಘಟಕಗಳನ್ನು ಆರಂಭಿಸಬೇಕು ಎಂದು ಹೇಳಿದರು.
ಬೂದಿಹಾಳ-ಪೀರಾಪುರ ಏತ ನೀರಾವರಿ ಯೋಜನೆಯನ್ನು ಶೀಘ್ರದಲ್ಲಿ ಪೂರ್ಣಗೊಳಿಸಬೇಕು. ಅಲಮಟ್ಟಿ ಜಲಾಶಯದ ಮಟ್ಟವನ್ನು ಎತ್ತರಿಸಿ ಕಾಲುವೆಗಳ ಕೊನೆಯ ಭಾಗಕ್ಕೂ ನೀರು ತಲುಪುವಂತೆ ಕ್ರಮ ಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದರು.

ರೈತ ಮುಖಂಡ ಚನ್ನಾಪ್ಪ ಆನೇಗುಂದಿ ಮಾತನಾಡಿ, “ಆಲಮಟ್ಟಿ ಅಣೆಕಟ್ಟಿನ ಎತ್ತರವನ್ನು ಹೆಚ್ಚಿಸಿ ಗೇಟ್‌ಗಳನ್ನು ಅಳವಡಿಸಿದರೆ ಸುಮಾರು 20 ಲಕ್ಷ ಎಕರೆ ಪ್ರದೇಶಕ್ಕೆ ನೀರಾವರಿ ಸೌಲಭ್ಯ ಒದಗಲಿದೆ. ಇದರಿಂದ ವಿಜಯಪುರ, ಕಲಬುರಗಿ, ರಾಯಚೂರು ಮತ್ತು ಯಾದಗಿರಿ ಜಿಲ್ಲೆಗಳ ಸುರಪುರ, ಶಹಾಪುರ, ಜೇವರ್ಗಿ, ದೇವದುರ್ಗ, ಲಿಂಗಸೂಗೂರು, ಇಂಡಿ, ಸಿಂದಗಿ ಮತ್ತು ಮುದ್ದೇಬಿಹಾಳ ತಾಲೂಕುಗಳಿಗೆ ನೀರಾವರಿ ಲಭ್ಯವಾಗಲಿದೆ ಎಂದು ಹೇಳಿದರು. ಅಲ್ಲದೆ ಕೊಪ್ಪಳ ಮತ್ತು ಬಾಗಲಕೋಟೆ ಜಿಲ್ಲೆಗಳಿಗೂ ಈ ಯೋಜನೆಯಿಂದ ಪ್ರಯೋಜನವಾಗುತ್ತದೆ ಎಂದು ತಿಳಿಸಿದರು.
ಕೃಷಿಗೆ ಅಗತ್ಯವಿರುವ ಬೀಜ ಮತ್ತು ರಸಗೊಬ್ಬರವನ್ನು ಸರಿಯಾದ ಸಮಯಕ್ಕೆ ಒದಗಿಸಬೇಕು. ಇಲ್ಲದಿದ್ದರೆ ಕೆಲವು ವ್ಯಾಪಾರಿಗಳು ಕೃತಕವಾಗಿ ಬೀಜ ಮತ್ತು ರಸಗೊಬ್ಬರ ತಯಾರಿಸಿ ನಾಲ್ಕು ಪಟ್ಟು ಹೆಚ್ಚಿನ ಬೆಲೆಗೆ ಮಾರಾಟ ಮಾಡಿ ರೈತರನ್ನು ಶೋಷಿಸುತ್ತಾರೆ. ಇಂತಹವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಸಮಯಕ್ಕೆ ಸರಿಯಾಗಿ ಸಬ್ಸಿಡಿ ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿದರು.
