ಮಹಾನ್ ಯೋಗಿ ವೇಮನರ ಜಯಂತಿಯನ್ನು ಹುಣಸಗಿ ತಾಲೂಕ ಆಡಳಿತದ ವತಿಯಿಂದ ಸೋಮವಾರ ತಹಶೀಲ್ದಾರ್ ಕಾರ್ಯಾಲಯದಲ್ಲಿ ಸರಳವಾಗಿ ಹಾಗೂ ಅರ್ಥಪೂರ್ಣವಾಗಿ ಆಚರಿಸಲಾಯಿತು.
ಕಾರ್ಯಕ್ರಮದ ಪ್ರಾಸ್ತಾವಿಕವಾಗಿ ಶಿರಸ್ತೇದಾರರಾದ ರಂಗಪ್ಪ ನಾಯಕ ಮಾತನಾಡಿ, ‘ಯೋಗಿ ವೇಮನರ ಜೀವನ ಆದರ್ಶಗಳು ಪ್ರತಿಯೊಬ್ಬರಿಗೂ ಮಾರ್ಗದರ್ಶಕವಾಗಿವೆ. ಮಾನವೀಯ ಮೌಲ್ಯಗಳನ್ನು ಬೆಳೆಸುವ ಅವರ ವಚನಗಳು ಸಮಾಜ ಪರಿವರ್ತನೆಗೆ ದಿಕ್ಕು ತೋರಿಸುತ್ತಿದ್ದು, ಅವುಗಳನ್ನು ನಮ್ಮ ದೈನಂದಿನ ಜೀವನದಲ್ಲಿ ಅಳವಡಿಸಿಕೊಳ್ಳಬೇಕು’ ಎಂದು ಹೇಳಿದರು.
ಮುಖ್ಯ ಅತಿಥಿಯಾಗಿ ವಿಕಲಚೇತನರ ಹಕ್ಕುಗಳ ಒಕ್ಕೂಟದ ಅಧ್ಯಕ್ಷರಾದ ಸಂಗನಗೌಡ ಧನರಡ್ಡಿ ರಾಜನಕೋಳೂರ ಮಾತನಾಡಿ, ‘ವೇಮನರ ಧರ್ಮ ಮಾನವತೆಯ ಧರ್ಮವಾಗಿದೆ. ಅವರ ಚಿಂತನೆ ಉತ್ಕೃಷ್ಟವಾಗಿದ್ದು, ದೃಷ್ಟಿಕೋನ ವಿಶಾಲವಾಗಿತ್ತು. ‘ಉದಾರ ಚರಿತಾನಾಂ ವಸುಧೈವ ಕುಟುಂಬಕಂ’ ಎಂಬ ತತ್ವದಂತೆ ವಿಶ್ವಮಾನವತೆಯ ಸಂದೇಶ ಸಾರಿದ ಮಹಾನ್ ಚಿಂತಕರಾಗಿದ್ದರು’ ಎಂದು ಹೇಳಿದರು.
‘ಮನುಷ್ಯನ ದುರಾಸೆ ಹಾಗೂ ತಪ್ಪು ಆಲೋಚನೆಗಳನ್ನು ತೊಡೆದು ಹಾಕುವಲ್ಲಿ ವೇಮನರ ವಚನಗಳು ಮಾರ್ಗದರ್ಶಕವಾಗಿವೆ. ಸಮಾಜದಲ್ಲಿ ಮಹನೀಯರ ಆದರ್ಶಗಳನ್ನು ಅಳವಡಿಸಿಕೊಂಡು ಉತ್ತಮ ಪ್ರಜೆಗಳಾಗಿ ಬದುಕುವುದು ನಮ್ಮ ಕರ್ತವ್ಯ’ ಎಂದು ಅವರು ತಿಳಿಸಿದರು.
‘ಇದಲ್ಲದೆ, ಕೊಂಡವೀಡು ಪಟ್ಟಣದಲ್ಲಿ ಜನಿಸಿ ರಾಯಲಸೀಮೆ ಪ್ರದೇಶದಲ್ಲಿ ಸಂಚರಿಸುತ್ತಾ ತಮ್ಮ ಚಿಂತನೆಗಳನ್ನು ಜನರಲ್ಲಿ ಹರಡಿದ ವೇಮನರು ಕ್ರಿ.ಶ. 1480ರಲ್ಲಿ ಪರಮಾತ್ಮನಲ್ಲಿ ಲೀನರಾದರು ಎಂಬ ಐತಿಹಾಸಿಕ ಮಾಹಿತಿಯನ್ನೂ’ ಅವರು ಹಂಚಿಕೊಂಡರು.
ಇದನ್ನು ಓದಿದ್ದೀರಾ? ಕಲಬುರಗಿ | ನದಿಗೆ ಹಾರಿದ್ದ ಯುವತಿ ಮೃತದೇಹ ಪತ್ತೆ; ನಾಲ್ಕು ದಿನಗಳ ಶೋಧ ಕಾರ್ಯಾಚರಣೆ ಪೂರ್ಣ
ಈ ಸಂದರ್ಭದಲ್ಲಿ ಜಯ ಕರ್ನಾಟಕ ಜನಪರ ವೇದಿಕೆಯ ತಾಲೂಕ ಅಧ್ಯಕ್ಷ ಪ್ರಭುಗೌಡ ಪೋತರಡ್ಡಿ, ಮಲ್ಲನಗೌಡ ಅಮಲಿಹಾಳ ವಜ್ಜಲ್, ಸಿದ್ದನಗೌಡ ಗುರಡ್ಡಿ ವಜ್ಜಲ್, ಮಲ್ಲನಗೌಡ ಅರಿಕೇರಿ, ಪ್ರಭುಗೌಡ ಮೇಟಿ, ಮಹೇಶ್ ಕುಪ್ಪಿ, ಪ್ರಶಾಂತ ಪಾಟೀಲ ಚನ್ನೂರ, ಅನೀಲರಡ್ಡಿ ಗೆದ್ದಲಮರಿ, ಬಸನಗೌಡ ಚಿಂಚೋಳಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಆಡಳಿತ ಕಚೇರಿಯ ವೆಂಕಟೇಶ್ ಮರಾಠಗೇರಿ ಅವರು ಸ್ವಾಗತಿಸಿ ವಂದಿಸಿದರು.





