ಸರ್ಕಾರಿ ಶಾಲೆಗಳನ್ನು ಮುಚ್ಚುವ ಕೆಪಿಎಸ್ ಮ್ಯಾಗ್ನೆಟ್ ಯೋಜನೆಯನ್ನು ವಿರೋಧಿಸಿ ಯಾದಗಿರಿ ಜಿಲ್ಲೆಯ ನಾಲ್ವಡಗಿ ಪಟ್ಟಣದ ಶಹಾಪುರ ಗೇಟ್ ಬಳಿ ಶುಕ್ರವಾರ ಎಐಡಿಎಸ್‌ಒ ಸಂಘಟನೆ ನೇತೃತ್ವದಲ್ಲಿ ಪೋಷಕರು ಹಾಗೂ ಗ್ರಾಮಸ್ಥರು ಪ್ರತಿಭಟನೆ ನಡೆಸಿದರು.
ಪ್ರತಿಭಟನೆಯನ್ನು ಉದ್ದೇಶಿಸಿ ಎಐಡಿಎಸ್‌ಒ ಜಿಲ್ಲಾ ಸಂಚಾಲಕಿ ಶಿಲ್ಪಾ ಬಿ ಕೆ ಮಾತನಾಡಿ, ‘ಕೆಪಿಎಸ್ ಮ್ಯಾಗ್ನೆಟ್ ಯೋಜನೆಯಡಿ ರಾಜ್ಯ ಸರ್ಕಾರ ಸುಮಾರು 40 ಸಾವಿರ ಸರ್ಕಾರಿ ಶಾಲೆಗಳನ್ನು ಮುಚ್ಚಲು ಮುಂದಾಗಿರುವುದು ಬಡ ಹಾಗೂ ಗ್ರಾಮೀಣ ಜನತೆಗೆ ವಿರುದ್ಧವಾದೆ. ರಾಜ್ಯಾದ್ಯಂತ ಪೋಷಕರು, ಗ್ರಾಮಸ್ಥರು ಹಾಗೂ ಸಾಹಿತಿಗಳು ಈ ಯೋಜನೆಗೆ ವಿರೋಧ ವ್ಯಕ್ತಪಡಿಸುತ್ತಿದ್ದಾರೆ’ ಎಂದರು.
‘ಒಂದೇ ಒಂದು ಮಗು ಇದ್ದರೂ ಶಾಲೆ ಮುಚ್ಚುವುದಿಲ್ಲ ಎಂಬ ಶಿಕ್ಷಣ ಸಚಿವರ ಹೇಳಿಕೆ ಕೇವಲ ಮಾತಿನ ಮಟ್ಟಕ್ಕೆ ಸೀಮಿತವಾಗಿದೆ. ಎಸ್‌ಡಿಎಂಸಿ ಅನುಮತಿ ಇಲ್ಲದೆ ಶಾಲೆ ವಿಲೀನಗೊಳ್ಳುವುದಿಲ್ಲ ಎಂಬ ಹೇಳಿಕೆಯೂ ಜನರನ್ನು ಮರುಳು ಮಾಡುವ ಪ್ರಯತ್ನವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಯೋಜನೆ ರೂಪಿಸುವ ಮೊದಲು ಶಿಕ್ಷಕರು, ಪೋಷಕರು ಹಾಗೂ ವಿದ್ಯಾರ್ಥಿ ಸಂಘಟನೆಗಳೊಂದಿಗೆ ಯಾವುದೇ ಚರ್ಚೆ ನಡೆಸಿಲ್ಲ’ ಎಂದು ದೂರಿದರು.
‘ಎಡಿಬಿ ಬ್ಯಾಂಕ್ ಸಾಲ, ಕೆಕೆಆರ್‌ಡಿಬಿ, ಮೈನಿಂಗ್ ಹಾಗೂ ಸಿಎಸ್‌ಆರ್ ನಿಧಿಗಳ ಮೂಲಕ ಯೋಜನೆ ಜಾರಿಗೊಳಿಸುತ್ತಿರುವುದರಿಂದ ಸರ್ಕಾರಿ ಅನುದಾನದ ಬಗ್ಗೆ ಸ್ಪಷ್ಟತೆ ಇಲ್ಲ. ಇದು ಶಿಕ್ಷಣದ ಖಾಸಗೀಕರಣದತ್ತ ಸಾಗುವ ಅಪಾಯಕಾರಿ ಕ್ರಮವಾಗಿದೆ. ಸರ್ಕಾರಕ್ಕೆ ಶಿಕ್ಷಣದ ಮೇಲಿನ ನಿಜವಾದ ಕಾಳಜಿ ಇದ್ದರೆ 61 ಸಾವಿರ ಖಾಲಿ ಶಿಕ್ಷಕರ ಹುದ್ದೆಗಳನ್ನು ಭರ್ತಿ ಮಾಡಬೇಕು, ಶಾಲೆಗಳಿಗೆ ಮೂಲಭೂತ ಸೌಲಭ್ಯಗಳನ್ನು ಒದಗಿಸಬೇಕು. ಶಾಲೆಗಳನ್ನು ಮುಚ್ಚುವ ಯಾವುದೇ ಪ್ರಯತ್ನವನ್ನು ಜನತೆ ಒಪ್ಪುವುದಿಲ್ಲ’ ಎಂದು ಎಚ್ಚರಿಕೆ ನೀಡಿದರು.
ಇದನ್ನು ಓದಿದ್ದೀರಾ? ಯಾದಗಿರಿ | ಮನರೇಗಾ ಕೂಲಿ ಕಾರ್ಮಿಕರಿಂದ ಹೊಸ ವರ್ಷದ ಸಂಭ್ರಮ
ಸಭೆಯ ಅಧ್ಯಕ್ಷತೆಯನ್ನು ರಾಜ್ಯ ಸಮಿತಿ ಸದಸ್ಯ ನಾಗರಾಜ್ ವಹಿಸಿದ್ದರು.
ಪ್ರತಿಭಟನೆಯಲ್ಲಿ ಮಲ್ಲಪ್ಪ, ಅಯ್ಯಪ್ಪ, ಮಾಳಿಂಗರಾಯ, ತಿಮ್ಮಪ್ಪ, ಮರೆಪ್ಪ ಸೇರಿದಂತೆ ನಾಲ್ವಡಗಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಮಕ್ಕಳು, ಪೋಷಕರು ಹಾಗೂ ಗ್ರಾಮಸ್ಥರು ಭಾಗವಹಿಸಿದ್ದರು.