ರೈತರು ಬೆಳೆದ ಬೆಳೆಗಳಿಗೆ ಸರಿಯಾದ ಬೆಲೆ ಸಿಗದೆ ಸಾಲಗಾರರಾಗುತ್ತಿದ್ದಾರೆ. ಹಾಗಾಗಿ ಕನಿಷ್ಠ ಬೆಂಬಲ ಬೆಲೆ (ಎಂಎಸ್‌ಪಿ) ಜಾರಿಗೆ ತಂದು, ಎಂಎಸ್‌ಪಿಯಲ್ಲಿ ಬೆಳೆ ಖರೀದಿಸಲು ಕನಿಷ್ಠ ₹1000 ಕೋಟಿ ನಿಧಿ ಮೀಸಲಿಡಬೇಕು. ಕೇರಳ ಮಾದರಿಯಂತೆ ಸರ್ಕಾರವೇ ರೈತರಿಂದ ಬೆಳೆಗಳನ್ನು ಸಂಪೂರ್ಣ ಖರೀದಿಸಬೇಕು ಎಂದು ಒತ್ತಾಯಿಸಿದರು.

ಯಾದಗಿರಿ ಜಿಲ್ಲೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಭತ್ತ ಮತ್ತು ಹತ್ತಿ ಬೆಳೆಗಾರರಿದ್ದರೂ ಹತ್ತಿ ಖರೀದಿ ನಿಂತಿರುವುದರಿಂದ ಬೆಲೆ ಕುಸಿತವಾಗಿದೆ. ಹತ್ತಿಯನ್ನು ಖರೀದಿಸಲು ಕಾಟನ್ ಕಾರ್ಪೊರೇಷನ್ ಆಫ್ ಇಂಡಿಯಾ (ಸಿಸಿಐ) ಮೂಲಕ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು.
ರೈತರ ಸಾಲ ಸಮಸ್ಯೆಗೆ ಪರಿಹಾರವಾಗಿ ರುಣಮುಕ್ತ ಕಾಯ್ದೆ ಜಾರಿಗೆ ತಂದು ಸಾಲಮನ್ನಾ ಮಾಡಬೇಕು. ಯಾದಗಿರಿ ಜಿಲ್ಲೆಯ ಸುರಪುರ, ಶಹಾಪೂರ, ಯಾದಗಿರಿ, ಹುಣಸಗಿ ಹಾಗೂ ವಡಗೇರಾ ತಾಲೂಕುಗಳಲ್ಲಿ ಬೆಳೆದ ಬೆಳೆಗಳಿಗೆ ಬೆಲೆ ಸಿಗದೆ ರೈತರು ಭೂಮಿಯನ್ನು ಮಾರಿಕೊಳ್ಳುವ ಪರಿಸ್ಥಿತಿ ಎದುರಿಸುತ್ತಿದ್ದಾರೆ ಎಂದು ಆತಂಕ ವ್ಯಕ್ತಪಡಿಸಿದರು.
ಕೇವಲ ಐದು ಗಂಟೆ ಮಾತ್ರ ಕೃಷಿಗೆ ಅಗತ್ಯವಿರುವ ವಿದ್ಯುತ್ ನೀಡುವುದರಿಂದ ಪಂಪ್‌ಸೆಟ್‌ಗಳಿಗೆ ನೀರು ಕಡಿಮೆಯಾಗುತ್ತಿದೆ. ಶೇಂಗಾ, ಜೋಳ, ಭತ್ತ ಹಾಗೂ ತೋಟಗಾರಿಕೆ ಬೆಳೆಗಳು ಒಣಗುತ್ತಿವೆ. ಆದ್ದರಿಂದ ಹಗಲು ವೇಳೆ ಕನಿಷ್ಠ ಏಳು ಗಂಟೆ ನಿರಂತರ ವಿದ್ಯುತ್ ಒದಗಿಸಬೇಕು. ಕೈಗಾರಿಕೆಗಳಿಗೆ ನೀಡುವಂತೆಯೇ ರೈತರಿಗೂ ಆದ್ಯತೆ ನೀಡಿ ಅಗತ್ಯ ವಿದ್ಯುತ್ ನೀಡಬೇಕು ಎಂದು ಮನವಿ ಮಾಡಿದರು.
