ದ್ವಿತೀಯ ಪಿಯುಸಿ ವಿದ್ಯಾರ್ಥಿನಿಯೊಬ್ಬಳು ವಸತಿ ನಿಲಯದ ಕೋಣೆಯಲ್ಲಿ ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ಮೃತದೇಹ ಪತ್ತೆಯಾದ ಘಟನೆ ಶುಕ್ರವಾರ ಬೆಳಿಗ್ಗೆ ಪಟ್ಟಣದಲ್ಲಿ ಬೆಳಕಿಗೆ ಬಂದಿದೆ.
ಮೃತ ವಿದ್ಯಾರ್ಥಿನಿಯನ್ನು ಸ್ವಾತಿ ಶರಣುಗೌಡ (18) ಎಂದು ಗುರುತಿಸಲಾಗಿದೆ. ಅವರು ಗುರುಮಠಕಲ್ ತಾಲ್ಲೂಕಿನ ನಂದೇಪಲ್ಲಿ ಗ್ರಾಮದ ನಿವಾಸಿಯಾಗಿದ್ದು, ಪಟ್ಟಣದ ಖಾಸಗಿ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ವ್ಯಾಸಂಗ ಮಾಡುತ್ತಿದ್ದ, ಮೃತ ಸ್ವಾತಿ ಡಿ. ದೇವರಾಜ ಅರಸು ಸರ್ಕಾರಿ ಮೆಟ್ರಿಕ್ ನಂತರದ ಬಾಲಕಿಯರ ವಿದ್ಯಾರ್ಥಿನಿ ನಿಲಯದಲ್ಲಿ ವಾಸವಾಗಿದ್ದರು.
ವಿದ್ಯಾರ್ಥಿನಿ ನಿಲಯದ ಮೊದಲ ಅಂತಸ್ತಿನ ಕೋಣೆಯ ಕಿಟಕಿಗೆ ನೇಣು ಬಿಗಿದ ಸ್ಥಿತಿಯಲ್ಲಿ ಸ್ವಾತಿಯ ಮೃತದೇಹ ಪತ್ತೆಯಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಶುಕ್ರವಾರ ಬೆಳಿಗ್ಗೆ ಉಪಹಾರಕ್ಕೆ ಕರೆ ಮಾಡಿದಾಗ ಸ್ವಾತಿ ಹೊರಗೆ ಬರಲಿಲ್ಲ. ‘ನಾಳೆಯ ಪರೀಕ್ಷೆಗೆ ಸಿದ್ಧತೆ ಮಾಡಿಕೊಳ್ಳುತ್ತಿದ್ದೇನೆ. ನಂತರ ಉಪಹಾರ ಅಥವಾ ಊಟ ಮಾಡುತ್ತೇನೆ’ ಎಂದು ಹೇಳಿ ಕೋಣೆಯೊಳಗೆ ಬಾಗಿಲು ಹಾಕಿಕೊಂಡಿದ್ದಾಳೆ ಎಂದು ತಿಳಿದುಬಂದಿದೆ.
ಕೆಲ ಸಮಯದ ಬಳಿಕ ಸ್ವಾತಿಯ ಪೋಷಕರು ಆಕೆಯ ಸಹಪಾಠಿಗಳಿಗೆ ಕರೆ ಮಾಡಿದ್ದು, ಕೋಣೆಯ ಬಳಿ ಹೋಗಿ ಬಾಗಿಲು ತಟ್ಟಿದರೂ ಪ್ರತಿಕ್ರಿಯೆ ದೊರಕಲಿಲ್ಲ. ಬಳಿಕ ಬಾಗಿಲಿನ ಮೇಲ್ಭಾಗದ ಕಿಟಕಿಯ ಗಾಜು ಒಡೆದು ಮೊಬೈಲ್ ಮೂಲಕ ಒಳಗೆ ನೋಡಿದಾಗ ಸ್ವಾತಿ ನೇಣು ಬಿಗಿದ ಸ್ಥಿತಿಯಲ್ಲಿ ಕಾಣಿಸಿಕೊಂಡಿದ್ದಾರೆ. ತಕ್ಷಣವೇ ವಾರ್ಡನ್ ಅಂಬಾಬಾಯಿ ತಳವಾರ ಅವರಿಗೆ ಮಾಹಿತಿ ನೀಡಲಾಗಿದೆ.
ಇದನ್ನು ಓದಿದ್ದೀರಾ? ಕಲಬುರಗಿ | ಪೋಕ್ಸೊ ಪ್ರಕರಣ : ಅಪರಾಧಿಗೆ 20 ವರ್ಷ ಜೈಲು, ₹1.50 ಲಕ್ಷ ದಂಡ
ಘಟನೆಯ ಮಾಹಿತಿ ತಿಳಿದು ಜಿಲ್ಲಾ ಪಂಚಾಯಿತಿ ಸಿಇಒ ಲವೀಶ್ ಒರಡಿಯಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪೃಥ್ವಿಕ್ ಶಂಕರ್, ಹಿಂದುಳಿದ ವರ್ಗಗಳ ಡಿಡಿ ಸದಾಶಿವ ನಾರಾಯಣಕರ್, ತಹಶೀಲ್ದಾರ್ ಚನ್ನಮಲ್ಲಪ್ಪ ಘಂಟಿ, ತಾಲ್ಲೂಕು ಪಂಚಾಯಿತಿ ಇಒ ಅಂಬರೇಶ ಪಾಟೀಲ ಹಾಗೂ ಹಿಂದುಳಿದ ವರ್ಗಗಳ ಸಹಾಯಕ ನಿರ್ದೇಶಕ ಸಂತೋಷರೆಡ್ಡಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.





