ಹುಣಸಗಿ ತಾಲೂಕಿನ ಕಲ್ ದೇವನಹಳ್ಳಿ ಗ್ರಾಮದಲ್ಲಿ ಶನಿವಾರ ಮಧ್ಯಾಹ್ನ ಆಕಸ್ಮಿಕವಾಗಿ ಕಾಣಿಸಿಕೊಂಡ ಬೆಂಕಿಯಿಂದ ರೈತನ ಸಜ್ಜೆ ಬೆಳೆ ಹಾಗೂ ಸ್ಪಿಂಕ್ಲರ್ ಪೈಪುಗಳಿಗೆ ಹಾನಿಯಾಗಿರುವ ಘಟನೆ ನಡೆದಿದೆ.
ಗ್ರಾಮದ ರೈತ ಎಲ್ಲಪ್ಪ ತಂದೆ ಚಂದಪ್ಪ ಛಲವಾದಿ ಅವರಿಗೆ ಸೇರಿದ ಸರ್ವೆ ನಂ. 222 ರಲ್ಲಿರುವ ಸುಮಾರು ನಾಲ್ಕು ಎಕರೆ ಜಮೀನಿನಲ್ಲಿ ಬೆಳೆದಿದ್ದ ಸಜ್ಜೆ ಬೆಳೆಗೆ ಸುತ್ತುವರಿದು ನೀರಾವರಿ ಮಾಡಲು ಅಳವಡಿಸಿದ್ದ ಸ್ಪಿಂಕ್ಲರ್ ಪೈಪುಗಳಿಗೆ ಬೆಂಕಿ ತಗುಲಿದ್ದು, ಸುಮಾರು 10 ರಿಂದ 15 ಪೈಪುಗಳು ಸುಟ್ಟು ಹಾನಿಗೊಳಗಾಗಿವೆ. ಇದರಿಂದ ಸಜ್ಜೆ ಬೆಳೆಯಿಗೂ ಸ್ವಲ್ಪ ಪ್ರಮಾಣದ ನಷ್ಟ ಉಂಟಾಗಿದೆ ಎಂದು ತಿಳಿದು ಬಂದಿದೆ.
ಶನಿವಾರ ಮಧ್ಯಾಹ್ನ ಸುಮಾರು 1 ರಿಂದ 1.30 ಗಂಟೆಯ ನಡುವೆ ಬೆಂಕಿ ಕಾಣಿಸಿಕೊಂಡಿದ್ದು, ಘಟನೆ ಗಮನಿಸಿದ ರೈತರು ಹಾಗೂ ಗ್ರಾಮಸ್ಥರು ತಕ್ಷಣವೇ ಬೆಂಕಿ ನಂದಿಸಲು ಮುಂದಾದರು. ಈ ವೇಳೆ ಮಾನಪ್ಪ ಕಟ್ಟಿಮನಿ ಅವರು ತಾಳಿಕೋಟಿ ಅಗ್ನಿಶಾಮಕ ದಳದ ಅಧಿಕಾರಿಗಳಿಗೆ ದೂರವಾಣಿ ಮೂಲಕ ಮಾಹಿತಿ ನೀಡಿದ್ದಾರೆ.
ಇದನ್ನು ಓದಿದ್ದೀರಾ? ಯಾದಗಿರಿ | ರೈತನ ಹೊಲದಲ್ಲಿ ಆಕಸ್ಮಿಕ ಬೆಂಕಿ: ಸ್ಪಿಂಕ್ಲರ್ ಪೈಪ್‌ಗಳು ಬೆಂಕಿಗಾಹುತಿ
ಮಾಹಿತಿ ಪಡೆದ ಅಗ್ನಿಶಾಮಕ ದಳದ ಸಿಬ್ಬಂದಿ ಅರ್ಧ ಗಂಟೆಯೊಳಗೆ ಸ್ಥಳಕ್ಕೆ ಆಗಮಿಸಿ ಬೆಂಕಿಯನ್ನು ನಿಯಂತ್ರಣಕ್ಕೆ ತೆಗೆದುಕೊಂಡು ಎಂದು ಸ್ಥಳೀಯ ಮೂಲಗಳಿಂದ ತಿಳಿದು ಬಂದಿದೆ.
ಘಟನೆಯಿಂದ ಉಂಟಾದ ನಷ್ಟದ ಪ್ರಮಾಣದ ಕುರಿತು ಸಂಬಂಧಿಸಿದ ಅಧಿಕಾರಿಗಳು ಪರಿಶೀಲನೆ ನಡೆಸಿ ಸೂಕ್ತ ಪರಿಹಾರ ನೀಡಬೇಕು ಎಂದು ಸ್ಥಳೀಯರು ಮನವಿ ಮಾಡಿದ್ದಾರೆ.





