ವಡಗೇರಾ ತಾಲ್ಲೂಕಿನ ಗೋನಾಲ ಗ್ರಾಮದಲ್ಲಿ ನಡೆದ ವೃದ್ಧನ ಹತ್ಯೆ ಪ್ರಕರಣಕ್ಕೆ ಬೆಚ್ಚಿಬೀಳಿಸುವ ತಿರುವು ಸಿಕ್ಕಿದ್ದು, ಆಸ್ತಿ ವಿವಾದ ಹಾಗೂ ವೈಯಕ್ತಿಕ ವೈಷಮ್ಯದ ಹಿನ್ನೆಲೆ ಮಗನೇ ಸುಪಾರಿ ನೀಡಿ ತಂದೆಯನ್ನು ಕೊಲೆ ಮಾಡಿಸಿದ ಪ್ರಕರಣ ಪೊಲೀಸ್ ತನಿಖೆಯಲ್ಲಿ ಬಹಿರಂಗವಾಗಿದೆ.
ಕೊಲೆಯಾದವರು ಹಂಪಣ್ಣ ಸಜ್ಜನ್ (76) ಎಂದು ಗುರುತಿಸಲಾಗಿದೆ. ಈ ಪ್ರಕರಣದಲ್ಲಿ ಅವರ ಮಗ ನರಸರೆಡ್ಡಿ ಸಜ್ಜನ್ (48) ಪ್ರಮುಖ ಆರೋಪಿ ಎಂದು ಪತ್ತೆಯಾಗಿದ್ದು, ಆಂಧ್ರಪ್ರದೇಶದ ಕರ್ನೂಲ್ ಜಿಲ್ಲೆಯ ರಾಚಮರ್ರಿ ಗ್ರಾಮದ ರಮೇಶ್ ನರಸಪ್ಪ (32), ಜಿ ವೀರೇಶ್ ಮುರಕಪ್ಪ (40), ಕೃಷ್ಣ ತಿಕ್ಕಯ್ಯ (28) ಹಾಗೂ ಎಂ ವೀರೇಶ್ ಉರಕುಂದಿ (26) ಸೇರಿದಂತೆ ಒಟ್ಟು ಐವರನ್ನು ಪೊಲೀಸರು ಬಂಧಿಸಿದ್ದಾರೆ.
ಮಾರ್ಚ್ 11ರ ರಾತ್ರಿ, ಗೋನಾಲ ಗ್ರಾಮದ ಹೊರವಲಯದಲ್ಲಿರುವ ಹೊಲದ ಮನೆಯಲ್ಲಿ ಒಂಟಿಯಾಗಿ ವಾಸಿಸುತ್ತಿದ್ದ ಹಂಪಣ್ಣ ಮೇಲೆ ಆರೋಪಿಗಳು ದಾಳಿ ನಡೆಸಿದ್ದಾರೆ. ಕುತ್ತಿಗೆಯನ್ನು ಬಿಗಿದು, ದೇಹದ ವಿವಿಧ ಭಾಗಗಳಿಗೆ, ವಿಶೇಷವಾಗಿ ತೊಡೆ ಭಾಗಕ್ಕೆ ಗಂಭೀರ ಗಾಯಗೊಳಿಸಿ ಕ್ರೂರವಾಗಿ ಹತ್ಯೆ ಮಾಡಲಾಗಿದೆ. ಘಟನೆ ಬಳಿಕ ಮೊದಲಿಗೆ ಶವವನ್ನು ಕಂಡು ಪೊಲೀಸರಿಗೆ ಮಾಹಿತಿ ನೀಡಿದ್ದವರೇ ಮಗ ನರಸರೆಡ್ಡಿ ಎಂಬುದು ಪ್ರಕರಣಕ್ಕೆ ಮತ್ತಷ್ಟು ಸಂಶಯ ಹುಟ್ಟಿಸಿತು.
