ಸಾಮಾಜಿಕ ಬಹಿಷ್ಕಾರಕ್ಕೆ ಮನನೊಂದು ಮಾಂಗಲ್ಯ ಸರ ತೆಗೆದಿಟ್ಟು ನದಿಗೆ ಹಾರಿ ಮಹಿಳೆಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಯಾದಗಿರಿ ಜಿಲ್ಲೆಯ ವಡಗೇರ ತಾಲೂಕಿನಲ್ಲಿ ನಡೆದಿದೆ.
ಜೋಳದಡಗಿ ಬ್ರಿಡ್ಜ್ ಕಂ ಬ್ಯಾರೇಜ್ ಮೇಲಿಂದ ಹಾರಿ ಮಹಿಳೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಯಾದಗಿರಿಯ ಹೊರ ಭಾಗದ ಗಿರಿನಗರದ ನಿವಾಸಿ ಕಮಲಮ್ಮ (42) ಆತ್ಮಹತ್ಯೆ ಮಾಡಿಕೊಂಡ ಮಹಿಳೆ.
ಮಹಿಳೆಯ ಪತಿ ನೀಡಿದ್ದ ದೂರಿನ ಮೇರೆಗೆ ಜೋಳದಡಗಿಯ ಅಮಲಪ್ಪ ಲಾಲಪ್ಪ, ಗಿರಿನಗರದ ಹುಚ್ಚಪ್ಪ ಅಗನಪ್ಪ, ಶಿವಣ್ಣ ಹಣಮಂತ, ಗೌಡಪ್ಪ ಅಗನಪ್ಪ ಮತ್ತು ಸುರೇಶ ಲಾಲಪ್ಪ ವಿರುದ್ಧ ವಡಗೇರಾ ಪೊಲೀಸ್ ಠಾಣೆಯಲ್ಲಿ ಭಾನುವಾರ ಪ್ರಕರಣ ದಾಖಲಾಗಿದೆ.
ಕಮಲಮ್ಮ ಅವರ ಪುತ್ರ ವಿರುದ್ಧ ವಿವಾಹೇತರ ಸಂಬಂಧ ಬೆಳೆಸಿದ್ದಾರೆ ಎಂದು ಆರೋಪಿಸಿ ತಮ್ಮದೇ ಸಮಾಜದ ಮುಖಂಡರಿಂದ ಇಡೀ ಕುಟುಂಬಸ್ಥರಿಗೆ ಸಾಮಾಜಿಕ ಬಹಿಷ್ಕಾರ ಹಾಕಲಾಗಿದೆ. ಇದೆ ಕಾರಣಕ್ಕೆ ಕಮಲಮ್ಮ ನೊಂದುಕೊಂಡು, ಮಗಳ ಊರಾದ ಜೋಳದಡಗಿ ಗ್ರಾಮಕ್ಕೆ ಹೋಗಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.





