ಗಂಡನನ್ನು ಆತನ ಸ್ನೇಹಿತನೇ ಕಂಠಪೂರ್ತಿ ಮದ್ಯ ಕುಡಿಸಿ ಮುಖ್ಯ ಕಾಲುವೆಗೆ ತಳ್ಳಿ ಕೊಲೆ ಮಾಡಿದ್ದಾನೆ ಎಂದು ಆರೋಪಿಸಿ ಮೃತನ ಪತ್ನಿ ಗೋಗಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಸುರಪುರ ತಾಲ್ಲೂಕಿನ ಯಾಳಗಿ ಗ್ರಾಮದ ನಿವಾಸಿ ರಮೇಶ ನಿಂಗಣ್ಣ ಕೊಲೆಯಾದ ವ್ಯಕ್ತಿಯಾಗಿದ್ದು, ಆತನ ಪತ್ನಿ ಹೊನ್ನಮ್ಮ ಅವರು ನೀಡಿದ ದೂರಿನ ಮೇರೆಗೆ ಮಾಚಗುಂಡಾಳ ಗ್ರಾಮದ ಭರಮರೆಡ್ಡಿ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಹೊನ್ನಮ್ಮ ಅವರು ಜನವರಿ 27ರಂದು ಕೆಂಭಾವಿ ಪೊಲೀಸ್ ಠಾಣೆಯಲ್ಲಿ ಪತಿ ಕಾಣೆಯಾಗಿರುವ ಕುರಿತು ದೂರು ನೀಡಿದ್ದರು. ಪತಿ ತನ್ನ ಸ್ನೇಹಿತನೊಂದಿಗೆ ಕೆಂಭಾವಿಯ ಮುಖ್ಯ ಕಾಲುವೆಯಲ್ಲಿ ಈಜಾಡಲು ಹೋಗಿದ್ದ ವೇಳೆ ನೀರಿನಲ್ಲಿ ಕೊಚ್ಚಿಕೊಂಡು ಹೋಗಿರಬಹುದು ಅಥವಾ ಎಲ್ಲಿಗೋ ತೆರಳಿರಬಹುದು ಎಂದು ಶಂಕೆ ವ್ಯಕ್ತಪಡಿಸಿದ್ದರು.
ಈ ಮಧ್ಯೆ, ರಮೇಶ ಅವರ ಶವವು ಕರಕಳ್ಳಿ ಗ್ರಾಮದ ಸಮೀಪದ ಕಾಲುವೆಯಲ್ಲಿ ಪತ್ತೆಯಾಗಿದೆ. ತನಿಖೆಯ ವೇಳೆ ರಮೇಶ ಹಾಗೂ ಆತನ ಸ್ನೇಹಿತ ಭರಮರೆಡ್ಡಿ ನಡುವೆ ಹಿಂದಿನಿಂದಲೂ ವೈಷಮ್ಯ ಇರುವುದು ಬೆಳಕಿಗೆ ಬಂದಿದೆ. ಅನ್ಯ ವಿಚಾರಕ್ಕೆ ದ್ವೇಷ ಸಾಧಿಸಿಕೊಂಡಿದ್ದ ಭರಮರೆಡ್ಡಿ, ರಮೇಶನಿಗೆ ಕಂಠಪೂರ್ತಿ ಮದ್ಯ ಕುಡಿಸಿ ಕೆಂಭಾವಿ ಎಪಿಎಂಸಿ ಹಿಂಭಾಗದ ಮುಖ್ಯ ಕಾಲುವೆಗೆ ಈಜಾಡಲು ಕರೆದೊಯ್ದು ನೀರಿನಲ್ಲಿ ತಳ್ಳಿ ಕೊಲೆ ಮಾಡಿದ್ದಾನೆ ಎಂದು ಹೊನ್ನಮ್ಮ ಅವರು ದೂರಿನಲ್ಲಿ ಆರೋಪಿಸಿದ್ದಾರೆ.
ಇದನ್ನು ಓದಿದ್ದೀರಾ? ವಿಬಿ ಗ್ರಾಮ್ ಜಿ ಎಂದರೆ ನಿರುದ್ಯೋಗ ಗ್ಯಾರಂಟಿ : ಸಚಿವ ಪ್ರಿಯಾಂಕ್ ಖರ್ಗೆ
ಈ ಸಂಬಂಧ ಗೋಗಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆಯನ್ನು ಕೈಗೊಂಡಿದ್ದಾರೆ.