ತನಿಖೆಯಲ್ಲಿ ಹೊರಬಂದ ಸಂಗತಿಗಳು
ಪ್ರಾರಂಭಿಕ ಹಂತದಲ್ಲಿ ಪ್ರಕರಣವನ್ನು ಆಸ್ತಿ ವಿವಾದದ ದೃಷ್ಟಿಯಿಂದ ಪರಿಶೀಲಿಸಿದ ಪೊಲೀಸರು, ಬಳಿಕ ಕುಟುಂಬದೊಳಗಿನ ಒಳಜಗಳ, ವೈಯಕ್ತಿಕ ಅಸಮಾಧಾನ ಹಾಗೂ ಹಳೆಯ ವೈಷಮ್ಯಗಳತ್ತ ಗಮನ ಹರಿಸಿದರು. ತನಿಖೆಯಲ್ಲಿ ಹಂಪಣ್ಣ ಅವರ ಜೀವನ ಶೈಲಿ, ಕುಟುಂಬದೊಳಗಿನ ಭಿನ್ನಾಭಿಪ್ರಾಯಗಳು ಹಾಗೂ ಹಿಂದಿನ ಘಟನೆಗಳ ಕುರಿತು ಹಲವು ಮಾಹಿತಿ ಹೊರಬಂದಿವೆ.
ಹಂಪಣ್ಣ ಅವರು ತಮ್ಮ ಆಸ್ತಿಯನ್ನು ಮೂರು ಮಕ್ಕಳಿಗೆ ಹಂಚಿಕೊಂಡಿದ್ದರೂ, ತಮ್ಮ ಬಳಿ ಸುಮಾರು 12 ಎಕರೆ ಜಮೀನು ಉಳಿಸಿಕೊಂಡು ಹೊಲದಲ್ಲೇ ಪ್ರತ್ಯೇಕವಾಗಿ ವಾಸಿಸುತ್ತಿದ್ದರು. ಸುಮಾರು ಹತ್ತು ವರ್ಷಗಳ ಹಿಂದೆ ಪತ್ನಿ ಮೃತಪಟ್ಟ ನಂತರ ಅವರು ಏಕಾಂಗಿಯಾಗಿ ಜೀವನ ಸಾಗಿಸುತ್ತಿದ್ದರು ಎನ್ನಲಾಗಿದೆ. ಈ ಅವಧಿಯಲ್ಲಿ ಅವರ ನಡೆ-ನುಡಿಗಳ ಬಗ್ಗೆ ಕುಟುಂಬದೊಳಗೆ ಅಸಮಾಧಾನ ಹೆಚ್ಚಾಗಿದ್ದುದಾಗಿ ತಿಳಿದುಬಂದಿದೆ.
ಆಸ್ತಿ ವಿವಾದವೇ ಮೂಲ ಕಾರಣ
ಹಂಪಣ್ಣ ಅವರು ತಮ್ಮ ಜಮೀನಿನ ಒಂದು ಭಾಗವನ್ನು ಕಡಿಮೆ ದರಕ್ಕೆ ಮಾರಾಟ ಮಾಡಿದ್ದ ವಿಚಾರಕ್ಕೆ ಸಂಬಂಧಿಸಿ ಕುಟುಂಬದೊಳಗೆ ಭಿನ್ನಾಭಿಪ್ರಾಯ ಉಂಟಾಗಿತ್ತು. ಈ ವಿಚಾರವಾಗಿ ಮಕ್ಕಳು ನ್ಯಾಯಾಲಯದ ಮೆಟ್ಟಿಲೇರಿದ್ದರೆಂಬ ಮಾಹಿತಿಯೂ ಲಭ್ಯವಾಗಿದೆ. ಇದರಿಂದ ಕುಟುಂಬದೊಳಗಿನ ಅಸಮಾಧಾನ ಮತ್ತಷ್ಟು ಗಾಢಗೊಂಡಿತ್ತು.
ಸುಪಾರಿ ಸಂಚು ಹೇಗೆ ರೂಪುಗೊಂಡಿತು?
ಪೊಲೀಸ್ ತನಿಖೆಯಲ್ಲಿ ಬಹಿರಂಗವಾದಂತೆ, ನರಸರೆಡ್ಡಿ ತನ್ನ ತಂದೆಯನ್ನು ಕೊಲೆ ಮಾಡಲು ಆಂಧ್ರಪ್ರದೇಶ ಮೂಲದ ನಾಲ್ವರನ್ನು ಸಂಪರ್ಕಿಸಿದ್ದಾನೆ. ಈ ನಾಲ್ವರು ಹಿಂದೆ ಹಂಪಣ್ಣನ ಜಮೀನಿನಲ್ಲಿ ಕೆಲಸ ಮಾಡಿದ್ದವರಾಗಿದ್ದು, ಹಳೆಯ ವೈಷಮ್ಯವೂ ಹೊಂದಿದ್ದರು.
