ಶಹಾಪುರ ತಾಲೂಕಿನ ಗೋಗಿ (ಕೆ) ಗ್ರಾಮದ ದಲಿತ ಮಹಿಳೆ ಜಯಮ್ಮ ಪರಶುರಾಮ ಅವರ ಸಂಶಯಾಸ್ಪದ ಸಾವು ಆತ್ಮಹತ್ಯೆಯಲ್ಲ, ಅತ್ಯಾಚಾರ ನಡೆಸಿ ಕೊಲೆ ಮಾಡಲಾಗಿದೆ ಎಂದು ಆರೋಪಿಸಿ, ಆರೋಪಿಗಳನ್ನು ತಕ್ಷಣ ಬಂಧಿಸಬೇಕೆಂದು ಒತ್ತಾಯಿಸಿ ಸೋಮವಾರ ಶಹಾಪುರ ಬಸವೇಶ್ವರ ನಗರದಲ್ಲಿ ರಸ್ತೆ ತಡೆ ಪ್ರತಿಭಟನೆ ನಡೆಯಿತು.
ಕರ್ನಾಟಕ ದಲಿತ ಸಂಘರ್ಷ ಸಮಿತಿ (ಸಂಯೋಜಕ), ದಲಿತ ಪರ ಸಂಘಟನೆಗಳ ಒಕ್ಕೂಟ, ವಿವಿಧ ರೈತ ಸಂಘಟನೆಗಳು, ಪ್ರಗತಿಪರ ಚಿಂತಕರು ಹಾಗೂ ಬುದ್ಧಿಜೀವಿಗಳ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ, ಪ್ರಕರಣವನ್ನು ಉದ್ದೇಶಪೂರ್ವಕವಾಗಿ ಮುಚ್ಚಿಹಾಕುವ ಯತ್ನ ನಡೆಯುತ್ತಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.
ಪ್ರತಿಭಟನೆಯ ನಂತರ ತಹಸೀಲ್ದಾರರ ಮುಖಾಂತರ ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಲಾಯಿತು. ಆರೋಪಿಗಳನ್ನು ಕೂಡಲೇ ಬಂಧಿಸಿ ಪಾರದರ್ಶಕ ತನಿಖೆ ನಡೆಸಬೇಕು. ಬೇಡಿಕೆಗಳು ಈಡೇರದಿದ್ದರೆ ಶಹಾಪುರ ತಾಲೂಕು ಸಂಪೂರ್ಣ ಬಂದ್ ಮಾಡಿ ಉಗ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಡಿಸೆಂಬರ್ 23, 2025ರಂದು ಹಣ ತೆಗೆಯಲು ಮಾಡಲು ಶಹಾಪುರದ ಬ್ಯಾಂಕ್‌ಗೆ ತೆರಳಿದ್ದ ಜಯಮ್ಮ ಅವರು ಕಾಣೆಯಾಗಿದ್ದು, ಮುಂದಿನ ದಿನ ಇಂದಿರಾ ನಗರದ ಹೊರವಲಯದಲ್ಲಿ ಜಾಲಿ ಗಿಡಕ್ಕೆ ನೇಣು ಹಾಕಿಕೊಂಡ ಸ್ಥಿತಿಯಲ್ಲಿ ಶವ ಪತ್ತೆಯಾಯಿತು. ಶವದ ಸ್ಥಿತಿ, ಗಾಯಗಳ ಸ್ವರೂಪ ಮತ್ತು ಘಟನೆ ನಡೆದ ಸ್ಥಳವನ್ನು ಗಮನಿಸಿದರೆ ಇದು ಆತ್ಮಹತ್ಯೆಯಲ್ಲ ಎಂದು ಸಂಘಟನೆಗಳು ಶಂಕೆ ವ್ಯಕ್ತಪಡಿಸಿವೆ.
ಪ್ರಕರಣದ ಬಗ್ಗೆ ಡಿಸೆಂಬರ್‌ನಲ್ಲಿಯೇ ಪೊಲೀಸ್ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರೂ ಯಾವುದೇ ಪರಿಣಾಮಕಾರಿ ಕ್ರಮ ಕೈಗೊಳ್ಳಲಾಗಿಲ್ಲ. ಈ ಪ್ರಕರಣದಲ್ಲಿ ನ್ಯಾಯ ದೊರಕಬೇಕು ಎಂಬುದು ಪ್ರತಿಭಟನಾಕಾರರ ಒತ್ತಾಯವಾಗಿದೆ.
ಇದನ್ನು ಓದಿದ್ದೀರಾ? ಕಲಬುರಗಿ | ರಾಜ್ಯದ ಅಭಿವೃದ್ಧಿಯ ಮತ್ತೊಂದು ಕಟು ಸತ್ಯವನ್ನು ಸಮಾಜದ ಗಮನಕ್ಕೆ ತರುವುದು ಅಗತ್ಯವಾಗಿದೆ : ಮುಬೀನ್ ಅಹಮದ್
ಈ ಸಂದರ್ಭದಲ್ಲಿ ಚೆನ್ನಪ್ಪ ಆನೆಗುಂದಿ, ಎಸ್ ಎಮ್ ಸಾಗರ, ಶರಣರೆಡ್ಡಿ ಹತ್ತಿಗೂಡೂರ್, ದಾವಲ್ ಸಾಬ್ ನದಾಫ್, ಮಾದೇವಪ್ಪ ದಿಗ್ಗಿ, ಶಿವಕುಮಾರ್ ದೊಡ್ಡಮನಿ, ಮಾನಪ್ಪ ಮುದ್ರಿಕಿ, ಭೀಮಶಂಕರ್ ಕಟ್ಟೆಮನಿ, ಹುಸನಪ್ಪ ಕಟ್ಟಿಮನಿ, ನಿಂಗಣ್ಣ ಕದ್ರಾಪುರ್, ಪರಶುರಾಮ್ ಪೂಜಾರಿ, ಚಂದನ್ ಗೌಡ, ಹಬಳ್ಳಿ ಮಾಂತೂ ಗೌಡ ಮದ್ರಕಿ, ಗುರುರಾಜ, ಸಂತೋಷ್ ಸಾಹುಕಾರ್, ಭೀಮಶoಕರ್ ವಡಗರಾ, ರಮೇಶ್ ಗಾಂಜಿ ಹಳಿಸಗರ, ದುರ್ಗಮ್ಮ ಕಟ್ಟಿಮನಿ ಹಳಿಸಾಗರ, ಸುಭಾಷ್ ಹೊತ್ತಪೇಠ್, ಇಸ್ಮೈಲ್ ತಿಮ್ಮಪುರಿ, ಸಂಗಮೇಶ್ ಕುಂಬಾರ್ ಸೇರಿದಂತೆ ಇನ್ನಿತರರು ಭಾಗವಹಿಸಿದರು.