ಭೂ ಸುಧಾರಣೆ ಕಾಯ್ದೆಯಡಿ ಯಾದಗಿರಿಯಲ್ಲಿ ಸುಮಾರು 3,200 ಎಕರೆ ಭೂಮಿಯನ್ನು ಪಡೆದುಕೊಂಡು ಸಮರ್ಪಕ ಪರಿಹಾರ ನೀಡಿಲ್ಲ. ಅಲ್ಲಿ ಪೈಜನ್ ಉತ್ಪಾದನಾ ಕೈಗಾರಿಕೆ ಆರಂಭಿಸಿದ್ದು ಪರಿಸರ ಹಾನಿಯಾಗುತ್ತಿದೆ. ಅದನ್ನು ತಕ್ಷಣ ನಿಲ್ಲಿಸಬೇಕು ಎಂದು ಆಗ್ರಹಿಸಿದರು. ಜಿಲ್ಲೆಯಲ್ಲಿ ಹತ್ತಿ ಬೆಳೆಯುವ ಪ್ರದೇಶ ಹೆಚ್ಚಿರುವುದರಿಂದ ಇಲ್ಲಿ ಜವಳಿ ಪಾರ್ಕ್ ಸ್ಥಾಪಿಸಬೇಕು ಎಂದು ಒತ್ತಾಯಿಸಿದರು.
ಬಡವರಿಗೆ ಗ್ರಾಮೀಣ ಪ್ರದೇಶಗಳಲ್ಲಿ ಮನೆಗಳು ಸಿಗುತ್ತಿಲ್ಲ. ಅಧಿಕಾರಿಗಳು ಲಂಚ ಕೇಳುತ್ತಿರುವ ಆರೋಪಗಳು ಕೇಳಿಬರುತ್ತಿವೆ. ಸುಮಾರು 1700 ರೇಷನ್ ಕಾರ್ಡ್‌ಗಳನ್ನು ರದ್ದುಪಡಿಸಿದ್ದು ಇನ್ನೂ 3000 ಕಾರ್ಡ್‌ಗಳನ್ನು ಕಡಿತಗೊಳಿಸಲು ಮುಂದಾಗಿದ್ದಾರೆ. ಒಂದೇ ಕುಟುಂಬದಲ್ಲಿ ಸಹೋದರರು ಇದ್ದರೂ 7 ಎಕರೆ ಭೂಮಿ ಇದೆ ಎಂಬ ಕಾರಣ ನೀಡಿ ಕಾರ್ಡ್ ರದ್ದುಪಡಿಸುವುದು ಸರಿಯಲ್ಲ ಎಂದು ಹೇಳಿದರು.
ಕಾರ್ಮಿಕ ಸಂಘಟನೆ ಮುಖಂಡ ಪ್ರದೀಪ್ ಮಾತನಾಡಿ, “ಹೊಸ ನಾಲ್ಕು ಕಾರ್ಮಿಕ ಕಾಯ್ದೆಗಳನ್ನು ರದ್ದು ಮಾಡಿ ಹಳೆಯ ಕಾಯ್ದೆಗಳನ್ನೇ ಮುಂದುವರಿಸಬೇಕು. ಸುಮಾರು 42 ಸಾವಿರ ಕಟ್ಟಡ ಕಾರ್ಮಿಕ ಕಾರ್ಡ್‌ದಾರರಿಗೆ ನಿವೇಶನ ಮತ್ತು ಮನೆಗಳನ್ನು ನೀಡಬೇಕು. ಕಾರ್ಮಿಕರಿಗೆ ಗುಣಮಟ್ಟದ ಕಿಟ್ ವಿತರಿಸಬೇಕು. ಕಾರ್ಡ್ ನವೀಕರಣಕ್ಕೆ ಹಣ ವಸೂಲಿ ಮಾಡುವುದನ್ನು ಸರ್ಕಾರ ನಿಲ್ಲಿಸಬೇಕು. ಕಾರ್ಮಿಕರ ಮಕ್ಕಳಿಗೆ ವಿದ್ಯಾರ್ಥಿವೇತನ ಸರಿಯಾಗಿ ದೊರೆಯುವಂತೆ ಕ್ರಮ ಕೈಗೊಳ್ಳಬೇಕು” ಎಂದು ಒತ್ತಾಯಿಸಿದರು.


