ಯಾದಗಿರಿ ಜಿಲ್ಲೆಯ ಅನವಾರ ಗ್ರಾಮದಲ್ಲಿ ಸಾರಿಗೆ ಬಸ್ ನಿಲುಗಡೆ ವ್ಯವಸ್ಥೆ ಕಲ್ಪಿಸಬೇಕು ಎಂದು ಒತ್ತಾಯಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ (ಸಂಯೋಜಕ) ಜಿಲ್ಲಾ ಸಮಿತಿಯ ನೇತೃತ್ವದಲ್ಲಿ ಶಾಲಾ ಹಾಗೂ ಕಾಲೇಜು ವಿದ್ಯಾರ್ಥಿಗಳು ಸೋಮವಾರ ಜಿಲ್ಲಾ ಸಾರಿಗೆ ವಿಭಾಗೀಯ ನಿಯಂತ್ರಣಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ಮನವಿ ಸಲ್ಲಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ (ಸಂಯೋಜಕ) ಜಿಲ್ಲಾ ಸಮಿತಿಯ ಅಧ್ಯಕ್ಷ ಹತ್ತಿಗೂಡೂರ್ ಶರಣರೆಡ್ಡಿ ಮಾತನಾಡಿ, ‘ಸುರಪುರ-ಯಾದಗಿರಿ ಮುಖ್ಯ ರಸ್ತೆಗೆ ಹೊಂದಿಕೊಂಡಿರುವ ಅನವಾರ ಗ್ರಾಮದಲ್ಲಿ ಸಾರಿಗೆ ಬಸ್‌ಗಳು ನಿಲುಗಡೆ ಆಗದೇ ಇರುವುದರಿಂದ ವಿದ್ಯಾರ್ಥಿಗಳು ಪ್ರತಿದಿನ ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ ಎಂದು ಹೇಳಿದರು. ಈ ಸಮಸ್ಯೆಯಿಂದಾಗಿ ವಿದ್ಯಾರ್ಥಿಗಳು ಶಿಕ್ಷಣದಿಂದ ವಂಚಿತರಾಗುವ ಸ್ಥಿತಿ ನಿರ್ಮಾಣವಾಗಿದೆ’ ಎಂದು ಆತಂಕ ವ್ಯಕ್ತಪಡಿಸಿದರು.
‘ಅನವಾರ ಗ್ರಾಮದಿಂದ ಹತ್ತಿಗೂಡೂರ್ ಸರ್ಕಾರಿ ಪ್ರೌಢಶಾಲೆ, ಶಹಾಪುರ ಕಾಲೇಜು ಹಾಗೂ ಯಾದಗಿರಿ ಕಾಲೇಜಿಗೆ ತೆರಳುವ ವಿದ್ಯಾರ್ಥಿಗಳು ಬಸ್ ನಿಲುಗಡೆ ಇಲ್ಲದ ಕಾರಣ ಬಹಳಷ್ಟು ದೂರ ನಡೆದುಕೊಂಡು ಹೋಗುವ ಅನಿವಾರ್ಯತೆಗೆ ಒಳಗಾಗಿದ್ದಾರೆ. ಇದರಿಂದ ವಿದ್ಯಾರ್ಥಿಗಳ ಸಮಯ, ಸುರಕ್ಷತೆ ಹಾಗೂ ವಿದ್ಯಾಭ್ಯಾಸದ ಮೇಲೆ ದುಷ್ಪರಿಣಾಮ ಉಂಟಾಗುತ್ತಿದೆ’ ಎಂದು ಅವರು ಹೇಳಿದರು.
‘ತಕ್ಷಣವೇ ಅನವಾರ ಗ್ರಾಮದಲ್ಲಿ ಸಾರಿಗೆ ಬಸ್ ನಿಲುಗಡೆ ವ್ಯವಸ್ಥೆಯನ್ನು ಕಲ್ಪಿಸಬೇಕು. ಇಲ್ಲದಿದ್ದಲ್ಲಿ ಅನವಾರ ಗ್ರಾಮದ ವಿದ್ಯಾರ್ಥಿಗಳು ಹಾಗೂ ಕರ್ನಾಟಕ ದಲಿತ ಸಂಘರ್ಷ ಸಮಿತಿಯ ವತಿಯಿಂದ ರಸ್ತೆ ತಡೆ ಸೇರಿದಂತೆ ತೀವ್ರ ಹೋರಾಟ ನಡೆಸಲಾಗುವುದು’ ಎಂದು ಎಚ್ಚರಿಕೆ ನೀಡಲಾಯಿತು.
ಇದನ್ನು ಓದಿದ್ದೀರಾ? ಯಾದಗಿರಿ | ಖಾಲಿ ಹುದ್ದೆಗಳ ಭರ್ತಿಗೆ ಆಗ್ರಹಿಸಿ ಎಐಡಿವೈಒ ಸಹಿ ಸಂಗ್ರಹ ಅಭಿಯಾನ
ಈ ಸಂದರ್ಭದಲ್ಲಿ ಸಿದ್ದಪ್ಪ ಹೊಸ್ಮನಿ ಹಾಗೂ ವಿದ್ಯಾರ್ಥಿಗಳಾದ ಆಕಾಶ ದೊಡ್ಮನಿ, ರಾಮ ಪೂಜಾರಿ, ಸಾಬು ಗುತ್ತೇದಾರ್, ರಾಜು ಗುತ್ತೇದಾರ್, ಜೈ ಭೀಮ್ ಹೊಸಮನಿ, ಬೀರಲಿಂಗ ಪೂಜಾರಿ, ಅಯ್ಯಾಳಪ್ಪ, ಸೌಂದರ್ಯ, ಯಶೋಧ, ಸಾನಿಯಾ, ಅನುಶಿಯ, ಸವಿತಾ, ಅಕ್ಷತಾ, ಶ್ರೀದೇವಿ, ಮಹಾಲಿಂಗಮ್ಮ ಸೇರಿದಂತೆ ಹಲವರು ಉಪಸ್ಥಿತರಿದ್ದರು.





