ರಾಜ್ಯ ಸರ್ಕಾರ ಘೋಷಿಸಿರುವ 56,432 ಹುದ್ದೆಗಳ ಭರ್ತಿಗೆ ಸಂಬಂಧಿಸಿದ ಒಳ ಮೀಸಲಾತಿ ಗೊಂದಲವನ್ನು ತಕ್ಷಣ ಪರಿಹರಿಸಿ, ಯಾವುದೇ ವಿಳಂಬವಿಲ್ಲದೆ ಅಧಿಸೂಚನೆ ಹೊರಡಿಸಬೇಕು ಎಂದು ಆಲ್ ಇಂಡಿಯಾ ಡೆಮಾಕ್ರೆಟಿಕ್ ಯೂತ್ ಆರ್ಗನೈಸೇಷನ್ (ಎಐಡಿವೈಒ) ಯಾದಗಿರಿ ಘಟಕ ಆಗ್ರಹಿಸಿದೆ.
ಈ ಸಂಬಂಧ ಮಂಗಳವಾರ ಎಐಡಿವೈಒ ಯಾದಗಿರಿ ಗ್ರೇಡ್-2 ತಹಶೀಲ್ದಾರ್ ರವಿ ಅವರ ಮುಖಾಂತರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಸಿದರು.
ಮನವಿ ಸಲ್ಲಿಸಿ ಸಂಘಟನೆ ಮುಖಂಡರು ಮಾತನಾಡಿ, ‘ರಾಜ್ಯದಲ್ಲಿ 43 ಇಲಾಖೆಗಳಲ್ಲೂ ಒಟ್ಟು 2,84,881 ಹುದ್ದೆಗಳು ಹಾಗೂ ಕೇಂದ್ರದಲ್ಲಿ 9.79 ಲಕ್ಷ ಹುದ್ದೆಗಳು ಖಾಲಿ ಇರುವುದರಿಂದ ಉದ್ಯೋಗಾಕಾಂಕ್ಷಿಗಳಲ್ಲಿ ಆತಂಕ ಹೆಚ್ಚಾಗಿದೆ ಎಂದು ಸಂಘಟನೆ ತಿಳಿಸಿದೆ. ಕಳೆದ ಕೆಲವು ತಿಂಗಳಿಂದ ರಾಜ್ಯಾದ್ಯಂತ ಯುವಕರು ಹೋರಾಟ ನಡೆಸುತ್ತಿದ್ದರೂ, ಬೆಳಗಾವಿ ಅಧಿವೇಶನದಲ್ಲಿ ನೀಡಿದ ಭರವಸೆ ಬಳಿಕವೂ ನೇಮಕಾತಿ ಪ್ರಕ್ರಿಯೆ ಆರಂಭವಾಗದಿರುವುದು ನಿರಾಶೆ ಉಂಟುಮಾಡಿದೆ’ ಎಂದು ಆರೋಪಿಸಿದೆ.
‘ವಯೋಮಿತಿ ಸಡಿಲಿಕೆ ಘೋಷಿಸಿದರೂ ಅದರ ಪ್ರಯೋಜನ ಸಿಗದೆ, ಒಳ ಮೀಸಲಾತಿ ಗೊಂದಲದ ನೆಪದಲ್ಲಿ ನೇಮಕಾತಿ ವಿಳಂಬಗೊಳಿಸಲಾಗುತ್ತಿದೆ ಎಂದು ಸಂಘಟನೆ ಅಭಿಪ್ರಾಯಪಟ್ಟಿದೆ. ಇದರಿಂದ ಸ್ಪರ್ಧಾತ್ಮಕ ಪರೀಕ್ಷೆಗೆ ಸಿದ್ಧತೆ ನಡೆಸುತ್ತಿರುವ ಯುವಕರು ಮಾನಸಿಕ ಒತ್ತಡಕ್ಕೆ ಒಳಗಾಗುತ್ತಿದ್ದಾರೆ’ ಎಂದು ಹೇಳಿದೆ.

‘ಕಲ್ಯಾಣ ಕರ್ನಾಟಕ ಭಾಗದಲ್ಲಿ 22,000ಕ್ಕೂ ಹೆಚ್ಚು ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಕರ ಹುದ್ದೆಗಳು ಖಾಲಿ ಇರುವುದರಿಂದ ಶಿಕ್ಷಣದ ಗುಣಮಟ್ಟ ಕುಸಿಯುತ್ತಿದೆ. ಕೆಪಿಎಸ್ ಮ್ಯಾಗ್ನೆಟ್ ಶಾಲೆಗಳ ನೀತಿಯಡಿ ಹಳ್ಳಿಗಳ ಶಾಲೆಗಳನ್ನು ವಿಲೀನಗೊಳಿಸುವ ಕ್ರಮವು ವಿದ್ಯಾರ್ಥಿಗಳ ಶಿಕ್ಷಣ ಹಕ್ಕಿಗೆ ಧಕ್ಕೆಯುಂಟುಮಾಡಲಿದೆ’ ಎಂದು ಆತಂಕ ವ್ಯಕ್ತಪಡಿಸಿದೆ.
‘ಇನ್ನೊಂದೆಡೆ, ದುಬಾರಿ ಅರ್ಜಿ ಶುಲ್ಕಗಳಿಂದ ನಿರುದ್ಯೋಗಿ ಯುವಕರು ಸಂಕಷ್ಟ ಅನುಭವಿಸುತ್ತಿದ್ದು, ಅರ್ಜಿ ಶುಲ್ಕ ರದ್ದುಪಡಿಸಿ ಪರೀಕ್ಷೆ ಹಾಗೂ ಸಂದರ್ಶನಗಳಿಗೆ ಉಚಿತ ಸಾರಿಗೆ ವ್ಯವಸ್ಥೆ ಕಲ್ಪಿಸಬೇಕು’ ಎಂದು ಒತ್ತಾಯಿಸಿದೆ.
ಇದನ್ನು ಓದಿದ್ದೀರಾ? ಯಾದಗಿರಿ | ಕಕ್ಕೇರಾದಲ್ಲಿ ವಾತ್ಸಲ್ಯ ಮನೆ ಹಸ್ತಾಂತರ ಕಾರ್ಯಕ್ರಮ
‘ಪ್ರತಿ ವರ್ಷ ಖಾಲಿಯಾಗುವ ಹುದ್ದೆಗಳ ಭರ್ತಿಗೆ ವಾರ್ಷಿಕ ಕ್ಯಾಲೆಂಡರ್ ಪ್ರಕಟಿಸುವುದು, ನೇಮಕಾತಿ ಪ್ರಕ್ರಿಯೆಯಲ್ಲಿ ಪಾರದರ್ಶಕತೆ ಕಾಪಾಡುವುದು ಹಾಗೂ ಪರೀಕ್ಷಾ ಅಕ್ರಮಗಳನ್ನು ತಡೆಯುವಂತೆ’ ಆಗ್ರಹಿಸಿದರು.
ಈ ಸಂದರ್ಭದಲ್ಲಿ ಸಂಘಟನೆಯ ರಾಜ್ಯ ಉಪಾಧ್ಯಕ್ಷ ಚನ್ನಬಸವ ಜಾನೇಕಲ್, ಮಂಜುನಾಥ್, ಶರಣಗೌಡ, ಹನುಮಂತ, ರಮೇಶ್, ರೆಡ್ಡಿ, ಪ್ರಕಾಶ್, ಹೊನ್ನಯ್ಯ, ಬೀರಲಿಂಗ ಸೇರಿದಂತೆ ಹಲವರು ಉಪಸ್ಥಿತರಿದ್ದರು.





