ನಗರದ ರೈಲ್ವೆ ಸ್ಟೇಷನ್ ರಸ್ತೆ ಬದಿಯಲ್ಲಿ ನಿಲ್ಲಿಸಿದ್ದ ಕಾರಿನಿಂದ ₹14.50 ಲಕ್ಷ ನಗದು ಹಾಗೂ 35 ಗ್ರಾಂ ಚಿನ್ನಾಭರಣವನ್ನು ಕಳ್ಳರು ಕಳವು ಮಾಡಿಕೊಂಡು ಪರಾರಿಯಾದ ಘಟನೆ ನಡೆದಿದೆ.
ಬಳಿಚಕ್ರ ಗ್ರಾಮದ ನಿವಾಸಿ ಶರಣಪ್ಪ ಕೊನೆಮನಿ ಅವರು ನಗದು ಮತ್ತು ಚಿನ್ನಾಭರಣ ಕಳೆದುಕೊಂಡವರು. ಈ ಕುರಿತು ಅವರು ನೀಡಿದ ದೂರಿನ ಆಧಾರದ ಮೇಲೆ ಸಂಬಂಧಿಸಿದ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಪ್ರಸ್ತುತ ಬೆಂಗಳೂರಿನಲ್ಲಿ ವಾಸವಾಗಿರುವ ಶರಣಪ್ಪ ಕೊನೆಮನಿ ಅವರು ವ್ಯವಹಾರ ಸಂಬಂಧಿತ ಕಾರ್ಯಕ್ಕಾಗಿ ಕುಟುಂಬ ಸಮೇತ ಯಾದಗಿರಿಗೆ ಆಗಮಿಸಿದ್ದರು. ಈ ವೇಳೆ ಅವರು ಬ್ಯಾಂಕ್‌ನಿಂದ ₹9.50 ಲಕ್ಷ ಹಣವನ್ನು ಡ್ರಾ ಮಾಡಿಕೊಂಡಿದ್ದು, ತಮ್ಮ ಬಳಿ ಇದ್ದ ₹5 ಲಕ್ಷ ನಗದಿನೊಂದಿಗೆ ಕಾರಿನಲ್ಲಿ ಇಟ್ಟುಕೊಂಡಿದ್ದರು ಎನ್ನಲಾಗಿದೆ.
ಇದನ್ನು ಓದಿದ್ದೀರಾ? ಕಲಬುರಗಿ | ಚಲಿಸುತ್ತಿದ್ದ ರೈಲಿಗೆ ಸಿಲುಕಿ ಕೈಕಾಲು ಕಳೆದುಕೊಂಡ ಅನಾಮಧೇಯ ವ್ಯಕ್ತಿ
ರಸ್ತೆ ಬದಿಯಲ್ಲಿ ಕಾರನ್ನು ನಿಲ್ಲಿಸಿ ಬಟ್ಟೆ ಖರೀದಿ ಹಾಗೂ ಜ್ಯೂಸ್ ಕುಡಿಯಲು ತೆರಳಿದ್ದ ಸಮಯದಲ್ಲಿ, ಕಾರಿನೊಳಗಿದ್ದ ನಗದು ಹಾಗೂ ಚಿನ್ನಾಭರಣವನ್ನು ಕಳ್ಳರು ಕಳವು ಮಾಡಿಕೊಂಡಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.





