ರಾಜ್ಯದ ವಿವಿಧ ಜಿಲ್ಲೆಗಳ ನ್ಯಾಯಾಲಯಗಳಿಗೆ ಬಾಂಬ್ ಬೆದರಿಕೆ ಸಂದೇಶ ಬಂದಿರುವ ಹಿನ್ನೆಲೆ ಸೋಮವಾರ ಯಾದಗಿರಿ ನಗರದಲ್ಲಿ ಭದ್ರತಾ ವ್ಯವಸ್ಥೆಯನ್ನು ಗಟ್ಟಿಗೊಳಿಸಿ ಪ್ರಮುಖ ಜನಸಂದಣಿ ಸ್ಥಳಗಳಲ್ಲಿ ಕಟ್ಟು ನಿಟ್ಟಿನ ತಪಾಸಣೆ ನಡೆಸಲಾಯಿತು.
ಪೊಲೀಸ್ ಇಲಾಖೆ, ಬಾಂಬ್ ನಿಷ್ಕ್ರಿಯ ದಳ ಹಾಗೂ ಶ್ವಾನ ದಳ ಸಿಬ್ಬಂದಿ ನಗರ ವ್ಯಾಪ್ತಿಯ ವಿವಿಧ ಭಾಗಗಳಲ್ಲಿ ವ್ಯಾಪಕ ಪರಿಶೀಲನೆ ಕೈಗೊಂಡರು. ವಿಶೇಷವಾಗಿ ಯಾದಗಿರಿ ಬಸ್ ನಿಲ್ದಾಣ, ಯಾದಗಿರಿ ರೈಲ್ವೆ ನಿಲ್ದಾಣ ಹಾಗೂ ಜಿಲ್ಲಾ ನ್ಯಾಯಾಲಯ ಆವರಣ ಸೇರಿದಂತೆ ಜನಸಂದಣಿ ಪ್ರದೇಶಗಳಲ್ಲಿ ಭದ್ರತಾ ತಪಾಸಣೆ ನಡೆಸಲಾಯಿತು.
ಶ್ವಾನ ದಳದ ಸಹಾಯದಿಂದ ಪ್ರಯಾಣಿಕರ ಲಗೇಜ್‌ಗಳನ್ನು ಸೂಕ್ಷ್ಮವಾಗಿ ಪರಿಶೀಲಿಸಲಾಯಿತು. ಅನುಮಾನಾಸ್ಪದ ವಸ್ತುಗಳ ಮೇಲೆ ವಿಶೇಷ ಗಮನ ಹರಿಸಲಾಗಿದ್ದು, ಸಾರ್ವಜನಿಕರ ಸುರಕ್ಷತೆ ದೃಷ್ಟಿಯಿಂದ ಮುನ್ನೆಚ್ಚರಿಕಾ ಕ್ರಮವಾಗಿ ತಪಾಸಣೆ ಕೈಗೊಳ್ಳಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಇದಲ್ಲದೆ, ಮಂಗಳವಾರ ನಾರಾಯಣಪುರ ಜಲಾಶಯ ಸೇರಿದಂತೆ ಜಿಲ್ಲೆಯ ಇತರೆ ಪ್ರಮುಖ ಸ್ಥಳಗಳಿಗೆ ಬಾಂಬ್ ನಿಷ್ಕ್ರಿಯ ದಳದ ತಂಡ ಭೇಟಿ ನೀಡಿ ಭದ್ರತಾ ಪರಿಶೀಲನೆ ನಡೆಸಲಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಇದನ್ನು ಓದಿದ್ದೀರಾ? ಕಲಬುರಗಿ | ಮದುವೆ ಮೆರವಣಿಗೆಯಲ್ಲಿ ಮಾರಕಾಸ್ತ್ರ ಪ್ರದರ್ಶನ; ಮೂವರ ಬಂಧನ
ಸಾರ್ವಜನಿಕರು ಆತಂಕಗೊಳ್ಳದೆ, ಅನುಮಾನಾಸ್ಪದ ವಸ್ತುಗಳು ಅಥವಾ ಚಟುವಟಿಕೆಗಳ ಬಗ್ಗೆ ತಕ್ಷಣ ಪೊಲೀಸ್ ಇಲಾಖೆಗೆ ಮಾಹಿತಿ ನೀಡುವಂತೆ ಅಧಿಕಾರಿಗಳು ಮನವಿ ಮಾಡಿದ್ದಾರೆ.





