ಕರ್ನಾಟಕ ಸರ್ಕಾರದ ಕೆಪಿಎಸ್ ಮ್ಯಾಗ್ನೆಟ್ ಯೋಜನೆ ಅಡಿಯಲ್ಲಿ ಮೈಲಾಪುರ ಗ್ರಾಮದ ಸರ್ಕಾರಿ ಶಾಲೆಯನ್ನು ಮುಚ್ಚಿ ಅರಕೆರೆ (ಕೆ) ಶಾಲೆಗೆ ಸೇರ್ಪಡೆಗೊಳಿಸುವ ನಿರ್ಧಾರವನ್ನು ವಿರೋಧಿಸಿ ಎಐಡಿಎಸ್‌ಒ ನೇತೃತ್ವದಲ್ಲಿ ಗ್ರಾಮಸ್ಥರು ಸೋಮವಾರ ಪ್ರತಿಭಟನೆ ನಡೆಸಿದರು.
ಪ್ರತಿಭಟನೆಯನ್ನು ಉದ್ದೇಶಿಸಿ ಎಐಡಿಎಸ್ಒ ಜಿಲ್ಲಾ ಸಂಚಾಲಕರಾದ ಶಿಲ್ಪಾ ಬಿ.ಕೆ ಮಾತನಾಡಿ, ‘ಶಿಕ್ಷಣ ಸಚಿವರು ಒಂದೇ ಒಂದು ಸರ್ಕಾರಿ ಶಾಲೆಯನ್ನು ಮುಚ್ಚುವುದಿಲ್ಲ ಎಂದು ಹೇಳುತ್ತಲೇ ಇದ್ದರೂ, ಅಕ್ಟೋಬರ್ 15ರಂದು ಹೊರಡಿಸಿದ ಸರ್ಕಾರದ ನಡವಳಿಯು ಇದಕ್ಕೆ ವಿರುದ್ಧವಾಗಿದೆ. ಈ ನಡವಳಿಗೆ ರಾಜ್ಯದಾದ್ಯಂತ ತೀವ್ರ ವಿರೋಧ ವ್ಯಕ್ತವಾಗಿದ್ದರೂ ಸರ್ಕಾರ ಇನ್ನೂ ಹಿಂಪಡೆದಿಲ್ಲ’ ಎಂದು ಆರೋಪಿಸಿದರು.

‘ಸರ್ಕಾರದ ಈ ನೀತಿ ಕೇವಲ ಸರ್ಕಾರಿ ಶಾಲೆಗಳನ್ನು ಮುಚ್ಚುವಷ್ಟೇ ಅಲ್ಲ, ಖಾಸಗಿ ಶಾಲೆಗಳಿಗೆ ಉತ್ತೇಜನ ನೀಡುವ ಉದ್ದೇಶ ಹೊಂದಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು. ಉನ್ನತೀಕರಣದ ಹೆಸರಿನಲ್ಲಿ ಸ್ಥಾಪಿಸಲಾಗುತ್ತಿರುವ ಕೆಪಿಎಸ್ ಮ್ಯಾಗ್ನೆಟ್ ಶಾಲೆಗಳ ಉಸ್ತುವಾರಿಯನ್ನು ಹೊರಗುತ್ತಿಗೆ ನೀಡಲು ಸರ್ಕಾರ ಮುಂದಾಗಿದೆ. ಮುಚ್ಚಲಾದ ಶಾಲೆಗಳ ಕಟ್ಟಡಗಳನ್ನು ಖಾಸಗಿ ಸಂಘ–ಸಂಸ್ಥೆಗಳಿಗೆ ನೀಡುವ ಹುನ್ನಾರ ನಡೆಯುತ್ತಿದೆ. ಇದು ಶಿಕ್ಷಣದ ಸಂಪೂರ್ಣ ಖಾಸಗೀಕರಣ ಹಾಗೂ ವ್ಯಾಪಾರೀಕರಣಕ್ಕೆ ದಾರಿ ಮಾಡಿಕೊಡಲಿದೆ’ ಎಂದರು.
‘ಡಿಸೆಂಬರ್ 30ರಂದು ಹೊರಡಿಸಿದ ನಡವಳಿಯ ಪ್ರಕಾರ, ಕೌಶಲ್ಯ ಆಧಾರಿತ ಶಿಕ್ಷಣದ ಹೆಸರಿನಲ್ಲಿ ಮಕ್ಕಳನ್ನು ಹಣತೆ ಮಾಡುವುದು, ಮಡಿಕೆ ತಯಾರಿಸುವುದು, ಅಡಿಕೆ ಸುಲಿಯುವುದು ಸೇರಿದಂತೆ ಕೂಲಿ ಕೆಲಸಗಳಿಗೆ ತೊಡಗಿಸುವ ಅಪಾಯಕಾರಿ ನೀತಿ ಅಳವಡಿಸಲಾಗುತ್ತಿದೆ ಎಂದು ಅವರು ಆತಂಕ ವ್ಯಕ್ತಪಡಿಸಿದರು. ಗಣಿತ, ವಿಜ್ಞಾನ, ಸಮಾಜ ವಿಜ್ಞಾನಗಳಂತಹ ಸಮಗ್ರ ಜ್ಞಾನದಿಂದ ಮಕ್ಕಳನ್ನು ದೂರವಿಟ್ಟು, ಕೂಲಿ ಕಾರ್ಮಿಕರ ಮಕ್ಕಳನ್ನು ಕೂಲಿ ಕಾರ್ಮಿಕರನ್ನಾಗಿಯೇ ರೂಪಿಸುವ ಶಿಕ್ಷಣ ನೀತಿ ಇದು’ ಎಂದು ಟೀಕಿಸಿದರು.
ಇದನ್ನು ಓದಿದ್ದೀರಾ? ಕಲಬುರಗಿ | ಸ್ವಾಮಿನಾಥನ್ ವರದಿ ಜಾರಿಗೆ ಒತ್ತಾಯ; ಡಿಸಿ ಕಚೇರಿ ಎದುರು ಎತ್ತಿನಬಂಡಿ, ಟ್ರಾಕ್ಟರ್‌ಗಳೊಂದಿಗೆ ರೈತರ ಧರಣಿ
ಪ್ರತಿಭಟನೆಯಲ್ಲಿ ಎಐಡಿಎಸ್ಓ ರಾಜ್ಯ ಸಮಿತಿ ಸದಸ್ಯ ನಾಗರಾಜ್, ಸ್ಥಳೀಯ ಶಾಲಾ ವಿದ್ಯಾರ್ಥಿಗಳು, ಪೋಷಕರು ಹಾಗೂ ಗ್ರಾಮಸ್ಥರು ಭಾಗವಹಿಸಿದ್ದರು.