ಗ್ರಾಮೀಣ ಕೂಲಿ ಕಾರ್ಮಿಕರ ಸಂಘದ ಮುಖಂಡ ಶರಣಗೌಡ ಮಾತನಾಡಿ, 2025–26ರ ಬಜೆಟ್‌ನಲ್ಲಿ ಕೂಲಿ ಕಾರ್ಮಿಕರ ಅಂಕಿಅಂಶ ಆಧರಿಸಿ ಕನಿಷ್ಠ 100 ದಿನ ಕೆಲಸ ನೀಡಬೇಕು. ಈಗಿನ ₹370 ಕೂಲಿಯನ್ನು ₹400ರಿಂದ ₹450ಕ್ಕೆ ಹೆಚ್ಚಿಸಬೇಕು. ಮನರೇಗಾ ಯೋಜನೆಯನ್ನು ಮಹಾತ್ಮ ಗಾಂಧಿ ಹೆಸರಿನಲ್ಲೇ ಮುಂದುವರಿಸಿ 200 ದಿನ ಕೆಲಸ ನೀಡಬೇಕು ಎಂದು ಹೇಳಿದರು.
ದಸಂಸ ಮುಖಂಡ ಡಾ. ರವೀಂದ್ರನಾಥ ಹೊಸಮನಿ ಮಾತನಾಡಿ, “ಪ್ರತಿ ಹೋಬಳಿ ಮಟ್ಟದಲ್ಲಿ ವಸತಿ ಶಾಲೆಗಳನ್ನು ನಿರ್ಮಿಸಬೇಕು. ಯಾದಗಿರಿ ಜಿಲ್ಲೆಯಲ್ಲಿ ಸುಮಾರು ಶೇ.50 ರಷ್ಟು ಶಿಕ್ಷಕರ ಕೊರತೆ ಇದೆ. ತಕ್ಷಣ ಶಿಕ್ಷಕರ ನೇಮಕಾತಿ ಮಾಡಿದರೆ ಮಾತ್ರ ಗ್ರಾಮೀಣ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಸಿಗುತ್ತದೆ ಎಂದು ತಿಳಿಸಿದರು.
ಇದನ್ನೂ ಓದಿ: ಯಾದಗಿರಿ | ಜೆಸ್ಕಾಂ ಅಧಿಕಾರಿ ಮನೆ ಮನೆ ಲೋಕಾಯುಕ್ತ ದಾಳಿ
ರೈತರು ಮತ್ತು ಕಾರ್ಮಿಕರ ಜೀವನಕ್ಕೆ ಭದ್ರತೆ ಒದಗಿಸುವಂತಹ ಸಮಗ್ರ ಕ್ರಮಗಳನ್ನು ರಾಜ್ಯ ಸರ್ಕಾರ ಬಜೆಟ್‌ನಲ್ಲಿ ಘೋಷಿಸಬೇಕು ಎಂಬುದು ಸಂಘಟನೆಗಳ ಒತ್ತಾಯವಾಗಿದೆ. ನೀರಾವರಿ, ಬೆಳೆಗಳಿಗೆ ನ್ಯಾಯಸಮ್ಮತ ಬೆಲೆ, ವಿದ್ಯುತ್, ಕಾರ್ಮಿಕರ ಕಲ್ಯಾಣ ಹಾಗೂ ಗ್ರಾಮೀಣ ಅಭಿವೃದ್ಧಿ ಸೇರಿದಂತೆ ಹಲವು ಮೂಲಭೂತ ಸಮಸ್ಯೆಗಳ ಪರಿಹಾರಕ್ಕೆ ಸರ್ಕಾರ ತಕ್ಷಣ ಗಮನ ಹರಿಸಿದರೆ ಮಾತ್ರ ರೈತರು ಮತ್ತು ಗ್ರಾಮೀಣ ಕಾರ್ಮಿಕರ ಜೀವನದಲ್ಲಿ ನಿಜವಾದ ಬದಲಾವಣೆ ಸಾಧ್ಯವೆಂದು ಮುಖಂಡರು ಅಭಿಪ್ರಾಯಪಟ್ಟರು.