ಈ ಹಿನ್ನೆಲೆ, ನರಸರೆಡ್ಡಿ ₹2.50 ಲಕ್ಷ ಸುಪಾರಿ ನೀಡಲು ಒಪ್ಪಂದ ಮಾಡಿಕೊಂಡಿದ್ದಾನೆ. ಹಣದ ಅವಶ್ಯಕತೆ ಹಾಗೂ ಹಳೆಯ ಸಿಟ್ಟಿನ ಕಾರಣಕ್ಕೆ ಆರೋಪಿಗಳು ಕೊಲೆ ಮಾಡಲು ಸಮ್ಮತಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಬಂಧನಕ್ಕೆ ದಾರಿ ಮಾಡಿದ ಡಿಜಿಟಲ್ ಸುಳಿವುಗಳು
ಘಟನೆ ನಡೆದ ದಿನ ರಾತ್ರಿ ಬೈಕ್ಗಳಲ್ಲಿ ಗೋನಾಲ ಗ್ರಾಮಕ್ಕೆ ಬಂದ ಆರೋಪಿಗಳು, ಕೊಲೆ ನಡೆಸಿ ಪರಾರಿಯಾಗಿದ್ದರು. ಬಳಿಕ ತಮ್ಮ ಸ್ವಗ್ರಾಮಗಳಿಗೆ ತೆರಳಿ ಯಾವುದೇ ಅನುಮಾನ ಬಾರದಂತೆ ಸಹಜವಾಗಿ ವರ್ತಿಸುತ್ತಿದ್ದರು.
ಆದರೆ ಪೊಲೀಸರು ಕಾಲ್ ಡೀಟೇಲ್ಸ್, ಮೊಬೈಲ್ ಡೇಟಾ ಹಾಗೂ ವಾಟ್ಸ್ಆಪ್ ಚಾಟ್ಗಳ ಪರಿಶೀಲನೆ ಮೂಲಕ ಪ್ರಕರಣವನ್ನು ಭೇದಿಸಿದರು. ಮೊದಲಿಗೆ ದೂರು ನೀಡಿದ್ದ ನರಸರೆಡ್ಡಿಯ ಮೇಲೆಯೇ ಅನುಮಾನ ವ್ಯಕ್ತವಾಗಿ, ವಿಚಾರಣೆಯಲ್ಲಿ ಆತನೇ ಸಂಚಿನ ಸೂತ್ರಧಾರನೆಂದು ಒಪ್ಪಿಕೊಂಡಿದ್ದಾನೆ. ನಂತರ ಉಳಿದ ಆರೋಪಿಗಳನ್ನೂ ಬಂಧಿಸಲಾಗಿದೆ.
ಇದನ್ನು ಓದಿದ್ದೀರಾ? ಯಾದಗಿರಿ | ಊರಿಗೆ ತೆರಳಲು ವಾಹನ ಸಿಕ್ಕಿಲ್ಲವೆಂದು ಸಾರಿಗೆ ಬಸ್ ಕದ್ದೊಯ್ದ ಚಾಲಕ!
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪೃಥ್ವಿಕ್ ಶಂಕರ್ ಪ್ರಕರಣಕ್ಕೆ ಸಂಬಂಧಿಸಿದಂತೆ ಇನ್ನಷ್ಟು ಅಂಶಗಳ ಕುರಿತು ತನಿಖೆ ಮುಂದುವರಿದಿದೆ ಎಂದು ತಿಳಿಸಿದ್ದಾರೆ. ಡಿವೈಎಸ್ಪಿ ಸುರೇಶ್ ನಾಯಕ ಮಾರ್ಗದರ್ಶನದಲ್ಲಿ ಸಿಪಿಐ ಸುನಿಲ್ ವಿ. ಮೂಲಿಮನಿ ಹಾಗೂ ಪಿಎಸ್ಐ ಮಹೆಬೂಬ್ ಅಲಿ ಅವರ ತಂಡ ಈ ಕಾರ್ಯಾಚರಣೆಯನ್ನು ಯಶಸ್ವಿಯಾಗಿ ನಡೆಸಿದೆ.





